ದಾವಣಗೆರೆಯಲ್ಲಿ ಭೀಕರ ಬರ: ಬತ್ತಿ ಹೋದ ತುಂಗಭದ್ರೆ ಒಡಲಲ್ಲಿ ಮಕ್ಕಳ ಆಟ, ಹನಿ ನೀರಿಗೂ ಪರದಾಟ

| Updated By: ಆಯೇಷಾ ಬಾನು

Updated on: Mar 24, 2024 | 3:27 PM

ಹರಿಹರ ನಗರದ ಬಳಿಯ ತುಂಗಭದ್ರ ನದಿ ಸಂಪೂರ್ಣವಾಗಿ ಬತ್ತಿ ಹೋಗಿದೆ. ತುಂಗಭದ್ರ ನದಿ ಪಾತ್ರ ಮಕ್ಕಳಿಗೆ ಕ್ರಿಕೇಟ್ ಮೈದಾನವಾಗಿದೆ. ದಾವಣಗೆರೆ ಜಿಲ್ಲೆ ವ್ಯಾಪ್ತಿಯ ತುಂಗಭದ್ರ ನದಿ ಪಾತ್ರದ ವ್ಯಾಪ್ತಿಯಲ್ಲಿನ 80ಕ್ಕೂ ಹೆಚ್ಚು ಗ್ರಾಮಗಳ ಜನ, ಜಾನುವಾರುಗಳಿಗೆ ತೊಂದರೆಯಾಗಿದೆ.

ದಾವಣಗೆರೆಯಲ್ಲಿ ಭೀಕರ ಬರ: ಬತ್ತಿ ಹೋದ ತುಂಗಭದ್ರೆ ಒಡಲಲ್ಲಿ ಮಕ್ಕಳ ಆಟ, ಹನಿ ನೀರಿಗೂ ಪರದಾಟ
ತುಂಗಭದ್ರ ನದಿ
Follow us on

ದಾವಣಗೆರೆ, ಮಾರ್ಚ್​.24: ಐದು ದಶಕಗಳ ಬಳಿಕ‌ ಇದೀಗ ತುಂಗಭದ್ರ ನದಿ (Tungabhadra) ಒಡಲು ಬತ್ತಿ ಹೋಗಿದೆ. ತುಂಗಭದ್ರ ನದಿ ಹರಿಯುವುದನ್ನ ನಿಲ್ಲಿಸಿದೆ. ಸಂಪೂರ್ಣ ಖಾಲಿ ಖಾಲಿಯಾಗಿದೆ. ದಾವಣಗೆರೆ (Davanagere) ಜಿಲ್ಲೆಯ ಹರಿಹರ ನಗರದ ಬಳಿಯ ತುಂಗಭದ್ರ ನದಿ ಸಂಪೂರ್ಣವಾಗಿ ಬತ್ತಿ ಹೋಗಿದೆ. ತುಂಗಭದ್ರ ನದಿ ಪಾತ್ರ ಮಕ್ಕಳಿಗೆ ಕ್ರಿಕೇಟ್ ಮೈದಾನವಾಗಿದೆ. ದಾವಣಗೆರೆ ಜಿಲ್ಲೆ ವ್ಯಾಪ್ತಿಯ ತುಂಗಭದ್ರ ನದಿ ಪಾತ್ರದ ವ್ಯಾಪ್ತಿಯಲ್ಲಿನ 80ಕ್ಕೂ ಹೆಚ್ಚು ಗ್ರಾಮಗಳ ಜನ, ಜಾನುವಾರುಗಳಿಗೆ ತೊಂದರೆಯಾಗಿದೆ.

ದಾವಣಗೆರೆ ಹಾಗೂ ಹರಿಹರ ನಗರದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಬೆಣ್ಣೆನಗರಿಯಲ್ಲಿ ಕಾಲುವೆಗಳು ಖಾಲಿಯಾಗಿವೆ. ಎಲ್ಲೆಡೆ ನೀರಿಗೆ ಬರ ಆವರಿಸಿದೆ. ತೋಟಗಳಲ್ಲಿನ ಬೆಳೆಗಳು ಒಣಗುತ್ತಿವೆ. ರೊಚ್ಚಿಗೆದ್ದು ಕಾಲುವೆಗೆ ಇಳಿದು ರೈತರು ಆಕ್ರೋಶ ಹೊರ ಹಾಕಿದ್ದಾರೆ. ದಾವಣಗೆರೆ ನಗರದ ಕುಂದುವಾಡ ಬಳಿಯ ಭದ್ರಾ ಕಾಲುವೆಯಲ್ಲಿ ರೈತರು ಪ್ರತಿಭಟನೆ‌ ನಡೆಸುತ್ತಿದ್ದಾರೆ. ಚಾನೆಲ್ ಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರಾ ಡ್ಯಾಂನಿಂದ 14 ದಿನ ನೀರು ಬಿಟ್ಟಿದ್ದರು ಕಾಲುವೆಗೆ ನೀರು ಹರಿದಿಲ್ಲ. ಜನ, ಜಾನುವಾರು, ತೋಟಗಳಿಗೆ ನೀರು ಸಿಗುತ್ತಿಲ್ಲ. ಕುಡಿಯಲು ಸಹ ನೀರು ಇಲ್ಲದೆ ಜನ ಪರದಾಡುತ್ತಿದ್ದಾರೆ. 14 ದಿನ ಸತತ ನೀರು ಹರಿದರೆ ಜೀವ ಉಳಿಸಿಕೊಳ್ಳಬಹುದು ಎಂದು ರೈತರ ಕಣ್ಣೀರಿಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಬಗ್ಗೆ ಸಚಿವರು ಕಿಂಚಿತ್ತೂ ಕಾಳಜಿ ವಹಿಸಲ್ಲ. ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಗುಡುಗಿದ್ದಾರೆ. ನಾಳೆ ಒಳಗೆ ನೀರು ಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತರು ನಿರ್ಣಯ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕಾದಟು: ತಮಿಳುನಾಡು ಸಿಎಂ ಸ್ಟಾಲಿನ್​ ವಿರುದ್ಧ ವಾಟಾಳ್​​ ಗರಂ

ಬಣ್ಣದಾಟಕ್ಕೆ ಬರೆ ಎಳೆದ ಬರ

ಪ್ರತಿವರ್ಷ ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಹೋಳಿ ಹುಣ್ಣಿಮೆಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಅದರಲ್ಲೂ ಕೂಡಾ ಕಾಮಧಹನದ ಮಾರನೇ ದಿನ ನಡೆಯೋ ಬಣ್ಣದಾಟ ಸಂಭ್ರಮದಿಂದ ಕೂಡಿರುತ್ತದೆ. ಮಹಿಳೆಯರು, ಮಕ್ಕಳಿಂದ ಹಿಡಿದು ವೃದ್ದರವರೆಗೆ ಬಣ್ಣದಾಟವನ್ನು ಆಡಿ ಸಂಭ್ರಮಿಸುತ್ತಾರೆ. ಆದ್ರೆ ಈ ಬಾರಿ ಬಣ್ಣದಾಟಕ್ಕೆ ಬರ ಬರೆ ಎಳೆದಿದೆ. ಕೊಪ್ಪಳ ಜಿಲ್ಲೆಯ ಹಲವೆಡೆ ಇಂದೇ ಹೋಳಿ ಹುಣ್ಣಿಮೆಯನ್ನು ಆಚರಿಸಲಾಗುತ್ತಿದ್ದು, ಇಂದು ಜಿಲ್ಲೆಯ ಹಲವೆಡೆ ಹೋಳಿ ಹುಣ್ಣಮೆ ಅಂಗವಾಗಿ ಬಣ್ಣದಾಟವನ್ನು ಆಡಿ ಸಂಭ್ರಮಿಸಿದರು. ಆದ್ರೆ ಪ್ರತಿವರ್ಷ ಬಣ್ಣದಾಟಕ್ಕೆ ಹೆಚ್ಚಿನ ನೀರಿನ ಬಳಕೆಯಾಗುತ್ತಿತ್ತು. ಬ್ಯಾರಲ್ ಗಳಲ್ಲಿ ನೀರನ್ನು ತುಂಬಿಸಿ, ಅವುಗಳಿಗೆ ಬಣ್ಣವನ್ನು ಹಾಕಿ, ಬಣ್ಣದ ನೀರನ್ನು ಎರಚಿ ಅನೇಕರು ಸಂಭ್ರಮಿಸುತ್ತಿದ್ದರು. ಆದ್ರೆ ಈ ಬಾರಿ ಕೊಪ್ಪಳ ನಗರ ಸೇರಿದಂತೆ ಹಲವೆಡೆ ಕುಡಿಯುವ ನೀರಿಗೆ ತತ್ವಾರ ಆರಂಭವಾಗಿದೆ. ಹೀಗಾಗಿ ಜನರು ಸರಳವಾಗಿ ಬಣ್ಣದಾಟವನ್ನು ಆಡಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:27 pm, Sun, 24 March 24