ಧಾರವಾಡ, ಜೂನ್ 14: ಮುಂಗಾರು ಮಳೆಯ (Monsoon Rain) ಆರ್ಭಟದ ಜೊತೆಗೆ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳೂ ತೀವ್ರವಾಗಿ ಉಲ್ಬಣಗೊಳ್ಳುತ್ತಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ (Dengue), ಚಿಕುನ್‌ಗುನ್ಯಾ ಕಾಯಿಲೆ ರಣಕೇಕೆ ಹಾಕುತ್ತಿವೆ. ಜನ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಇದೀಗ ಧಾರವಾಡ (Dharawad) ಜಿಲ್ಲೆಯಲ್ಲಿ ಡೆಂಗ್ಯೂವಿನಿಂದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಇದರಿಂದಾಗಿ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಮತ್ತೊಂದೆಡೆ, ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗರಾಜ್ ಎಂಬವರು ಗುರುವಾರ ಮೃತಪಟ್ಟಿದ್ದರು. ಇದೂ ಸಹ ಡೆಂಗ್ಯೂವಿನಿಂದಲೇ ಎಂಬ ಅನುಮಾನ ವ್ಯಕ್ತವಾಗಿದೆ.
ರಾಜ್ಯದಲ್ಲಿ ಪ್ರಸಕ್ತ ವರ್ಷ 4,414 ಡೆಂಗ್ಯೂ, 778 ಚಿಕುನ್‌ಗುನ್ಯಾ ಪ್ರಕರಣಗಳು ಪತ್ತೆ ಆಗಿವೆ. ಈ ನಡುವೆ ಕಳೆದ 10 ದಿನಗಳಲ್ಲಿ ಬರೋಬ್ಬರಿ 1,026 ಡೆಂಗ್ಯೂ, 137 ಚಿಕೂನ್ ಗುನ್ಯಾ ಪಾಸಿಟಿವ್ ಬಂದಿದ್ದು ಆತಂಕ ಮೂಡಿಸಿದೆ. ಚಿಕೂನ್ಗುನ್ಯಾಕ್ಕಿಂತ ಡೆಂಗ್ಯೂ ಹಾವಳಿಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇನ್ನು ಧಾರವಾಡ ಜಿಲ್ಲೆಯ ವಿಚಾರಕ್ಕೆ ಬಂದರೆ, ಇದೀಗ ಜಿಲ್ಲೆಯ 81 ಪ್ರದೇಶಗಳಲ್ಲಿ ಡೆಂಗ್ಯೂ ತೀವ್ರವಾಗಿ ಕಾಣಿಸಿಕೊಂಡಿದೆ. ಇದರಲ್ಲಿ ಜನವರಿಯಿಂದ ಜೂನ್ವರೆಗೆ 437 ಶಂಕಿತ ಡೆಂಗ್ಯೂ ಪ್ರಕರಣಗಳು ಕಂಡು ಬಂದಿವೆ. ಇನ್ನು ಹತ್ತು ದಿನಗಳ ಅಂಕಿ-ಅಂಶ ನೋಡಿದರೆ 41 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ನಾಲ್ಕು ವರ್ಷದ ಸಮೃದ್ಧಿ ದೇಸಾಯಿ ಅನ್ನೋ ಬಾಲಕಿ ಮೃತಪಟ್ಟಿದ್ದಾಳೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಡಿಎಚ್ಒ ಡಾ. ಶಶಿ ಪಾಟೀಲ್ ಮತ್ತು ಅಧಿಕಾರಿಗಳು ಭೇಟಿ ನೀಡಿದಾಗ ಬಾಲಕಿಯ ತಂದೆ ಬಸವರಾಜ ದೇಸಾಯಿ ಅಧಿಕಾರಿಗಳ ಮೇಲೆ ಕೂಗಾಡಿದರು. ಬಾಲಕಿ ಸಾವಿಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಅಂತಾ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಚಿಕಿತ್ಸೆ ಫಲಿಸದೆ ಆರೋಗ್ಯ ಇಲಾಖೆ ಸಿಬ್ಬಂದಿ ಸಾವು, ಡೆಂಗ್ಯೂ ಶಂಕೆ
ಬಾಲಕಿ ಸಾವಿನ ಬಳಿಕ ಎಚ್ಚೆತ್ತುಕೊಂಡಿರೋ ಆರೋಗ್ಯ ಇಲಾಖೆ ಇದೀಗ ಗ್ರಾಮಗಳಲ್ಲಿ ಫಾಗಿಂಗ್ ಮಾಡುತ್ತಿದೆ. ಇನ್ನು ಮಳೆ ಬಂದಾಗ ಸಂಗ್ರಹವಾಗುವ ನೀರಿನಲ್ಲಿ ಈ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳು ಹುಟ್ಟುತ್ತವೆ. ಹೀಗಾಗಿ ಹೂವಿನಕುಂಡಗಳು, ಏರ್‌ಕೂಲರ್, ತೆಂಗಿನ ಚಿಪ್ಪು, ಒಡೆದ ಟೈಯರ್, ನೀರು ಸಂಗ್ರಹ ತೊಟ್ಟಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಂಡರೆ ರೋಗ ಬರದಂತೆ ತಡೆಯಬಹುದು. ಇದರ ಜತೆಗೆ ಕೊಳಚೆ ಪ್ರದೇಶಗಳಲ್ಲಿ ಕೀಟನಾಶಕ ಸಿಂಪರಣೆ ಜತೆಗೆ ಸೊಳ್ಳೆಗಳ ಸಂತತಿ ಜಾಸ್ತಿ ಆಗದಂತೆ ಫಾಗಿಂಗ್ ಮಾಡುವ ಕೆಲಸ ಆಗಬೇಕು. ಜನರು ತೆರೆದ ಪಾತ್ರೆ, ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಜನರು ಕೂಡ ಈ ಬಗ್ಗೆ ಜಾಗೃತಿ ವಹಿಸಬೇಕಿದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರು ಹೆಚ್ಚಾಗಿರೋ ಮನೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸಿದರೆ ಡೆಂಘಿಯಿಂದ ಬಚಾವ್ ಆಗಬಹುದು. ಒಟ್ಟಿನಲ್ಲಿ ಈ ರೋಗಗಳಿಂದ ಆತಂಕಗೊಂಡಿರೋ ಜನರಿಗೆ ಜಿಲ್ಲಾಡಳಿತ ಅಭಯ ನೀಡಿ, ಆದಷ್ಟು ಬೇಗನೇ ಎಲ್ಲ ಕಡೆಗಳಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ