Siddaramotsava: ಸಿದ್ಧರಾಮೋತ್ಸವಕ್ಕೆ ಅರಮನೆ ಥೀಮ್ ವೇದಿಕೆ, ಜೀವನ ಚರಿತ್ರೆಗೆ 8ಡಿ ಪ್ರೊಜೆಕ್ಷನ್ ಸ್ಪರ್ಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 02, 2022 | 3:19 PM

ಸಿದ್ದರಾಮೋತ್ಸವಕ್ಕಾಗಿ ಮೈಸೂರು ಅರಮನೆ ಹೋಲುವ ಥೀಮ್​ನಲ್ಲಿ ಬೃಹದಾಕಾರದ ವೇದಿಕೆ ಸಜ್ಜುಗೊಳಿಸಲಾಗಿದೆ.

Siddaramotsava: ಸಿದ್ಧರಾಮೋತ್ಸವಕ್ಕೆ ಅರಮನೆ ಥೀಮ್ ವೇದಿಕೆ, ಜೀವನ ಚರಿತ್ರೆಗೆ 8ಡಿ ಪ್ರೊಜೆಕ್ಷನ್ ಸ್ಪರ್ಶ
ದಾವಣಗೆರೆಯಲ್ಲಿ ಸಿದ್ದರಾಮೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
Follow us on

ದಾವಣಗೆರೆ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ ಆಚರಣೆಗೆ ಬೆಣ್ಣೆನಗರಿ ದಾವಣಗೆರೆ ಸಜ್ಜಾಗಿದೆ. ನಾಳೆ (ಆಗಸ್ಟ್ 3, ಬುಧವಾರ) ನಡೆಯಲಿರುವ ಸಿದ್ದರಾಮೋತ್ಸವಕ್ಕಾಗಿ ನಗರದ ಎಲ್ಲೆಡೆ ಕಾಂಗ್ರೆಸ್ ಧ್ವಜ, ಬ್ಯಾನರ್, ಕಟೌಟ್​ಗಳು ರಾರಾಜಿಸುತ್ತಿವೆ. ಘಟಾನುಘಟಿ ನಾಯಕರು ಈಗಾಗಲೇ ದಾವಣಗೆರೆಗೆ ಬಂದಿದ್ದು ತಮ್ಮ ಪಾಲಿನ ಹೊಣೆಗಳನ್ನು ನಿಭಾಯಿಸುತ್ತಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಸುಮಾರು 7,000 ಬಸ್​​ಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ದಾವಣಗೆರೆಗೆ ಬರಲಿದ್ದು, ಊಟೋಪಚಾರ ಸಜ್ಜುಗೊಳಿಸುವ ಕೆಲಸವೂ ಭರದಿಂದ ಸಾಗಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಛಾಯಾಚಿತ್ರ ಗ್ಯಾಲರಿ ‌ಉದ್ಘಾಟಿಸಿದರು. ಗ್ಯಾಲರಿ ಉದ್ಘಾಟನೆ ಬಳಿಕ ಮಾನತಾಡಿದ ಅವರು, ಸಿದ್ದರಾಮಯ್ಯ ಜೀವನ ಚರಿತ್ರೆ ಪರಿಚಯ ಮಾಡಲು ಈ ಫೋಟೊ ಗ್ಯಾಲರಿ ನೆರವಾಗುತ್ತದೆ. ಸಿದ್ದರಾಮಯ್ಯ ಯಾವತ್ತು ಹುಟ್ಟುಹಬ್ಬ ಆಚರಿಸಿಕೊಂಡವರಲ್ಲ. ನಮ್ಮೆಲ್ಲರ ಒತ್ತಾಯದ ಮೇರೆಗೆ ಅವರು ಈ ಆಚರಣೆಗೆ ಒಪ್ಪಿಕೊಂಡಿದ್ದಾರೆ. ಅವರ ಜೀವನಶೈಲಿಯು ಯುವಕರಿಗೆ ಮಾದರಿಯಾಗಬಹುದು. ಹೀಗಾಗಿ ಕಷ್ಟದಿಂದ ಅವರನ್ನು ಒಪ್ಪಿಸಿ ಬಹುದೊಡ್ಡ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕಿ ಮತ್ತು ನಟಿ ಉಮಾಶ್ರೀ, ನನಗೆ ವಿಪರೀತವಾದ ಸಂಭ್ರಮ ಆಗುತ್ತಿದೆ. ಹತ್ತು ಲಕ್ಷ ಜನರು ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಸಾಕಷ್ಟು ಕಲಾವಿದರು ಬರುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಇದು ಸಿದ್ದರಾಮಯ್ಯ ಅಭಿಮಾನಿಗಳಿಗೆ ಸಂಭ್ರಮದ ವಿಷಯ. ಸಿದ್ದರಾಮಯ್ಯ ಒಬ್ಬ ಮೇರು ರಾಜಕಾರಿಣಿ. ಈ ಸಂಭ್ರಮ ರಾಜಕೀಯ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ನುಡಿದರು.

ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ನಂತರ ಮಾತನಾಡಿದ ರೈತ ನಾಯಕ ನಂಜುಂಡಸ್ವಾಮಿ ಪುತ್ರ ಪಚ್ಚೆ ನಂಜುಂಡಸ್ವಾಮಿ, ನನ್ನ ತಂದೆಗೆ ಇದ್ದ ಬದ್ಧತೆ, ಸಮಾಜಸೇವೆಯ ಮನೋಭಾವ ಸಿದ್ದರಾಯ್ಯಗೆ ಇದೆ. ಅಮೃತ ಮಹೋತ್ಸವ ಕಾರ್ಯಕ್ರಮ ನೋಡಿ ಖುಷಿಯಾಗಿದೆ. ತಂದೆಯ ಸ್ಮಾರಕ ನಿರಮ್ಮಿಸಲು ಐದು ಕೋಟಿ ಅನುದಾನವನ್ನು ಸಿದ್ದರಾಮಯ್ಯ ನೀಡಿದ್ದರು ಎಂದು ನೆನಪಿಸಿಕೊಂಡರು.

ಜೀವನ ಚರಿತ್ರೆಗೆ 8ಡಿ ಪ್ರೊಜೆಕ್ಷನ್ ತಾಂತ್ರಿಕತೆ

ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ 8ಡಿ ಪ್ರೊಜಕ್ಷನ್ ಮೂಲಕ ಲೇಸರ್ ಲೈಟ್ ವ್ಯವಸ್ಥೆ ಮಾಡಲಾಗಿದ್ದು, ಸಿದ್ದರಾಮಯ್ಯರ ಜೀವನ ಚರಿತ್ರೆಯನ್ನು ಹೊಸ ರೀತಿಯಲ್ಲಿ ಅನಾವರಣ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದರು. ಹೈದರಾಬಾದ್​ನಿಂದ ಬಂದಿರುವ ತಂತ್ರಜ್ಞರ ತಂಡವು ಲೇಸರ್ ಲೈಟ್ ಶೋ ನೀಡಲಿದೆ. 8ಡಿ ಪ್ರೊಜೆಕ್ಷನ್ ಮೂಲಕ ಸಿದ್ದು ನಡೆದು ಬಂದ ಹಾದಿಯನ್ನು ಜನರ ಎದುರು ಅನಾವರಣಗೊಳಿಸಲಾಗುವುದು.

ಕಾರ್ಯಕ್ರಮ ವಿವರ

ಸಿದ್ದರಾಮೋತ್ಸವ ಕುರಿತು ಮಾಹಿತಿ ನೀಡಿದ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ, ಮಳೆ ಬಂದಿದ್ದರಿಂದ ಕಾರ್ಯಕ್ರಮಕ್ಕೆ ಸ್ವಲ್ಪ ಅನಾನುಕೂಲ ಆಗಿದೆ. ಇಂದಿನಿಂದಲೇ (ಮಂಗಳವಾರ) ಕಾರ್ಯಕ್ರಮಗಳು ಆರಂಭವಾಗಲಿವೆ. ಇಂದು ಸಂಜೆ ಸಾಧುಕೋಕಿಲ ತಂಡದಿಂದ ರಸಮಂಜರಿ ಕಾರ್ಯಕ್ರಮ ಇರಲಿದೆ. ಪಾರ್ಕಿಂಗ್ ಸೇರಿದಂತೆ ಲಘು ಉಪಹಾರದ ವ್ಯವಸ್ಥೆ ಕೂಡ ಇರಲಿದೆ. ಇದನ್ನು ಸಿದ್ದರಾಮಯ್ಯ ಅಮೃತ ಮಹೋತ್ಸವ ಅಂತಲೂ ಕರೆಯಬಹುದು. ಚುನಾವಣೆ ಸಿದ್ಧತೆ ಎಂದೂ ಕರೆಯಬಹುದು. ಶಾಲೆ ಡೇಟ್ ಆಫ್ ಬರ್ತ್ ಪ್ರಕಾರ ಹುಟ್ಟುಹಬ್ಬವೆಂದು ನಾವು ಆಚರಿಸ್ತಿದ್ದೇವೆ ಎಂದರು.

ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಆಲ್ಬಂ ಸಾಂಗ್ ಜನರ ಗಮನ ಸೆಳೆದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಅವರಿಗೆ ಬೇಕಾದ ಹಾಗೆ ಮಾಡಿದ್ದಾರೆ. ಬಹುಮತ ಬಂದಾಗ ತಾನೆ ಸಿಎಂ ಆಗೋರು ಯಾರು ಎಂದು ಗೊತ್ತಾಗುವುದು ಎಂದರು.

ಅರಮನೆ ಥೀಮ್​ನ ವೇದಿಕೆ

ಸಿದ್ದರಾಮಯ್ಯ 75ನೇ ಹುಟ್ಟುಹಬ್ಬದ ಅಂಗವಾಗಿ ನಡೆಯುತ್ತಿರುವ ಅಮೃತ ಮಹೋತ್ಸವಕ್ಕಾಗಿ ಮೈಸೂರು ಅರಮನೆ ಹೋಲುವ ಥೀಮ್​ನಲ್ಲಿ ಬೃಹದಾಕಾರದ ವೇದಿಕೆ ಸಜ್ಜುಗೊಳಿಸಲಾಗಿದೆ. ಕಳೆದ 25 ದಿನಗಳಿಂದಲೂ ತಯಾರಿ ನಡೆಯುತ್ತಿದ್ದು, ಇಂದು ಪೂರ್ಣಗೊಳ್ಳಲಿದೆ.

ಎಲ್ಲರಿಗೂ ಅವಕಾಶ: ಎಚ್.ಎಂ.ರೇವಣ್ಣ

ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ದಾವಣಗೆರೆಗೆ ಬರುವವರಿಗಾಗಿ ಪ್ರತ್ಯೇಕ ಮಾರ್ಗ ಮತ್ತು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗಿದೆ. ಒಂದೂವರೆ ಸಾವಿರ ಜನ ಬಾಣಸಿಗರಿಂದ ಅಡುಗೆ ಮಾಡುತ್ತಿದ್ದಾರೆ. ಆರು ಲಕ್ಷ ಮೈಸೂರು ಪಾಕ್ ಸೇರಿ ಇತರೆ ಆಹಾರ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಪ್ರತ್ಯೇಕ ಊಟದ ಕೌಂಟರ್ ನಿರ್ಮಾಣ ಮಾಡಲಾಗಿದ್ದು, ಅಡುಗೆ ಬಡಿಸಲು ಯುವಕರ ಪಡೆಯೇ ಸಿದ್ಧವಾಗಿದೆ ಎಂದರು. ಬೆಳಿಗ್ಗೆ 10 ಗಂಟೆಗೆ ಹಂಸಲೇಖ ಸೇರಿ ಇತರರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, 11 ಗಂಟೆಯಿಂದ ರಾಜ್ಯ ಮುಖಂಡರ ಭಾಷಣ ಆರಂಭವಾಗಲಿದೆ. 1 ಗಂಟೆಗೆ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.

ಚುನಾಯಿತ ಪ್ರತಿನಿಧಿಗಳು, ಕಾಂಗ್ರೆಸ್ ಪದಾಧಿಕಾರಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಸಮಿತಿಯಿಂದ ಒಂದೂವರೆ ಸಾವಿರ ಬಸ್ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳು ಸ್ವತಃ ಬಸ್ ಮಾಡಿಕೊಂಡು ಬರುತ್ತಿದ್ದಾರೆ. ವೆಚ್ಚದ ವಿವರ ಗೊತ್ತಿಲ್ಲ ಎಂದರು. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಈ ಕಾರ್ಯಕ್ರಮ ಸಹಾಯ ಆಗಲಿದೆ ಎಂದರು. ಇದು ಶಕ್ತಿ ಪ್ರದರ್ಶನ, ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ಯತ್ನ ಅಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದರು.

Published On - 3:19 pm, Tue, 2 August 22