ಧಾರವಾಡ: ಮಾವು ಬೆಳೆಯಲ್ಲಿ ಹೆಚ್ಚು ಫೇಮಸ್ ಆಗಿರುವ ಜಿಲ್ಲೆ ಧಾರವಾಡ. ಇಲ್ಲಿನ ಆಪೂಸ್ ಮಾವು ವಿದೇಶಕ್ಕೆ ರಫ್ತಾಗುವಷ್ಟು ಪ್ರಸಿದ್ಧಿಯನ್ನು ಹೊಂದಿದ್ದು, ಉಳಿದ ಕಡೆಗಳಲ್ಲಿ ಈ ತಳಿಯನ್ನು ಬೆಳೆಯುತ್ತಾರಾದರೂ ಧಾರವಾಡದ ಆಪೂಸ್ ಮಾವಿಗೆ ಇರುವ ಬೇಡಿಕೆಯೇ ಬೇರೆ. ಇಂಥ ಹಣ್ಣಿನ ನಡುವೆ ಸದ್ದಿಲ್ಲದೇ ಮತ್ತೊಂದು ಹಣ್ಣು ಧಾರವಾಡಕ್ಕೆ ಸೇರ್ಪಡೆಯಾಗಿದ್ದು, ಅದು ಸ್ಟ್ರಾಬೆರಿ ಹಣ್ಣು. ಅಷ್ಟಕ್ಕೂ ಇದನ್ನು ಬೆಳೆಯುತ್ತಿರುವುದು ಕೃಷಿಕರಲ್ಲ. ಬದಲಿಗೆ ಕೃಷಿಯನ್ನು ನಂಬಿ ಗುತ್ತಿಗೆದಾರನ ಕೆಲಸ ಬಿಟ್ಟು ಬಂದ ಓರ್ವ ವ್ಯಕ್ತಿ.
ಸಾಮಾನ್ಯವಾಗಿ ಬಯಲು ಸೀಮೆಯಲ್ಲಿ ಮಾವು, ಪೇರಲೆ, ಚಿಕ್ಕು, ಬಾಳೆಯಂತಹ ಬೆಳೆಯನ್ನು ಬೆಳೆಯಲಾಗುತ್ತದೆ. ಹಲವಾರು ವರ್ಷಗಳಿಂದ ಇದೇ ಹಣ್ಣುಗಳನ್ನು ಬೆಳೆದು ಜೀವನ ನಿರ್ವಹಣೆ ಮಾಡಿಕೊಂಡಿರುವ ಸಾಕಷ್ಟು ರೈತರು ಇಲ್ಲಿದ್ದಾರೆ. ಇಂತಹವರ ನಡುವೆ ಇದೀಗ ಒಂದೂವರೆ ವರ್ಷಗಳ ಹಿಂದೆ ತಮ್ಮೂರಿಗೆ ಮರಳಿ ಬಂದು ಹೊಸ ಬಗೆಯ ಹಣ್ಣನ್ನು ಬೆಳೆಯುತ್ತಿರುವ ವ್ಯಕ್ತಿಯೊಬ್ಬರು ಸೇರಿಕೊಂಡಿದ್ದು, ವಿಭಿನ್ನ ಬಗೆಯ ರೈತರ ಸಾಲಿಗೆ ನಿಲ್ಲುತ್ತಾರೆ. ಹೀಗೆ ಭಿನ್ನ ಪ್ರಯೋಗದ ಮೂಲಕ ಗಮನಸೆಳೆದವರು ರೈತ ಶಶಿಧರ ಗೊರವರ್.
ಕೃಷಿ ಮಾಡುವ ಹುಚ್ಚು, ಗುತ್ತಿಗೆದಾರ ಕೆಲಸಕ್ಕೆ ಗುಡ್ ಬೈ
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲ್ಲಂಬಿ ಗ್ರಾಮದ ಶಶಿಧರ್ ಗೊರವರ್ಗೆ 46 ವರ್ಷ ವಯಸ್ಸು. ಎಸ್ಎಸ್ಎಲ್ಸಿ ವರೆಗೆ ವ್ಯಾಸಂಗ ಮಾಡಿದ ಬಳಿಕ ಕೆಲಸ ಹುಡಿಕಿಕೊಂಡು ಮಹಾರಾಷ್ಟ್ರಕ್ಕೆ ಹೋದರು. ಅಲ್ಲಿ 10ವರ್ಷಗಳ ಕಾಲ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ಕೆಲಸ ಮಾಡಿದ್ದು, ಬಳಿಕ ತಮ್ಮದೇ ಸೂರಜ್ ಆ್ಯಂಡ್ ಕನ್ಸ್ಟ್ರಕ್ಷನ್ ಕಂಪನಿ ತೆರೆದು, ಸ್ವಂತ ಗುತ್ತಿಗೆ ಕೆಲಸ ಮಾಡಲು ಶುರು ಮಾಡಿದರು. ಒಮ್ಮೆ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಗುತ್ತಿಗೆ ಕೆಲಸ ಮಾಡುತ್ತಿರುವಾಗ ಸ್ಟ್ರಾಬೆರಿ ಹಣ್ಣು ಅವರ ಗಮನ ಸೆಳೆಯಿತು. ಅಲ್ಲಿ ಹೇರಳವಾಗಿ ಬೆಳೆಯಲಾಗುತ್ತಿದ್ದ ಸ್ಟ್ರಾಬೆರಿ ಹಣ್ಣನ್ನು ನೋಡಿ ತಮ್ಮೂರಿನಲ್ಲಿ ಅದನ್ನೇಕೆ ಬೆಳೆಯಲು ಶುರು ಮಾಡಬಾರದು ಅಂದುಕೊಂಡರು.
ಕಲಘಟಗಿ ತಾಲೂಕು ಮಲೆನಾಡ ಸೆರಗಿನಲ್ಲಿ ತಂಪಾದ ವಾತಾವರಣ ಇರುತ್ತದೆ ಎಂಬ ಕಾರಣಕ್ಕೆ ಈ ಬೆಳೆಯನ್ನು ಇಲ್ಲಿ ಬೆಳೆಯಲು ಯೋಚಿಸಿದರು. ತಮ್ಮ ಹುಲ್ಲಂಬಿ ಗ್ರಾಮದಲ್ಲಿ ಕೃಷಿ ಶುರು ಮಾಡಿಯೇಬಿಟ್ಟರು. ಈ ಬಗ್ಗೆ ಪತ್ನಿ ಜ್ಯೋತಿ ಹಾಗೂ ಮಕ್ಕಳಾದ ಸೂರಜ್, ಧೀರಜ್ ಜೊತೆಗೆ ಚರ್ಚೆ ಮಾಡಿದಾಗ, ಎಲ್ಲರಿಗೂ ಈ ಹೊಸ ಯೋಜನೆ ಇಷ್ಟವಾಯಿತು. ಕೂಡಲೇ ಇಡೀ ಕುಟುಂಬ ಅನೇಕ ಕೃಷಿ ಪ್ರದೇಶಗಳಲ್ಲಿಗೆ ಭೇಟಿ ನೀಡಿ, ಸ್ಟ್ರಾಬೆರಿ ಕೃಷಿ ಬಗ್ಗೆ ಮಾಹಿತಿ ಕಲೆ ಹಾಕಿತು. ಈ ಕೃಷಿಯನ್ನು ತಮ್ಮೂರಲ್ಲಿ ಮಾಡಲು ಸಾಧ್ಯ ಎನ್ನುವ ಆತ್ಮವಿಶ್ವಾಸ ಬಂದ ಕೂಡಲೇ ಒಂದೂವರೆ ವರ್ಷದ ಹಿಂದೆ ಮಹಾರಾಷ್ಟ್ರವನ್ನು ಬಿಟ್ಟು ನೇರವಾಗಿ ಹುಲ್ಲಂಬಿಗೆ ಬಂದು ಕೃಷಿಯನ್ನು ಆರಂಭಿಸಿದರು. ಪರಿಚಯಸ್ಥರ 6 ಎಕರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಪಡೆದು, ಅದರಲ್ಲಿ ಒಂದು ಎಕರೆಯಲ್ಲಿ ಸ್ಟ್ರಾಬೆರಿ ಕೃಷಿಯನ್ನು ಆರಂಭಿಸಿದರು.
ವರ್ಷಕ್ಕೆ 7 ಲಕ್ಷ ರೂಪಾಯಿ ಆದಾಯ
ಮೊದಲ ವರ್ಷ ಇಟಲಿ ಸೇರಿದಂತೆ ವಿವಿಧ ಕಡೆಗಳಿಂದ ಸಸಿಗಳನ್ನು ತರಿಸಿದರು. ಮೊದಲನೇ ವರ್ಷವೇ ಸಾಕಷ್ಟು ಲಾಭವಾಯಿತು. ಈ ವರ್ಷ ಸಸಿಗಳನ್ನು ತರಿಸಲು ಕೊರೊನಾ ಅಡ್ಡಿಯಾಗಿತ್ತು. ಆದರೆ ಯಾವುದೇ ಕಾರಣಕ್ಕೂ ಇದನ್ನು ಅರ್ಧಕ್ಕೆ ಬಿಡಬಾರದು ಎಂದು ನಿರ್ಧರಿಸಿ, ಅನೇಕರನ್ನು ಸಂಪರ್ಕ ಮಾಡಿ, ಕೊನೆಗೂ ಕ್ಯಾಲಿಫೋರ್ನಿಯಾದಿಂದ ಸಸಿಗಳನ್ನು ತರಿಸಿ ಕೃಷಿ ಮುಂದುವರಿಸಿದ್ದಾರೆ. ಇದೀಗ ಎರಡನೇ ಬೆಳೆ ಪಡೆದಿರುವ ಇವರಿಗೆ ಈ ವರ್ಷ ಸುಮಾರು 7 ಲಕ್ಷ ರೂಪಾಯಿ ಲಾಭವಾಗಿದೆ. ವರ್ಷಕ್ಕೆ 4 ಲಕ್ಷ ರೂಪಾಯಿ ಖರ್ಚು ಮಾಡಿ ಇಷ್ಟೊಂದು ಪ್ರಮಾಣದ ಲಾಭ ಪಡೆಯುವುದು ಕಷ್ಟಕರವೇ. ಆದರೂ ಕಷ್ಟಪಟ್ಟರೆ ಲಾಭ ಸಿಕ್ಕೇಸಿಗುತ್ತದೆ ಎನ್ನುವುದನ್ನು ಶಶಿಧರ ಕುಟುಂಬ ತೋರಿಸಿಕೊಟ್ಟಿದೆ.
ಇನ್ನುಳಿದ ಹೊಲದಲ್ಲಿಯೂ ಕೃಷಿ ಚಟುವಟಿಕೆ:
ಇನ್ನು ಉಳಿದ 5 ಎಕರೆ ಭೂಮಿಯಲ್ಲಿಯೂ ವಿವಿಧ ಬಗೆಯ ಕೃಷಿ ಮಾಡುತ್ತಿರುವ ಶಶಿಧರ ಕುಟುಂಬ ನಿತ್ಯವೂ 15 ಜನರಿಗೆ ಕೃಷಿ ಕೆಲಸವನ್ನು ನೀಡುತ್ತಿದೆ. ಉಳಿದ ಪ್ರದೇಶದಲ್ಲಿ ಗೋಲ್ಡನ್‌ಬೆರಿ, ಮಲ್ಬರಿ, ವಿವಿಧ ಬಗೆಯ ಹಣ್ಣು, ತರಕಾರಿ, ಮಸಾಲೆ, ಔಷಧಿ ಸಸ್ಯಗಳನ್ನು ಬೆಳೆಯುತ್ತಿದ್ದಾರೆ. ಇದರ ಜತೆಗೆ ಸ್ಟ್ರಾಬೆರಿ ಹಣ್ಣುಗಳಿಂದಲೇ ಚಾಕಲೇಟ್, ಜಾಮ್ ಸೇರಿ ಇತರ ಉತ್ಪನ್ನಗಳನ್ನು ಕೂಡ ತಯಾರಿಸುತ್ತಿದ್ದಾರೆ.
ಮಾರುಕಟ್ಟೆ ವ್ಯವಸ್ಥೆ ಹೇಗಿದೆ?
ನಿತ್ಯವೂ ಶಶಿಧರ 80 ರಿಂದ 100 ಕೆ.ಜಿ ಹಣ್ಣನ್ನು ಬೆಳೆಯುತ್ತಿದ್ದು, ಸೀಜನ್‌ನಲ್ಲಿ ದಿನಕ್ಕೆ 200 ರಿಂದ 400 ಕೆ.ಜಿ ಇಳುವರಿ ಕೂಡ ಸಿಗುತ್ತದೆ. ಹಣ್ಣುಗಳನ್ನು ಚಿಕ್ಕ ಪ್ಲಾಸ್ಟಿಕ್ ಬಾಕ್ಸ್ಗಳಲ್ಲಿ ಪ್ಯಾಕ್ ಮಾಡಿ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗೋವಾ, ಹೈದರಾಬಾದ್ ಸೇರಿದಂತೆ ಅನೇಕ ಕಡೆಗಳಲ್ಲಿ ಕಳಿಸಲಾಗುತ್ತಿದೆ. 1 ಕೆ.ಜಿಗೆ 250 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದು, ಹೀಗಾಗಿ ದಿನವೂ ಸಾವಿರಾರು ರೂಪಾಯಿ ಆದಾಯ ಪಡೆಯುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಶಿಧರ್, ಕೃಷಿಯನ್ನು ನಂಬಿ ಬದುಕು ಕಟ್ಟಿಕೊಳ್ಳಬೇಕೆಂದು ಬಂದಿದ್ದೇನೆ. ಭೂಮಿ ತಾಯಿ ಯಾವತ್ತೂ ಮೋಸ ಮಾಡುವುದಿಲ್ಲ. ಆಕೆಗೆ ಮೋಸ ಮಾಡುವುದೇ ಗೊತ್ತಿಲ್ಲ. ಇದಕ್ಕೆ ಸಾಕ್ಷಿಯೆಂದರೆ ನಾನೇ. ನಾನು ನಂಬಿ ಆರಂಭಿಸಿದ ಈ ಕೃಷಿ ಇವತ್ತು ಲಕ್ಷ ಲಕ್ಷ ರೂಪಾಯಿ ಆದಾಯ ನೀಡುತ್ತಿದೆ. ನಾವು ಪ್ರಾಮಾಣಿಕವಾಗಿ ದುಡಿದರೆ ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ತಿಳಿದುಕೊಂಡರೆ ಕೃಷಿಯಲ್ಲಿರುವ ತೃಪ್ತಿ ಮತ್ತೆಲ್ಲೂ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಕೃಷಿಯಿಂದ ದೂರ ಉಳಿದ ಅನೇಕರಿಗೆ ಶಶಿಧರ್ನಂತಹ ರೈತರು ಮಾದರಿಯಾಗಿದ್ದು, ಇವರ ಕೃಷಿ ಬೇರೆಯವರಿಗೂ ಸ್ಫೂರ್ತಿ ಯಾದರೆ ಅವರ ಶ್ರಮ ಸಾರ್ಥಕ.
ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದ ಬಾರೆ ಹಣ್ಣು: ಸ್ವಾಭಿಮಾನದ ಬದುಕಿಗೆ ಆಸರೆಯಾಯ್ತು ಕೃಷಿ