ದಾವಣಗೆರೆ: ಮುಖ್ಯಶಿಕ್ಷಕರ ಬೇಜವಾಬ್ದಾರಿಯಿಂದ ಶಾಲೆ ಮಕ್ಕಳು ಬಿಸಿಯೂಟದಿಂದ(Bisiuta) ವಂಚಿತರಾಗಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ ಆರು ತಿಂಗಳಿಂದ ಮಧ್ಯಾಹ್ನದ ಬಿಸಿಯೂಟ ತಯಾರಿಸಿಲ್ಲ. ಹೀಗಾಗಿ ಶಾಲೆ ಮಕ್ಕಳು ಮನೆಯಿಂದಲೇ ಊಟ ತರುವಂತಾಗಿದೆ. ಕೆಲವೊಮ್ಮೆ ಮಕ್ಕಳೇ ಊಟ ತಯಾರಿಸುತ್ತಿದ್ದಾರೆ.
ಸ್ವಚ್ಛತೆ ಹಾಗೂ ಇತರೆ ವಿಚಾರಕ್ಕೆ ಶಾಲೆ ಮುಖ್ಯಶಿಕ್ಷಕರು ಮತ್ತು ಬಿಸಿಯೂಟ ಸಿಬ್ಬಂದಿ ನಡುವೆ ಗಲಾಟೆ ನಡೆದಿದ್ದು ನಾವು ಇನ್ನುಮುಂದೆ ಅಡುಗೆ ಮಾಡಲ್ಲ ಎಂದು ಸಿಬ್ಬಂದಿ ಕೆಲಸ ಬಿಟ್ಟು ಹೊರಡಿದ್ದಾರೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಸಿಬ್ಬಂದಿ ಕೊರತೆ ಇದೆ. ಅಲ್ಲದೆ ಮತ್ತೊಂದೆಡೆ ಮಕ್ಕಳು ಬಿಸಿಯೂಟದಿಂದ ವಂಚಿತರಾಗುತ್ತಿದ್ದಾರೆಂದು ಸ್ಥಳೀಯರು ಹೋರಾಟ ನಡೆಸಿದ್ದರು. ಆಗ ಶಿಕ್ಷಕರೇ ಅಡುಗೆ ಮಾಡಿ ಮಕ್ಕಳಿಗೆ ಊಟ ಬಡಿಸಿದ್ದರು. ಆದ್ರೆ ಈಗ ಮತ್ತೆ ಹಳೆಯ ವ್ಯವಸ್ಥೆಯೇ ಮುಂದುವರೆದಿದೆ. ಕಳೆದ ಆರು ತಿಂಗಳಿನಿಂದ ಮಕ್ಕಳಿಗೆ ಊಟ ನೀಡದೇ ಬೇಜವಾಬ್ದಾರಿಯಿಂದ ವರ್ತಿಸಿದ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನು ಮತ್ತೊಂದೆಡೆ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ದಾವಣಗೆರೆ ಜಿಲ್ಲೆಯ ಎಲ್ಲಾ ಅಂದ್ರೆ ದಾವಣಗೆರೆ ನಗರ ಹಾಗೂ ಗ್ರಾಮಾಂತರ ಹಾಗೂ ಚನ್ನಗಿರಿ ಸೇರಿ ಮೂರು ವಿಭಾಗದ 245 ಮಹಿಳಾ ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳಿಗೆ ಪೊಲೀಸ್ ಸಿಬ್ಬಂದಿ ಬೀಟ್ ವ್ಯವಸ್ಥೆ ಮಾಡಲಾಗಿದೆ. ಸದರಿ ಬೀಟ್ ವ್ಯವಸ್ಥೆಯಲ್ಲಿ ಪೊಲೀಸ್ ಬೀಟ್ ಸಿಬ್ಬಂದಿ ಪ್ರತಿದಿನ ಕಾಲೇಜು ಆರಂಭದ ಹಾಗೂ ಮುಕ್ತಾಯದ ಸಮಯದಲ್ಲಿ ಕಾಲೇಜುಗಳ ಆಡಳಿತ ಅಧಿಕಾರಿ ಸಿಬ್ಬಂದಿ ಭೇಟಿ ಮಾಡಿ ಹಾಗೂ ವಿದ್ಯಾರ್ಥಿನಿಯರೊಂದಿಗೆ ಸಂವಹನ ನಡೆಸಬೇಕು ಎಂದು ದಾವಣಗೆರೆ ಎಸ್ಪಿ ಡಾ. ಕೆ.ಅರುಣ್ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕಾಲೇಜು ಆವರಣದಲ್ಲಿ ಕಿಡಿಗೇಡಿಗಳ ಕೀಟಲೆ, ಚುಡಾಯಿಸುವುದು ಮತ್ತು ಅನುಮಾನಸ್ಪದ ವ್ಯಕ್ತಿಗಳ ಓಡಾಟಗಳ ಮೇಲೆ ನಿಗಾವಹಿಸುವಂತೆ. ಅಲ್ಲದೇ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಅವರಲ್ಲಿ ತುರ್ತು ಸಹಾಯವಾಣಿ 112 ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳಾ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ, ಹಾಸ್ಟೇಲ್ ನಿರ್ವಹಣೆ ಅಧಿಕಾರಿ ಸಿಬ್ಬಂದಿ ಜೊತೆ ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಬೇಕೆಂದು ಎಸ್ಪಿ ಸೂಚಿಸಿದ್ದಾರೆ.
ದಾವಣಗೆರೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ