ಧಾರವಾಡ: ಜಿಲ್ಲೆಗೆ ಎರಡು ಡಿಎಚ್ಒಗಳ ಭಾಗ್ಯ ಒದಗಿ ಬಂದಿದೆ. ಇದು ಸರ್ಕಾರವೇ ನಿಯೋಜಿಸಿರುವುದು ಅಲ್ಲ, ಸರ್ಕಾರ ಮಾಡಿದ ವರ್ಗಾವಣೆಯಿಂದ ಆದ ಎಡವಟ್ಟು. ಕೆಲ ತಿಂಗಳ ಹಿಂದಷ್ಟೇ ಗದಗ್ ಜಿಲ್ಲೆಯ ಆರೋಗ್ಯಾಧಿಕಾರಿ ಡಾ. ಬಸವನಗೌಡ ಕರಿಗೌಡರ್ ಅವರನ್ನು ಧಾರವಾಡ ಜಿಲ್ಲೆಗೆ ವರ್ಗವಣೆ ಮಾಡಲಾಗಿತ್ತು. ಆದರೆ ವರ್ಗ ಮಾಡಿದ ಒಂದು ವರ್ಷದೊಳಗೆ ಮತ್ತೆ ಇವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಇವರ ಜಾಗಕ್ಕೆ ಡಾ. ಶಶಿ ಪಾಟೀಲ್ ಅವರನ್ನು ವರ್ಗ ಮಾಡಿತು. ಆದರೆ ಸರಕಾರದ ನಿಯಮಗಳ ಪ್ರಕಾರ ಒಂದು ವರ್ಷದೊಳಗೆ ಯಾವುದೇ ಅಧಿಕಾರಿಯನ್ನು ವರ್ಗ ಮಾಡುವಂತಿಲ್ಲ. ಆದರೆ ಸರಕಾರ ಒಂದು ವರ್ಷದೊಳಗೆ ತಮ್ಮ ವರ್ಗಾವಣೆ ಮಾಡಿದ್ದರಿಂದ ಸರಕಾರದ ಆದೇಶವನ್ನು ಪ್ರಶ್ನಿಸಿ ಕೆಎಟಿ ಮೊರೆ ಹೋದರು. ಇದೀಗ ಕೆಎಟಿಯಲ್ಲಿ ಇವರ ಪರವಾಗಿ ಆದೇಶ ಬಂದಿದ್ದು, ಇವರನ್ನು ಮರುನಿಯೋಜನೆ ಮಾಡುವಂತೆ ಸರಕಾರಕ್ಕೆ ಆದೇಶ ನೀಡಿದೆ ಎಂದು ಆರೋಗ್ಯಾಧಿಕಾರಿ ಬಸವನಗೌಡ ಹೇಳುತ್ತಾರೆ.
ಇತ್ತ ಕೋರ್ಟ್ ಆದೇಶದ ಪ್ರತಿಯೊಂದಿಗೆ ಬಂದ ಡಾ. ಕರಿಗೌಡರ್ ನೇರವಾಗಿ ಬಂದು ಡಿಎಚ್ಒ ಕಚೇರಿ ಬಳಿ ಇದ್ದ ಡಾ. ಶಶಿ ಪಾಟೀಲ್ ಅವರ ಬೋರ್ಡ್ ಅನ್ನು ತೆಗೆಯಿಸಿ ತಮ್ಮ ಬೋರ್ಡ್ ಹಾಕಿ ಕುಳಿತುಕೊಂಡು ಕೆಲಸ ಶುರು ಮಾಡಿದ್ಧಾರೆ. ಆದರೆ ಡಾ. ಕರಿಗೌಡರ್ ನೇರವಾಗಿ ಬಂದು ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಡಾ. ಶಶಿ ಪಾಟೀಲ್ ಅವರ ಹೇಳುತ್ತಿದ್ದಾರೆ. ಏಕೆಂದರೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಆದೇಶವನ್ನು ಮಾರ್ಪಾಡು ಮಾಡಬೇಕು. ಆ ಆದೇಶದ ಪ್ರತಿಯೊಂದಿಗೆ ಬಂದು ಅವರು ಕೆಲಸಕ್ಕೆ ಹಾಜರಾಗಬೇಕು ಎಂದು ವಾದಿಸುತ್ತಿದ್ದಾರೆ.
ಇದೇ ಕಾರಣಕ್ಕೆ ಇವರಿಬ್ಬರು ಜಿಲ್ಲಾಡಳಿತದ ವಿವಿಧ ಸಭೆಗಳಿಗೆ ಡಾ. ಶಶಿ ಪಾಟೀಲ್ ಹಾಜರಾಗುತ್ತಿದ್ದಾರೆ. ಕಚೇರಿಯಲ್ಲಿ ಕುಳಿತು ಡಿಎಚ್ಒ ಕೆಲಸವನ್ನು ಡಾ. ಕರಿಗೌಡರ್ ನಿರ್ವಹಿಸುತ್ತಿದ್ದಾರೆ. ಕಚೇರಿಯ ಇನ್ನು ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಡಾ. ಸುರೇಶ ಇಟ್ನಾಳ್ ಅವರನ್ನು ಕೇಳಿದರೆ, ಈ ಬಗ್ಗೆ ಡಾ. ಕರಿಗೌಡರ್ ನನ್ನೊಂದಿಗೆ ಮಾತನಾಡಿದ್ದಾರೆ. ಕೋರ್ಟ್ ಆದೇಶದ ಪ್ರತಿ ಬಂದ ಬಳಿಕ ಮುಂದಿನ ನಿರ್ಧಾರವನ್ನು ಮಾಡಲಾಗುವುದು ಎಂದಿದ್ದಾರೆ.
ಇದೀಗ ಜಿಲ್ಲೆಯಲ್ಲಿ ಈ ಇಬ್ಬರು ಅಧಿಕಾರಿಗಳ ಬಗ್ಗೆಯೇ ಚರ್ಚೆ ಶುರುವಾಗಿದೆ. ಒಂದು ಕಡೆ ವರ್ಷವಾಗುವುದರ ಒಳಗೆ ಅಧಿಕಾರಿಯನ್ನು ವರ್ಗ ಮಾಡಿದ ಇಲಾಖೆ ವಿರುದ್ಧ ಜನರು ಮಾತನಾಡುತ್ತಿದ್ದರೆ, ಮತ್ತೊಂದು ಕಡೆ ಕುರ್ಚಿಗಾಗಿ ಹೊಡೆದಾಡುತ್ತಿರುವ ಅಧಿಕಾರಿಗಳ ಬಗ್ಗೆ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಈ ತಿಕ್ಕಾಟ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಕಾರವಾರ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:23 pm, Sun, 6 November 22