
ದಾವಣಗೆರೆ, ಸೆಪ್ಟೆಂಬರ್ 27: ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಟ್ರಸ್ಟ್‌ನಲ್ಲಿ 10 ಕೋಟಿ ರೂ.ಗೂ ಅಧಿಕ ಸರ್ಕಾರಿ ಅನುದಾನ ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜಭವನ, ಆರೋಪದ ಬಗ್ಗೆ ತಕ್ಷಣವೇ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ (CS) ಸ್ಪಷ್ಟ ಸೂಚನೆ ನೀಡಿದೆ.
ಈ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭಾಕರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಮಠಕ್ಕೆ ಬಿಡುಗಡೆಯಾದ ಅನುದಾನದ ದುರುಪಯೋಗ ಮತ್ತು ಕಾಮಗಾರಿಗಳ ಅಕ್ರಮದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ರಾಜಭವನದ ಈ ನಡೆ ಮಠದ ಆಡಳಿತ ಮಂಡಳಿಯಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಹರಿಹರ ಪಂಚಮಸಾಲಿ ಮಠದಲ್ಲಿ ವಿದ್ಯಾರ್ಥಿ ನಿಲಯ (ಹಾಸ್ಟೆಲ್) ಹಾಗೂ ಸಮುದಾಯ ಭವನ ನಿರ್ಮಾಣಕ್ಕಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ರಾಜ್ಯ ಸರ್ಕಾರವು 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಈ ಸರ್ಕಾರಿ ಹಣವನ್ನು ಮಠದ ಟ್ರಸ್ಟ್ ದುರ್ಬಳಕೆ ಮಾಡಿಕೊಂಡಿದೆ ಮತ್ತು ಕಾಮಗಾರಿಗಳಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ‘ಪಂಚಮಸಾಲಿ ಮಠದ ಲೆಕ್ಕಕೊಡಿ ಚಳುವಳಿ’ ಅಧ್ಯಕ್ಷ ಎಂ.ಜಿ. ಪರಮೇಶ್ವರ ಗೌಡ ಹಾಗೂ ಹರಿಹರ ಕ್ಷೇತ್ರದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರು ರಾಜ್ಯಪಾಲರಿಗೆ ಅಧಿಕೃತ ದೂರು ಸಲ್ಲಿಸಿದ್ದರು. ಮಠಕ್ಕೆ ಬಂದ ಸರ್ಕಾರಿ ಅನುದಾನದ ಪಾರದರ್ಶಕ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದರು. ಇದೀಗ ದೂರಿನ ಗಂಭೀರತೆಯನ್ನು ಪರಿಗಣಿಸಿರುವ ರಾಜಭವನ, ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ