ಧಾರವಾಡ, ಡಿಸೆಂಬರ್ 23: ಧಾರವಾಡ (Dharwad) ಜಿಲ್ಲೆಯ ಅಳ್ನಾವರ (Alnavara) ತಾಲೂಕಿನ ಕಡಬಗಟ್ಟಿ ಬಳಿಯ ಧಾರವಾಡ-ಅಳ್ನಾವರ-ಗೋವಾ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಐಶರ್ ವಾಹನದಲ್ಲಿದ್ದ ಶಿರಸಂಗಿಯ ಹನುಮಂತಪ್ಪ ಮಲ್ಲಾಡ (45), ಮಹಾಂತೇಶ್ ಚವ್ಹಾಣ್ (40), ಮಹದೇವ ಹಾಲೊಳ್ಳಿ (40) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಐವರಿಗೆ ಗಂಭೀರ ಗಾಯಾವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ರೈತರಾದ ಹನುಮಂತಪ್ಪ ಮಲ್ಲಾಡ, ಮಹಾಂತೇಶ್ ಚವ್ಹಾಣ್ ಮತ್ತು ಮಹದೇವ ಹಾಲೊಳ್ಳಿ ಐಶರ್ ವಾಹನದಲ್ಲಿ ಮೇವಿನ ಹೊಟ್ಟು ತುಂಬಿಕೊಂಡು ಗೋವಾದ ಕಡೆಗೆ ಹೊರಟಿದ್ದರು. ಗೋವಾದಲ್ಲಿ ಮೇವಿನ ಹೊಟ್ಟಿಗೆ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಹೊಟ್ಟು ಮಾರಾಟ ಮಾರಲು ಧಾರವಾಡ ಕಡೆಯಿಂದ ಗೋವಾಗೆ ತೆರಳುತ್ತಿದ್ದರು.
ಎದುರಿಗೆ, ಗೋವಾದಿಂದ ಚಿತ್ರದುರ್ಗದ ಕಡೆ ಟಿಟಿ ವಾಹನ ಬರುತ್ತಿತ್ತು. ಅಳ್ನಾವರ ತಾಲೂಕಿನ ಕಡಬಗಟ್ಟಿ ಬಳಿ ಐಶರ್ ಮತ್ತು ಟಿಟಿ ವಾಹನ ಮುಖಾಮುಖಿ ಡಿಕ್ಕಿಯಾಗಿವೆ. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಉದ್ಯಮಿ ಸೇರಿ 6 ಜನ ಅಪ್ಪಚ್ಚಿ: ಕಾರಿನ ಮೇಲೆ ಲಾರಿ ಬಿದ್ದಿದ್ದೇಗೆ? ಘಟನೆಗೆ ಕಾರಣವೇನು?
ಶಿವಮೊಗ್ಗ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ನಲ್ಲಿ ರವಿವಾರ (ಡಿಸೆಂಬರ್ 22) ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರ ಮೃತಪಟ್ಟಿದ್ದಾರೆ. ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವಿಗೀಡಾಗಿದ್ದಾರೆ. ಮೃತ ಯುವಕರ ಗುರುತು ಇನ್ನೂ ಪತ್ತೆಯಾಗಿಲ್ಲ. ಪೂರ್ವ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇತ್ತೀಚಿಗೆ ನೆಲಮಂಗಲದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಆರು ಜನ ಮೃತಪಟ್ಟಿದ್ದರು. ಬೆಂಗಳೂರಿನ ಕಡೆಗೆ ಬರುತ್ತಿದ್ದ ವೋಲ್ವೋ ಕಾರಿನ ಮೇಲೆ ಸುಮಾರು 40 ಟನ್ ತೂಕದ ಕಂಟೇನರ್ ಬಿದ್ದ ಪರಿಣಾ ಕಾರು ಅಪ್ಪಚ್ಚಿಯಾಗಿತ್ತು. ಕಾರಿನಲ್ಲಿದ್ದ ಆರೂ ಜನ ಮೃತಪಟ್ಟಿದ್ದು.
ಈ ಘಟನೆ ಮಾಸುವ ಮುನ್ನವೇ ಮಂಡ್ಯ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟುದ್ದರು. ವಿದ್ಯಾರ್ಥಿಗಳು ತಲಕಾಡಿಗೆ ಕಾರಿನಲ್ಲಿ ಹೋಗುತ್ತಿದ್ದರು. ಹೆದ್ದಾರಿಯಲ್ಲಿ ಎದುರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಓವರ್ಟೆಕ್ ಮಾಡಿ ಹೋಗಿ ಕಾರು ಲಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಓರ್ವ ಗಂಭೀರವಾಗಿ ಗಾಯಗೊಂಡಿದ್ದನು.
Published On - 12:24 pm, Mon, 23 December 24