ಧಾರವಾಡ: ಕೊರೊನಾ ಎರಡನೇ ಅಲೆ ಎಲ್ಲ ಕಡೆ ಆವರಿಸುತ್ತಿರುವುದರಿಂದ ಸಾರ್ವಜನಿಕವಾಗಿ ಹಬ್ಬಗಳನ್ನು ಆಚರಿಸುವಾಗ ಆರೋಗ್ಯ ಮುನ್ನೆಚ್ಚರಿಕೆ ವಹಿಸುವುದು ಮುಖ್ಯವಾಗಿದ್ದು, ಮುಂಬರುವ ಹೋಳಿ ಹಬ್ಬವನ್ನು ತಮ್ಮ ಕುಟುಂಬಗಳಿಗೆ ಸೀಮಿತಗೊಳಿಸಿ ಸಂಕ್ಷಿಪ್ತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿದ್ದಾರೆ. ಹುಬ್ಬಳ್ಳಿಯ ಮಹಾನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಅವಳಿ ನಗರದಲ್ಲಿರುವ ಹೋಳಿ, ಹಲಗಿ ಮತ್ತು ಕಾಮಣ್ಣನ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಾತನಾಡಿದರು.
ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಪ್ರತಿಯೊಬ್ಬರೂ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಿ ಮಾಹಿತಿ, ಮುನ್ನೆಚ್ಚರಿಕೆ ಮತ್ತು ಆರೋಗ್ಯ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡುತ್ತಿದ್ದಾರೆ. ಹೋಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಹಾನಿಕಾರಕ ಬಣ್ಣಗಳನ್ನು ಬಳಸದೇ ನೈಸರ್ಗಿಕ ಬಣ್ಣಗಳನ್ನು ಬಳಸಿ, ಕುಟುಂಬ ಸದಸ್ಯರೊಂದಿಗೆ ಸಂಕ್ಷಿಪ್ತವಾಗಿ ಹೋಳಿ ಹಬ್ಬವನ್ನು ಆಚರಿಸಬೇಕೆಂದು ನಿತೇಶ ಪಾಟೀಲ್ ಹೇಳಿದರು.
ಕೊರೊನಾ ಸಂದರ್ಭದಲ್ಲಿ ಜಾಗೃತಿ ವಹಿಸಬೇಕಾಗಿರುವುದು ಎಲ್ಲರ ಕರ್ತವ್ಯ
ಸಭೆಯಲ್ಲಿ ಭಾಗವಹಿಸಿದ್ದ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೊನಾದಂತಹ ಮಾರಕ ರೋಗದ ಸಂದರ್ಭದಲ್ಲಿ ಜಾಗೃತಿ ವಹಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೊವಿಡ್ ಮಾರ್ಗಸೂಚಿಗಳನ್ನು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಿ ಹೋಳಿ ಹಬ್ಬವನ್ನು ಆಚರಿಸಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಂಘಟನೆಗಳು ಹಲಗಿ ಹಬ್ಬ, ಹೋಳಿ ಮೆರವಣಿಗೆಗಳನ್ನು ಆಯೋಜಿಸುವುದನ್ನು ಬಿಡಬೇಕೆಂದು ಮನವಿ ಮಾಡಿದರು. ಇನ್ನು ಸಾರ್ವಜನಿಕರು ತಮ್ಮ ಮನೆಗಳಲ್ಲಿಯೇ ಸುರಕ್ಷಿತವಾಗಿ ಮತ್ತು ಸಂಕ್ಷಿಪ್ತವಾಗಿ ಹೋಳಿ ಹಬ್ಬ ಆಚರಿಸುವಂತೆ ತಿಳುವಳಿಕೆ ನೀಡಬೇಕೆಂದು ತಿಳಿಸಿದರು.
ಜಿಲ್ಲಾಡಳಿತಕ್ಕೆ ನಮ್ಮೆಲ್ಲರ ಸಹಕಾರವಿದೆ: ವಿವಿಧ ಸಂಘಗಳ ಮುಖಂಡರ ಭರವಸೆ
ಧಾರವಾಡ ಹಲಗಿ ಹಬ್ಬದ ಸಂಯೋಜಕ ಶಂಕರ ಶೇಳಕೆ ಅವರು ಮಾತನಾಡಿ, ಈ ಬಾರಿ ಕೊವಿಡ್ ಹಿನ್ನೆಲೆಯಲ್ಲಿ ಹಲಗೆ ಹಬ್ಬ ಮೆರವಣಿಗೆ ಮಾಡುವುದಿಲ್ಲ. ಕಾಮಣ್ಣನ ಮೆರವಣಿಗೆ ಮಾಡದೇ ದಹನ ಮಾಡಲಾಗುವುದು ಮತ್ತು ಜಿಲ್ಲಾಧಿಕಾರಿಗಳು ನೀಡಿರುವ ನಿಯಮಗಳನ್ನು ಎಲ್ಲರೂ ಪಾಲನೆ ಮಾಡುತ್ತೇವೆ ಎಂದರು.
ಹುಬ್ಬಳ್ಳಿ ಕಮರಿಪೇಟೆಯ ಅಮರೇಶ್ ಹಿಪ್ಪರಗಿ ಅವರು ಮಾತನಾಡಿ, ನಾವು ಯಾವುದೇ ಮೆರವಣಿಗೆ ಮಾಡುವುದಿಲ್ಲ. ಸಾಂಪ್ರಾದಾಯಿಕವಾಗಿ ಕಾಮಣ್ಣನ ಹಬ್ಬವನ್ನು ಸಂಕ್ಷಿಪ್ತವಾಗಿ ಆಚರಿಸುತ್ತೇವೆ ಎಂದರು. ಜೊತೆಗೆ ಮೋತಿಲಾಲ್ಸಾಬ್ ಕಬಾಡೆ ಅವರು ಮಾತನಾಡಿ, ಕಮರಿಪೇಟೆಯಲ್ಲಿ ಪ್ರತಿವರ್ಷದಂತೆ ಯಾವುದೇ ರೀತಿಯ ಮೆರವಣಿಗೆ ಮಾಡದೇ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸುತ್ತೇವೆ ಎಂದರು.
ಗುರುನಾಥ ನೇಮಿಕರ ಮಾತನಾಡಿ, ಹುಬ್ಬಳ್ಳಿಯ ಚನ್ನಪೇಟದಲ್ಲಿ 5 ದಿನಗಳ ಕಾಲ ಕಾಮದೇವರ ಪ್ರತಿಷ್ಠಾಪನೆ ಮಾಡಿ, ನಂತರ ಕಾಮದಹನ ಮಾಡುತ್ತೇವೆ. ದೊಡ್ಡ ಪ್ರಮಾಣದ ಯಾವುದೇ ಮೆರವಣಿಗೆ ಮಾಡದೇ ನಿಯಮಗಳನ್ನು ಪಾಲಿಸುತ್ತೇವೆ ಎಂದರು. ಅವಳಿ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಸುನೀಲೆ ಘೋಡ್ಕೆ, ಪ್ರಕಾಶ ಬುರಬುರೆ, ಸಂತೋಷ ಆವನ್ನವರ, ಚನ್ನಪ್ಪ ಚುಳಕಿ, ಧರ್ಮದಾಸ ಸಾತಕುತೆ, ಅಂಬಾಸ ಜಿತೂರೆ, ಇಕ್ಬಾಲ್ ಜಮಾದಾರ ಮತ್ತು ಅರವಿಂದ ಏಕನಗೌಡರ ಸೇರಿದಂತೆ ವಿವಿಧ ಸಮುದಾಯಗಳ ಸುಮಾರು 50 ಕ್ಕೂ ಹೆಚ್ಚು ಮುಖಂಡರು ಹೋಳಿ ಹಬ್ಬವನ್ನು ಅವಳಿ ನಗರದಲ್ಲಿ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸರಳವಾಗಿ, ಶಾಂತಿಯುತವಾಗಿ ಮತ್ತು ಸಂಕ್ಷಿಪ್ತವಾಗಿ ಆಚರಿಸುತ್ತೇವೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಸಹಕಾರ ನೀಡುವುದಾಗಿ ತಿಳಿಸಿ, ಸಹಮತ ವ್ಯಕ್ತಪಡಿಸಿದರು.
ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಉಪ ಪೊಲೀಸ್ ಆಯುಕ್ತ ರಾಮರಾಜನ್, ಆರ್.ಬಿ. ಬಸರಗಿ, ಎಸಿಪಿಗಳಾದ ಮಲ್ಲಿಕಾರ್ಜುನ ಮಲ್ಲಾಪೂರ, ವಿನೋದ ಮುಕ್ತೇದಾರ ಮತ್ತು ಅನುಷಾ ಜಿ. ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಇದನ್ನೂ ಓದಿ
ಮಾವು ಕ್ಷೇತ್ರೋತ್ಸವ: ಆತಂಕಗೊಂಡ ರೈತರ ನೆರವಿಗೆ ಬಂದ ವಿಜ್ಞಾನಿಗಳ ತಂಡ
BBMP Budget 2021: ಬಿಬಿಎಂಪಿ ಬಜೆಟ್ ಮಾರ್ಚ್ 26ರಂದು ಮಂಡನೆಯಾಗುವ ಸಾಧ್ಯತೆ