ವಿಜಯಪುರಲ್ಲಿ ಕೊರೊನಾ ಉಲ್ಬಣ: ಹೋಳಿ ಹಬ್ಬಕ್ಕೆ ಬ್ರೇಕ್
ಕೊರೊನಾ ಎರಡನೇ ಅಲೆಗೆ ಗುಮ್ಮಟ ನಗರಿಯ ಜನರು ಬೆಚ್ಚಿ ಬಿದ್ದಿದ್ದಾರೆ. ಮೊದಲ ಅಲೆಯ ಮಹಾಮಾರಿಗೆ ಸಾಕಷ್ಟು ಸಂಕಷ್ಟಗಳನ್ನ ಎದುರಿಸಿದ್ದ ಸ್ಥಳೀಯರು ಮತ್ತೆ ಕೊರೊನಾ ವ್ಯಾಪಿಸಿದರೆ ನಮ್ಮ ಗತಿಯೇನು.. ಮರಳಿ ಲಾಕ್ಡೌನ್ ಆದರೆ ಬಡ ಜನರ ಪಾಡೇನು ಎನ್ನುವಂತಾಗಿದೆ.
ವಿಜಯಪುರ: ನೆರೆಯ ಮಹಾರಾಷ್ಟ್ರದ ಗಡಿ ಭಾಗವನ್ನು ಹಂಚಿಕೊಂಡ ಜಿಲ್ಲೆ ವಿಜಯಪುರ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಗಡಿ ಭಾಗದಿಂದ ಬರುವ ಜನರಿಂದ ಮತ್ತಷ್ಟು ಹೆಚ್ಚು ಕೊರೊನಾ ಪ್ರಸರಿಸುವ ಸಾಧ್ಯತೆಯೂ ಇದೆ. ಎರಡನೇ ಅಲೆ ರೂಪದಲ್ಲಿ ಮಹಾಮಾರಿ ಕೊರೊನಾ ಜನರಿಗೆ ಭೀತಿ ಉಂಟುಮಾಡಿದೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆಲ್ಲಾ ಸಾಕ್ಷಿಯಾಗಿದೆ. ಜೊತೆಗೆ ಗಂಟಲು ದ್ರವ ಮಾದರಿಯನ್ನು ಹೆಚ್ಚು ಸಂಗ್ರಹಿಸಿ ಪರೀಕ್ಷೆ ಮಾಡಲಾಗುತ್ತಿದೆ.
ಮಹಾರಾಷ್ಟ್ರದ ಭಯ ಕೊರೊನಾ ಎರಡನೇ ಅಲೆಗೆ ಗುಮ್ಮಟ ನಗರಿಯ ಜನರು ಬೆಚ್ಚಿ ಬಿದ್ದಿದ್ದಾರೆ. ಮೊದಲ ಅಲೆಯ ಮಹಾಮಾರಿಗೆ ಸಾಕಷ್ಟು ಸಂಕಷ್ಟಗಳನ್ನ ಎದುರಿಸಿದ್ದ ಸ್ಥಳೀಯರು ಮತ್ತೆ ಕೊರೊನಾ ವ್ಯಾಪಿಸಿದರೆ ನಮ್ಮ ಗತಿಯೇನು.. ಮರಳಿ ಲಾಕ್ಡೌನ್ ಆದರೆ ಬಡ ಜನರ ಪಾಡೇನು ಎನ್ನುವಂತಾಗಿದೆ. ಇಷ್ಟರ ಮಧ್ಯೆ ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಗಣನೀಯ ಪ್ರಮಾಣದಲ್ಲಿ ವ್ಯಾಪಿಸಿದ್ದು, ಜಿಲ್ಲೆಗೆ ಶಾಪವಾಗುತ್ತಿದೆ. ಸದ್ಯ ಅಲ್ಲಿಂದ ಇಲ್ಲಿಗೆ ಬರುವವರ ಕುರಿತು ಸರಿಯಾದ ತಪಾಸನೆ ಮಾಡುತ್ತಿಲ್ಲಾ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮಹಾರಾಷ್ಟ್ರದಿಂದ ಬಂದವರ ಮೇಲೆ ಸರಿಯಾದ ಗಮನವಿಟ್ಟಿಲ್ಲಾ. ಅಲ್ಲದೇ ಮಹಾರಾಷ್ಟ್ರದಿಂದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ ಬಿಟ್ಟು ಇತರೆ ಕಳ್ಳ ಮಾರ್ಗಗಳಿಂದ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಇದ್ಯಾವುದಕ್ಕೂ ಕಡಿವಾಣ ಬೀಳುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಗುಳೆಗೆ ತೆರಳಿದವರು ವಾಪಸ್ ಬಂದರೆ ಕಷ್ಟ ವಿಜಯಪುರ ಜಿಲ್ಲೆಯ ಲಕ್ಷಾಂತರ ಜನರು ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಹೋಗುವುದು ವಾಡಿಕೆ. ಕೂಲಿ ಕೆಲಸವನ್ನು ಅರಸಿ ಹೋಗಿ ವರ್ಷದ ಆರು ತಿಂಗಳು ಕಾಲ ಮಹಾರಾಷ್ಟ್ರದಲ್ಲಿದ್ದರೆ, ಇನ್ನಾರು ತಿಂಗಳು ವಿಜಯಪುರ ಜಿಲ್ಲೆಯಲ್ಲಿ ಇರುವುದು ಸಾಮಾನ್ಯವಾಗಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರಿಸಿ ಬೊಬ್ಬಿರಿದರೆ ಲಾಕ್ಡೌನ್ ಜಾರಿಯಾಗುತ್ತದೆ. ಆಗ ಅಲ್ಲಿ ಗುಳೆಗೆ ಹೋದವರನ್ನು ಅವರು ವಾಪಸ್ ಕಳಿಸುವುದು ಸಹ ಗ್ಯಾರಂಟಿ. ಕಳೆದ ವರ್ಷವೂ ಸಹ ಕೊರೊನಾ ನರ್ತನದಿಂದ ಲಕ್ಡೌನ್ ಆಗಿದ್ದ ವೇಳೆ ಗುಳೆಗೆ ಹೋಗಿದ್ದವರನ್ನು ಅವರೆಲ್ಲಾ ವಾಪಸ್ ಕಳುಹಿಸಿದ್ದರು. ಈ ಬಾರಿಯೂ ಅದೇ ರೀತಿ ಗುಳೆಗೆ ಹೋದವರು ವಾಪಸ್ ಬಂದರೆ ಅಪಾಯ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಯುವಕರು ವೃದ್ದರು ಟಾರ್ಗೆಟ್ ಜಿಲ್ಲೆಯಲ್ಲಿ ಎರಡನೇ ಕೊರೊನಾ ಅಲೆ ಜೋರಾಗಿ ಬೀಸುವ ಲಕ್ಷಣಗಳನ್ನು ತೋರುತ್ತಿದೆ. ಮಾರ್ಚ್ 24 ರ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 194 ಪಾಸಿಟಿವ್ ಪ್ರಕರಣಗಳಿವೆ. ಮಾರ್ಚ್ 24 ರಂದು ಒಂದೇ ದಿನ 37 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 207 ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಇಂದಿನವರೆಗೆ 3,59,325 ಜನರ ಗಂಟಲು ದ್ರವವನ್ನು ಮಾದರಿ ಪರೀಕ್ಷೆಗೆ ಸಂಗ್ರಹಿಸಲಾಗಿದೆ. ಈ ಪೈಕಿ 3,56,817 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 3,42,126 ಜನರ ವರದಿ ನೆಗೆಟಿವ್ ಬಂದಿದೆ. ಇನ್ನು 14,857 ಜನರ ಗಂಟಲು ದ್ರವ ಮಾದರಿ ವರದಿ ಪಾಸಿಟಿವ್ ಬಂದಿದೆ. 2,342 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಕಳೆದ 15 ದಿನಗಳಲ್ಲಿ 70 ಜನ ಯುವಕ-ಯುವತಿಯರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. 11 ಮಕ್ಕಳು, 57 ವೃದ್ದರಲ್ಲಿಯೂ ಕೂಡಾ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ಮೂಲಕ ಯುವ ಜನರನ್ನು ಹಾಗೂ ವೃದ್ಧರನ್ನು ಹೆಚ್ಚಾಗಿ ಕೊರೊನಾ ಕಾಡುತ್ತಿದೆ ಎಂಬುವುದು ತಿಳಿದುಬಂದಿದೆ.
ಹೋಳಿ ಹಬ್ಬಕ್ಕೂ ಬ್ರೇಕ್ ಎರಡನೇ ಕೊರೊನಾ ಅಲೆಯ ಕಾರಣದಿಂದ ಮುಂಬರುವ ಹೋಳಿ ಹಬ್ಬಕ್ಕೂ ಕರಿಛಾಯೆ ಆವರಿಸಿದೆ. ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಅಸಾಧ್ಯವಾಗಿದೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಣ್ಣದಾಟವನ್ನು ಆಚರಣೆ ಮಾಡುವುದು ಕಷ್ಟವೆಂದು ಜಿಲ್ಲೆಯಲ್ಲಿ ಹೋಳಿ ಹಬ್ಬಕ್ಕೆ ತಡೆ ಹಾಕಲಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಹೋಳಿ ಹಬ್ಬವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಆದೇಶ ಹೊರಡಿಸಿದ್ದಾರೆ. ಸಾಂಕ್ರಾಮಿಕ ರೋಗ ಕಾಯ್ದೆ 1897 – ವಿಪತ್ತು ನಿರ್ವಹಣಾ ಕಾಯ್ದೆ 2005 ಅನ್ವಯ ಹೋಳಿ ಹಬ್ಬಕ್ಕೆ ತಡೆ ಹಾಕಲಾಗಿದೆ. ಧಾರ್ಮಿಕ ಪೂಜೆ ಮತ್ತು ಸಾಂಪ್ರದಾಯಿಕ ಆಚರಣೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮುಜಾಂಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ. ಇದನ್ನು ಪಾಲನೆ ಮಾಡುವಲ್ಲಿ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಡಿಸಿ ಹೇಳಿದ್ದಾರೆ.
ಇದನ್ನೂ ಓದಿ
ಭಾರತದಲ್ಲಿ ಡಿಜಿಟಲ್ ಪ್ರಮಾಣ ಪತ್ರ, ಅಮೆರಿಕದಲ್ಲಿ ಕಾಗದದ ದಾಖಲೆ: ಕೊರೊನಾ ಲಸಿಕೆ ಪ್ರಕ್ರಿಯೆ ಹೋಲಿಸಿದ ನಂದನ್ ನಿಲೇಕಣಿ
Published On - 10:46 am, Thu, 25 March 21