ಹುಬ್ಬಳ್ಳಿ-ಧಾರವಾಡ ನಡುವಿನ ಬೈಪಾಸ್ ರಸ್ತೆ ‘ಸಾವಿನ ಹೆದ್ದಾರಿ’ ಅಂತಾನೇ ಕುಖ್ಯಾತಿ ಪಡೆದಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಡೆದ ಅಪಘಾತಗಳಲ್ಲಿ ಇಲ್ಲಿ 1400 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದೇ ಕಾರಣಕ್ಕೆ ಇದೀಗ ಈ ರಸ್ತೆಯ ಅಗಲೀಕರಣ ಮಾಡಲಾಗುತ್ತಿದೆ. ಅಚ್ಚರಿಯ ಸಂಗತಿ ಅಂದರೆ ಮೊದಲ ಬಾರಿಗೆ ಡಿಸೆಂಬರ್ ತಿಂಗಳಲ್ಲಿ ಈ ರಸ್ತೆಯಲ್ಲಿ ಸಾವಿನ ಸಂಖ್ಯೆ ಸೊನ್ನೆಗೆ ಇಳಿದಿದೆ.
‘ಸಾವಿನ ಹೆದ್ದಾರಿ’ ಎಂದೇ ಕರೆಯಲ್ಪಡುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಮಾಣ ತಗ್ಗಿದೆ. ವರ್ಷಕ್ಕೆ 400ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ, 90ಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದ ರಸ್ತೆಯಲ್ಲಿ ಈಗ ಅಪಘಾತಗಳ ಪ್ರಮಾಣ ಡಿಸೆಂಬರ್ ತಿಂಗಳಲ್ಲಿ ಶೂನ್ಯಕ್ಕೆ ಇಳಿದಿದೆ. 2023ರ ಮೇ ವರೆಗಿನ ಐದು ತಿಂಗಳ ಅವಧಿಯಲ್ಲಿ 187 ಅಪಘಾತ ಸಂಭವಿಸಿದ್ದವು. ಅವುಗಳಲ್ಲಿ 39 ಮಂದಿ ಮೃತಪಟ್ಟು, 176 ಮಂದಿ ಗಾಯಗೊಂಡಿದ್ದರು. ನಂತರದ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ 30 ಅಪಘಾತಗಳು ಸಂಭವಿಸಿದವು.
Also Read: Dharwad road accident ಟೆಂಪೋಗೆ ಟಿಪ್ಪರ್ ಡಿಕ್ಕಿ: ಮೃತರ ಸಂಖ್ಯೆ 13ಕ್ಕೆ ಏರಿಕೆ, ಮಾಜಿ ಶಾಸಕರ ಸೊಸೆ ದುರ್ಮರಣ
ಅವುಗಳಲ್ಲಿ ಇಬ್ಬರು ಮೃತಪಟ್ಟು, 18 ಮಂದಿ ಗಾಯಗೊಂಡರು. ಅಕ್ಟೋಬರ್‌ನಲ್ಲಿ ಎರಡು ಅಪಘಾತ ಪ್ರಕರಣ ಸಂಭವಿಸಿ, ಮೂವರು ಗಾಯಗೊಂಡರು. ಡಿಸೆಂಬರ್‌ನಲ್ಲಿ ಅಪಘಾತ ಪ್ರಕರಣ ಶೂನ್ಯಕ್ಕೆ ಇಳಿದಿದೆ. ಪ್ರಸ್ತುತ ಜೂನ್ ನಿಂದ ಡಿಸೆಂಬರ್‌ವರೆಗಿನ ಏಳು ತಿಂಗಳ ಅವಧಿಯಲ್ಲಿ ಶೇ. 90ರಷ್ಟು ಅಪಘಾತ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಕಾರಣ, ಇಕ್ಕಟ್ಟಾದ ಬೈಪಾಸ್ ರಸ್ತೆ ಷಟ್‌ಪಥ ರಸ್ತೆಯಾಗುವಲ್ಲಿ ನಡೆಯುತ್ತಿರುವ ಕಾಮಗಾರಿ. ಇದೀಗ ಸುಮಾರು ಸಾವಿರ ಕೋಟಿ ರೂಪಾಯಿಯ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ಸ್ಥಳೀಯರು ಕೊಂಚ ಸಮಾಧಾನಪಟ್ಟುಕೊಳ್ಳುವಂತಾಗಿದೆ.
Also Read: ಧಾರವಾಡ ಅಪಘಾತದಲ್ಲಿ ಮೃತದೇಹ ಅದಲುಬದಲು: ನಾಯಿಮರಿ ಟ್ಯಾಟೂ ಸಹಾಯದಿಂದ ಮಹಿಳೆಯ ಶವ ಪತ್ತೆ
ಈ ಮೊದಲು ತಾರಿಹಾಳ ಬೈಪಾಸ್ ರಸ್ತೆಯ ಪಕ್ಕ ರಾತ್ರಿವೇಳೆ ಗೂಡ್ಸ್, ಕಂಟೇನರ್, ಟ್ಯಾಂಕರ್ ವಾಹನಗಳು ಕೆಟ್ಟು ನಿಂತಿರುತ್ತಿದ್ದವು. ಬೈಪಾಸ್ ರಸ್ತೆಯೆಂದು ಕೆಲವರು ವಾಹನಗಳನ್ನು ವೇಗವಾಗಿ ಚಲಾಯಿಸಿ, ಕೆಟ್ಟು ನಿಂತ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿದ್ದರು. ಇನ್ನು ಕೆಲವರು ಮದ್ಯಪಾನ, ಮಾದಕ ವಸ್ತುಗಳ ಸೇವನೆ ಮಾಡಿ ನಿಯಂತ್ರಣ ಕಳೆದುಕೊಂಡು ರಸ್ತೆಯ ವಿಭಜಕಕ್ಕೋ, ಎದುರಿಗೆ ಇರುವ ವಾಹನಗಳಿಗೋ ಡಿಕ್ಕಿ ಹೊಡೆಯುತ್ತಿದ್ದರು. ಅಲ್ಲದೇ ಬಹುತೇಕ ಬೈಕ್ ಸವಾರರು ಹೆಲ್ಮೆಟ್ ಧರಿಸುತ್ತಿರಲಿಲ್ಲ. ಈಗ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಹತ್ತಾರು ಜೆಸಿಬಿ ವಾಹನಗಳು, ಮೂವತ್ತಕ್ಕೂ ಹೆಚ್ಚು ಟ್ರಕ್‌ಗಳು ಕಾಮಗಾರಿ ಸ್ಥಳದಲ್ಲಿ ಇರುವುದರಿಂದ ಸವಾರರು ನಿಧಾನವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಹೀಗಾಗಿ ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ. ಇನ್ನು ಕೆಲ ವರ್ಷಗಳ ಹಿಂದಿನ ಅಂಕಿ-ಅಂಶಗಳನ್ನು ನೋಡುವುದಾರದೆ ಕೆಳಗಿನಂತಿದೆ:
ಇದೀಗ ಕಾಮಗಾರಿ ಆರಂಭವಾಗಿದ್ದು ಆದಷ್ಟು ಬೇಗನೆ ಮುಗಿಸಿ, ಈ ಅಪಘಾತಗಳ ಹಾಗೂ ಸಾವಿನ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸುವಂತೆ ಜನ ಪರ ಹೋರಾಟಗಾರ ನಾಗರಾಜ ಕಿರಣಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. 2023ರ ಮಾರ್ಚ್‌ನಿಂದ ಕಾಮಗಾರಿ ಆರಂಭವಾಗಿದ್ದು, 2025ರಲ್ಲಿ ಮುಕ್ತಾಯವಾಗಲಿದೆ. ಹುಬ್ಬಳ್ಳಿಯ ಗಬ್ಬೂರು ಕ್ರಾಸ್ನಿಂದ ಧಾರವಾಡದ ನರೇಂದ್ರ ಬೈಪಾಸ್ ವರೆಗಿನ 32 ಕಿ.ಮೀ. ಈ ಹೆದ್ದಾರಿಯಲ್ಲಿ 21 ಕೆಳ ಸೇತುವೆಗಳು, ಒಂದು ರೈಲ್ವೆ ಮೇಲ್ವೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಬೃಹತ್ ವಾಹನಗಳಿಗೆ 13 ಕಡೆ, ಲಘು ವಾಹನಗಳಿಗೆ ಏಳು ಕಡೆ ಕೆಳಸೇತುವೆ ನಿರ್ಮಾಣ ಅಗಲಿವೆ. ಷಟ್ಟಥ ರಸ್ತೆಯ ಅಕ್ಕಪಕ್ಕ ಎರಡು ಮಾರ್ಗಗಳ ಸರ್ವಿಸ್ ರಸ್ತೆ ನಿರ್ಮಾಣ ಆಗಲಿದ್ದು, ಒಂದೊಂದು ರಸ್ತೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ. ಒಟ್ಟಿನಲ್ಲಿ ಸಾವಿನ ಹೆದ್ದಾರಿ ಅಂತಾ ಕುಖ್ಯಾತಿ ಗಳಿಸಿದ್ದ ಇದು ಆ ಹೆಸರಿನಿಂದ ಮುಕ್ತಿ ಪಡೆದರೆ ಸಾಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Wed, 10 January 24