ಕೊಪ್ಪಳ: ಭತ್ತದ ನಾಡಿನಲ್ಲಿ ಕೃಷಿ ಚಟುವಟಿಕೆಗೆ ಕೊರತೆ ಇಲ್ಲ. ನಿತ್ಯ ಒಂದಲ್ಲಾ ಒಂದು ಕೃಷಿ ಕೆಲಸ ಇದ್ದೇ ಇರುತ್ತದೆ. ಆದರೆ ಇದೀಗ ಕೃಷಿ ಚಟುವಟಿಕೆಗೆ ಕೂಲಿ ಆಳುಗಳು ಸಿಗುತ್ತಿಲ್ಲ ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ . ಆದರೆ ಈ ಸಮಸ್ಯೆಗೆ ಗ್ರಾಮ ಪಂಚಾಯತಿ ಚುನಾವಣೆಯೇ ಕಾರಣವಾಗಿರುವುದು ಅಚ್ಚರಿಯ ವಿಚಾರ..!
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದು ಎರಡನೇ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಹಳ್ಳಿಗಳಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ. ಆದರೆ ಭತ್ತದ ತವರು ಗಂಗಾವತಿಯಲ್ಲಿ ಚುನಾವಣೆಯಿಂದ ಕೂಲಿ ಆಳುಗಳ ಕೊರತೆ ಉಂಟಾಗಿದೆ. ತಾಲೂಕಿನಲ್ಲಿ ಭತ್ತದ ನಾಟಿ ಜೋರಾಗಿದ್ದರೆ, ಇತ್ತ ಕೃಷಿ ಕೂಲಿ ಕಾರ್ಮಿಕರು ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.
ಪ್ರತಿನಿತ್ಯ ಜಮೀನಿನಲ್ಲಿ ಕೆಲಸ ಮಾಡಿದ್ರೆ 300 ರೂ. ಕೂಲಿ ಸಿಗುತ್ತದೆ. ಆದರೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾದ್ರೆ 500 ರೂ. ಜೊತೆಗೆ ಬಾಡೂಟ ಸಿಗುತ್ತದೆ. ಹೀಗಾಗಿ ಕೃಷಿ ಕೂಲಿ ಕಾರ್ಮಿಕರು ಇದೀಗ ಅಭ್ಯರ್ಥಿಗಳ ಹಿಂದೆ ಚುನಾವಣೆ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಗಂಗಾವತಿ ತಾಲೂಕಿನ 18 ಗ್ರಾಮ ಪಂಚಾಯತಿಗೆ ಎರಡನೆ ಹಂತದಲ್ಲಿ ಚುನಾವಣೆ ನಡೆಯಲಿದೆ. ಇಗಾಗಲೇ ಅಭ್ಯರ್ಥಿಗಳಿಗೆ ಚಿಹ್ನೆಗಳು ಸಿಕ್ಕಿದ್ದು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
ಒಬ್ಬರ ಜೊತೆ ಹಲವರು
ಅಭ್ಯರ್ಥಿಗಳು ಚುನಾವಣೆ ದಿನ ಸಮೀಪ ಬರುತ್ತಿದ್ದಂತೆ ಪ್ರಚಾರದ ಕಾರ್ಯ ಜೋರಾಗಿ ಮಾಡುತ್ತಿದ್ದಾರೆ. ಬರೀ ಮನೆ ಮಂದಿಯಲ್ಲ ಪ್ರಚಾರ ಮಾಡಿದರೆ ಸಾಲಲ್ಲ ಎಂದು ಒಬ್ಬರ ಜೊತೆ ಹತ್ತು ಹನ್ನೆರಡು ಕೂಲಿ ಕಾರ್ಮಿಕರನ್ನು ಕರೆತಂದು ಮತ ಕೇಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಕೂಲಿ ಆಳುಗಳಿಗೆ ಹಣ ಸಂದಾಯ ಮಾಡಲಾಗುತ್ತಿದೆ.
ಆಳುಗಳಿಗೆ ಬೇಡಿಕೆ
ಗಂಗಾವತಿ ನೀರಾವರಿ ಪ್ರದೇಶ. ಈಗಾಗಲೇ ಸಾಣಾಪೂರ, ಕೆಸರಟ್ಟಿ, ಮಲ್ಲಾಪೂರ, ಢಾಣಾಪೂರ ಭಾಗದಲ್ಲಿ ಭತ್ತ ನಾಟಿ ಮಾಡುವ ಕಾರ್ಯ ಆರಂಭವಾಗಿದೆ. ಪ್ರಥಮ ಹಂತದ ಕೃಷಿ ಚಟುವಟಿಕೆಯಲ್ಲಿ ರೈತರು ಮಗ್ನರಾಗಿದ್ದಾರೆ. ಆದರೆ ಚುನಾವಣೆಯಿಂದ ಆಳುಗಳೇ ಸಿಗುತ್ತಿಲ್ಲ. ಕೂಲಿ ಆಳುಗಳು ಸದ್ಯ ಕೂಲಿ ಕೆಲಸಕ್ಕೆ ಗುಡ್ ಬಾಯ್ ಹೇಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ಸಹಜವಾಗಿ ಕೂಲಿ ಆಳುಗಳಿಗೆ ಡಿಮ್ಯಾಂಡ್ ಬಂದಿದೆ.
ಚುನಾವಣೆ ಹಿನ್ನೆಲೆ ಭತ್ತ ನಾಟಿ ಮಾಡಲು ಕೂಲಿ ಆಳುಗಳೇ ಬರ್ತಿಲ್ಲ, ಹೀಗಾಗಿ ಕೆಲವು ಕಡೆ ಕೆಲಸ ಮುಂದಕ್ಕೆ ಹಾಕಿದ್ರೆ, ಮತ್ತೆ ಹಲವೆಡೆ ಅನಿವಾರ್ಯವಾಗಿ ಮನೆಯವರೇ ಭತ್ತ ನಾಟಿ ಮಾಡುತ್ತಿದ್ದಾರೆ. ಬಹುತೇಕ ಕೂಲಿ ಆಳುಗಳು ಚುನಾವಣೆ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ ಎಂದು ರೈತ ಮುಖಂಡ ಶರಣೇಗೌಡ ತಿಳಿಸಿದ್ದಾರೆ.
Published On - 1:25 pm, Fri, 25 December 20