ಧಾರವಾಡ: ಸುಂದರ ಪರಿಸರ ಎಂದ ಕೂಡಲೆ ಎಲ್ಲರ ಮನಸ್ಸಿನಲ್ಲಿ ಮೂಡುವುದು ಧಾರವಾಡ ನಗರದ ಚಿತ್ರಣ. ಇದಕ್ಕೆ ಕಾರಣ ಅಲ್ಲಿ ಅಚ್ಚುಕಟ್ಟಾಗಿ ನಿರ್ಮಿಸಿರುವ ರಸ್ತೆಗಳು ಮತ್ತು ಸ್ವಚ್ಛವಾದ ಪರಿಸರ. ಆದರೆ ಧಾರವಾಡದಲ್ಲಿಯೇ ಒಂದು ರಸ್ತೆ ಇದೆ. ಅದು ಪ್ರಸಿದ್ಧ ಮಠಕ್ಕೆ ಹೋಗುವ ರಸ್ತೆಯೂ ಹೌದು. ಈ ರಸ್ತೆಯಲ್ಲಿಯೇ ಮಾಜಿ, ಹಾಲಿ ಶಾಸಕರು ಹಾಗೂ ಇಬ್ಬರು ಮಹಾನಗರ ಪಾಲಿಕೆಯ ಸದಸ್ಯರ ಮನೆಗಳು ಕೂಡ ಬರುತ್ತವೆ. ಆದರೆ ಆ ರಸ್ತೆ ಮೂಲಕ ಹೋಗಬೇಕೆಂದರೆ ಒಂದೋ ನಿಮ್ಮ ಜೀವ ಗಟ್ಟಿಯಾಗಿರಬೇಕು, ಇಲ್ಲವೇ ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರಬೇಕು. ಅಷ್ಟರಮಟ್ಟಿಗೆ ಈ ರಸ್ತೆ ಹಾಳಾಗಿದೆ.
ವಿದ್ಯಾಕಾಶಿಯ ಮಧ್ಯಭಾಗದಲ್ಲಿಯೇ ಇದೆ ಈ ರಸ್ತೆ:
ಧಾರವಾಡ ನಗರದ ಹೃದಯ ಭಾಗದಲ್ಲಿರುವ ಹಳೆಯ ಡಿವೈಎಸ್ಪಿ ವೃತ್ತದಿಂದ ಮುರುಘಾ ಮಠಕ್ಕೆ ಹೋಗುವ ರಸ್ತೆಯೇ ಇದೀಗ ತನ್ನ ವ್ಯಥೆಯ ಕಥೆಯನ್ನು ಹೇಳುತ್ತಿದೆ. ಕಳೆದ ಹಲವಾರು ವರ್ಷಗಳಿಂದಲೂ ಈ ರಸ್ತೆ ದುರಸ್ತಿಯಾಗುತ್ತದೆ ಎಂದು ಜನರೆಲ್ಲಾ ಕಾದು ಕಾದು ಸುಸ್ತಾಗಿ ಹೋಗಿದ್ದಾರೆ. ಈ ರಸ್ತೆ ಪ್ರಸಿದ್ಧ ಮುರುಘಾ ಮಠಕ್ಕೆ ದಾರಿಯೂ ಆಗಿರುವುದರಿಂದ ಇದನ್ನು ತುಂಬಾನೇ ಚೆನ್ನಾಗಿ ನಿರ್ಮಿಸಬೇಕು ಎನ್ನುವ ಆಗ್ರಹ ಬಹಳ ದಿನದ ಹಿಂದೆಯೇ ಆಗಿತ್ತು. ಇದೇ ಕಾರಣಕ್ಕೆ ಈ ರಸ್ತೆಯನ್ನು ಟೆಂಡರ್ ಶ್ಯೂರ್ ರಸ್ತೆಯನ್ನಾಗಿ ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಆದರೆ ಈ ರಸ್ತೆಯ ಗ್ರಹಗತಿಯೇ ಸರಿ ಇಲ್ಲ ಎಂದು ಕಾಣುತ್ತದೆ. ಇದರ ಗುತ್ತಿಗೆಯನ್ನು ಟ್ರಿನಿಟಿ ಗ್ರುಪ್ ಎನ್ನುವ ಕಂಪನಿಗೆ 2017 ರಲ್ಲಿಯೇ ನೀಡಲಾಯಿತು. ಆದರೆ ಕೆಲಸ ಮಾತ್ರ ಆರಂಭವಾಗಲೇ ಇಲ್ಲ.
ಈ ರಸ್ತೆಯ ವಿಶೇಷ:
ಸ್ಮಾರ್ಟ್ ಸಿಟಿ ಯೋಜನೆಗೆ ಅವಳಿ ನಗರ ಆಯ್ಕೆಯಾದಾಗಿನಿಂದ ಅಲ್ಲಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಲೇ ಇವೆ. ಇಂತಹ ವೇಳೆಯಲ್ಲಿ ಅವಳಿ ನಗರದಲ್ಲಿ ಟೆಂಡರ್ ಶ್ಯೂರ್ ಯೋಜನೆಗೆ ಆಯ್ಕೆಯಾದ ಮೊದಲ ರಸ್ತೆ ಇದು. ಜನರ ದುರ್ದೈವವೋ ಗೊತ್ತಿಲ್ಲ. 2017 ರಲ್ಲಿಯೇ ಇದು ಅಂತಿಮವಾದರೂ, ಆದರೆ ಇದುವರೆಗೂ ಈ ಕಾಮಗಾರಿಯೇ ಮುಗಿದಿಲ್ಲ. ಇದರಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
18 ಕೋಟಿ ರೂಪಾಯಿ ಕಾಮಗಾರಿ:
ಧಾರವಾಡ ನಗರದ ಹಳೆಯ ಡಿವೈಎಸ್ಪಿ ವೃತ್ತದಿಂದ ಮುರುಘಾಮಠದವರೆಗೆ ಸುಮಾರು 2.4 ಕೋಟಿ ರೂಪಾಯಿ ವೆಚ್ಚದ ಯೋಜನೆಯಿದಾಗಿದ್ದು. ಒಟ್ಟು 18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾತ್ತಿರುವ ರಸ್ತೆಯಿದು. ಕಾಮಗಾರಿ ಆರಂಭವಾಗಿ ಹಲವಾರು ವರ್ಷಗಳೇ ಕಳೆದಿವೆ. ಆದರೂ ಕಾಮಗಾರಿ ಮಾತ್ರ ಅಂತಿಮ ಹಂತ ತಲುಪುತ್ತಲೇ ಇಲ್ಲ. ಇದರಿಂದಾಗಿ ಜನರು ನಿತ್ಯವೂ ಧೂಳನ್ನು ಕುಡಿದು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಇದೇ ರಸ್ತೆಯಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರ ಮನೆಯೂ ಬರುತ್ತದೆ. ಆಗಾಗ ಅವರು ಈ ರಸ್ತೆ ಕಾಮಗಾರಿ ವೀಕ್ಷಣೆ ಮಾಡುತ್ತಲೇ ಇರುತ್ತಾರೆ. ಆದರೂ ಕಾಮಗಾರಿಗೆ ವೇಗ ಸಿಗುತ್ತಿಲ್ಲ.
ಈ ಬಗ್ಗೆ ಏನಂತಾರೆ ಅಧಿಕಾರಿಗಳು:
ಈ ಕಾಮಗಾರಿಯ ಉಸ್ತುವಾರಿಯನ್ನು ಕೆ-ಶಿಪ್ನ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಇದರ ಸಂಪೂರ್ಣ ಮಾಹಿತಿಯನ್ನು ಅವರೇ ಪಡೆದುಕೊಳ್ಳುತ್ತಾರೆ ಎಂದು ಹೇಳುವ ಅಧಿಕಾರಿಗಳು. ಈ ಬಗ್ಗೆ ಕೆ-ಶಿಪ್ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀಶೈಲ ಹೊನಕೇರಿಯವರನ್ನು ಕೇಳಿದರೆ, ಗುತ್ತಿಗೆದಾರರು ಕಾಮಗಾರಿಯನ್ನು 2 ತಿಂಗಳಲ್ಲಿ ಮುಗಿಸುವುದಾಗಿ ಹೇಳಿದ್ದಾರೆ. ಅದಾಗಲೇ ಎಲ್ಲಾ ಕೆಲಸಗಳು ಮುಕ್ತಾಯವಾಗಿವೆ. ಇದೀಗ ರಸ್ತೆಗೆ ಕೊನೆಯ ಹಂತದಲ್ಲಿ ಬಿಟ್ಯುಮಿನ್ ಹಾಕಬೇಕಿದೆ. ಇನ್ನು 2 ತಿಂಗಳಲ್ಲಿ ಎಲ್ಲಾ ಕೆಲಸ ಮುಗಿಸಿ, ಸಾರ್ವಜನಿಕ ಸೇವೆಗೆ ಈ ರಸ್ತೆ ಲಭ್ಯವಾಗುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಅದಾಗಲೇ ಇಂತಹ ರಸ್ತೆಯಲ್ಲಿಯೇ 4 ವರ್ಷ ಸಂಚರಿಸಿ, ಸಂಕಷ್ಟ ಅನುಭವಿಸಿದ ಜನರಿಗೆ ಮುಂದಿನ ದಿನಗಳಲ್ಲಾದರೂ ಒಳ್ಳೆಯ ರಸ್ತೆಯಲ್ಲಿ ಓಡಾಡುವ ಅವಕಾಶ ಸಿಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಕೋಟೆನಾಡಿನಲ್ಲಿ ಮುಗಿಯದ ರಸ್ತೆ ಕಾಮಗಾರಿ: ಹೆಚ್ಚಿನ ಧೂಳಿನಿಂದ ಸೃಷ್ಟಿಯಾಯ್ತು ಕೊರೊನಾ ಆತಂಕ