ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ಕಾರ್ ಪಲ್ಟಿಯಾಗಿ ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ(91) ಸಾವನ್ನಪ್ಪಿದ್ದಾರೆ. ಬಳ್ಳಾರಿ ಮೂಲದ ಬೆಳಗಲ್ಲು ವೀರಣ್ಣ ನಾಡೋಜ ಪ್ರಶಸ್ತಿ ಪುರಸ್ಕೃತರು. ಅಪಘಾತದಲ್ಲಿ ಬೆಳಗಲ್ಲು ವೀರಣ್ಣನವರ ಪುತ್ರ ಹನುಮಂತಪ್ಪಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಲ್ಲು ವೀರಣ್ಣ ಅವರು ‘ತೊಗಲು ಗೊಂಬೆ ಆಟ’ ಕಲೆಯ ಮೂಲಕ ತಮ್ಮದೆ ಛಾಪು ಮೂಡಿಸಿದ್ದರು.
ನಿನ್ನೆಯಷ್ಟೇ ಕಾರ್ ಸರ್ವೀಸ್ ಮಾಡಿಸಲಾಗಿತ್ತು. ಇಂದು ಬಳ್ಳಾರಿಯಿಂದ ಚಿಕ್ಕಮಗಳೂರಿಗೆ ಹೊರಟ ವೇಳೆ ಕಾರ್ ನ ಹಿಂಬದಿ ವೀಲ್ ನಲ್ಲಿ ತಾಂತ್ರಿಕ ದೋಷ ಕಾಣಿಸಿತ್ತು. ಚಳ್ಳಕೆರೆ ಪಟ್ಟಣ ತಲುಪಿದ ಬಳಿಕ ರಿಪೇರಿ ಮಾಡಿಸಿದರಾಯಿತು ಎಂದುಕೊಂಡಿದ್ದೆವು. ಹಿರೇಹಳ್ಳಿ ಬಳಿ ಏಕಾಏಕಿ ಕಾರ್ ವ್ಹೀಲ್ ಎಕ್ಸಲ್ ಕಳಚಿದ ಕಾರಣ ಕಾರ್ ಪಲ್ಟಿ ಆಗಿದ್ದು ದುರಂತ ಸಂಭವಿಸಿದೆ ಎಂದು ಮೃತರ ಪುತ್ರ, ಗಾಯಾಳು ಹನಹಮಂತಪ್ಪ ತಿಳಿಸಿದ್ದಾರೆ.
ನಾಡೋಜ ಬೆಳಗಲ್ಲು ವೀರಣ್ಣ ಅವರು ಅಮೆರಿಕಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶನ ನೀಡಿದ್ದಾರೆ. ಮೂಲತಃ ತೊಗಲು ಗೊಂಬೆಯಾಟದ ಕಲಾವಿದರಾದ ಇವರು ತೊಗಲು ಗೊಂಬೆಯಾಟದ ಹಿರಿಮೆಯನ್ನು ಸಪ್ತ ಸಾಗರದ ಆಚೆ ತಲುಪಿಸಿದ ಅಪರೂಪದ ಕಲಾವಿದರು. ಶ್ರೀರಾಮಾಂಜನೇಯ ತೊಗಲು ಗೊಂಬೆ ಕಲಾ ಮೇಳವನ್ನು ಕಟ್ಟಿ ಊರೂರು, ರಾಜ್ಯ, ದೇಶ, ವಿದೇಶ ಸುತ್ತಿದವರು. ವೀರಣ್ಣನವರು ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:26 am, Sun, 2 April 23