ದಾವಣಗೆರೆ, ನ.14: ಜಿಲ್ಲೆಯ (Davanagere) ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ಮಂಗನನ್ನು (Monkey Caught) ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅರಕೆರೆ ಗ್ರಾಮ ನಿವಾಸಿ ಗುತ್ಯಪ್ಪ (60) ಅವರು ಕೋತಿ ದಾಳಿಗೆ ನಿನ್ನೆ ಬಲಿಯಾಗಿದ್ದರು. ಮುಂಜಾನೆ ವೇಳೆ ಮನೆಯಿಂದ ಹೊರಗೆ ಬಂದಾಗ ಮಂಗ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಗುತ್ಯಪ್ಪ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ: Viral Video: ಹಗ್ಗ ಬಿಚ್ಚಿ ಕೋತಿಯನ್ನು ರಕ್ಷಿಸಿದವನನ್ನೇ ಅನುಮಾನಿಸಿದ ನೆಟ್ಟಿಗರು; ನೀವೇನಂತೀರಿ?
ಸ್ಥಳಕ್ಕೆ ಆಗಮಿಸಿದ್ದ ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ಮೃತನ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದರು. ಇದೇ ವೇಳೆ ಗ್ರಾಮಸ್ಥರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರಿಗೆ ಮಂಗನ ಹಾವಳಿಯ ಬಗ್ಗೆ ಮಾಹಿತಿ ನೀಡಿದ್ದರು.
ಮಂಗನ ದಾಳಿ ಬಗ್ಗೆ ಮಾಹಿತಿ ತಿಳಿದು ಗ್ರಾಮಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಕೋತಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಅದರಂತೆ, ಕಳೆದ ಎರಡುಗಳ ದಿನಗಳಿಂದ ಕಾರ್ಯಾಚರಣೆ ಆರಂಭಿಸಿದ್ದ ಅಧಿಕಾರಿಗಳು, ಸಿಬ್ಬಂದಿ ಗ್ರಾಮಸ್ಥರ ಸಹಾಯದೊಂದಿಗೆ ಇಂದು ಕೋತಿಯನ್ನು ಸೆರೆ ಹಿಡಿದಿದ್ದಾರೆ.
ಸದ್ಯ, ಕೋತಿಯನ್ನು ಹಿಡಿದು ಬೋನ್ನಲ್ಲಿ ಇಡಲಾಗಿದೆ. ಇತ್ತ, ಕಾಡಿನ ಪಕ್ಕ ಗ್ರಾಮ ಇರುವುದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಗ್ರಾಮಕ್ಕೆ ರಕ್ಷಣೆ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದೇ ವೇಳೆ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ