ಶಾಲೆಗಳಿಗೆ ಅನುದಾನ ನೀಡದ ಕರ್ನಾಟಕ ಸರ್ಕಾರ; ಸರ್ಕಾರಿ ಶಾಲೆಗಳಲ್ಲಿ ಮರಿಚಿಕೆಯಾದ ಮೂಲಭೂತ ಸೌಕರ್ಯಗಳು
ನಮ್ಮ ರಾಜ್ಯದಲ್ಲಿ ಈಗಾಗಲೇ ಅದೆಷ್ಟೋ ಸರ್ಕಾರಿ ಶಾಲೆಗಳ ಮುಚ್ಚುವ ಹಂತಕ್ಕೆ ಬಂದಿದೆ. ಇಂತಹ ಸಮಯದಲ್ಲೇ ಶಾಲೆಗಳನ್ನ ಅಭಿವೃದ್ಧಿ ಮಾಡಬೇಕಾದ ಜವಬ್ದಾರಿ ಸರ್ಕಾರದ್ದು. ಆದರೆ ಸರ್ಕಾರ ಈ ಬಾರಿ ಅನುದಾನವೇ ಬಿಡುಗಡೆ ಮಾಡಿಲ್ಲ.
ಹುಬ್ಬಳ್ಳಿ: ರಾಜ್ಯದಲ್ಲಿ ಈಗಾಗಲೇ ಅದೆಷ್ಟೋ ಸರ್ಕಾರಿ ಶಾಲೆಗಳ ಮುಚ್ಚುವ ಹಂತಕ್ಕೆ ಬಂದಿದೆ. ಇಂತಹ ಸಮಯದಲ್ಲಿ ಶಾಲೆಗಳನ್ನ ಅಭಿವೃದ್ಧಿ ಮಾಡಬೇಕಾದ ಜವಬ್ದಾರಿ ಸರ್ಕಾರದ್ದು. ಸರ್ಕಾರಿ ಶಾಲೆಗಳಿಗೆ ಬೇಕಾದ ಅನುದಾನ ಬಿಡುಗಡೆ ಮಾಡುವುದು ಶಿಕ್ಷಣ ಇಲಾಖೆ ಕೆಲಸ. ಆದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಈ ವರ್ಷ ಶಾಲೆಗಳಿಗೆ ಅನುದಾನ ನೀಡಿಲ್ಲ. ಇದರಿಂದಾಗಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳೇ ಮರೀಚಿಕೆಯಾಗಿವೆ. ಪ್ರತಿ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಶಾಲೆಗಳಿಗೆ ಅನುದಾನವನ್ನ ನೀಡಲಾಗುತ್ತದೆ. ಈ ಹಣವನ್ನ ನೇರವಾಗಿ ಶಾಲೆಗಳಿಗೆ ಹಂತಹಂತವಾಗಿ ಬಿಡುಗಡೆಗೊಳಿಸಲಾಗುತ್ತದೆ. ಆದರೆ ಈ ವರ್ಷ ಕೇವಲ ಕೆಲವು ಶಾಲೆಗಳಿಗೆ ಐದು ಸಾವಿರ ಬಿಡುಗಡೆ ಮಾಡಿ ಕೈ ತೊಳೆದುಕೊಂಡಿದೆ. ಅಲ್ಲದೆ ಅನೇಕ ಶಾಲೆಗಳಿಗೆ ನೀಡಿದ ಅನುದಾನವನ್ನ ಸರ್ಕಾರ ವಾಪಸ್ಸ್ ಕಸಿದುಕೊಂಡಿದೆ. ಇದೇ ಕಾರಣಕ್ಕೆ ಸರ್ಕಾರ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.
ರಾಜ್ಯದಲ್ಲಿ 52 ಸಾವಿರ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿವೆ. 1 ಕೋಟಿ 40 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಬಡ ಮಕ್ಕಳು ಓದುವ ಸರ್ಕಾರ ಶಾಲೆಗಳನ್ನೇ ಸರ್ಕಾರ ಕಡೆಗಣಿಸಿದೆ. 1 ರಿಂದ 15 ಮಕ್ಕಳಿರುವ ಶಾಲೆಗಳಿಗೆ 12,500 ರೂ., 16 ರಿಂದ 100 ಮಕ್ಕಳಿರುವ ಶಾಲೆಗಳಿಗೆ 25,000 ರೂ., 101ರಿಂದ 250 ಮಕ್ಕಳಿರುವ ಶಾಲೆಗಳಿಗೆ 50,000 ರೂ., 251 ರಿಂದ 1000 ಮಕ್ಕಳಿರುವ ಶಾಲೆಗಳಿಗೆ 75,000 ರೂ., 1000 ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಒಂದು ಲಕ್ಷ ನೀಡಬೇಕೆಂಬುದು ಸರ್ಕಾರದ ಆದೇಶವಿದೆ.
ಆದೇಶದ ಪ್ರಕಾರವೇ ಸರ್ಕಾರಿ ಶಾಲೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಬೊಮ್ಮಾಯಿ ಸರ್ಕಾರಕ್ಕೆ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುವ ಸರ್ಕಾರಿ ಶಾಲೆಗಳೆಂದರೆ ಅಷ್ಟೊಂದು ಅಸಡ್ಡೆ ಏಕೆ? ಸರ್ಕಾರ ನಿರ್ಲಕ್ಷ್ಯತನವನ್ನ ಬಿಟ್ಟು ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿ ಮಕ್ಕಳ ಹಿತ ಕಾಪಾಡಬೇಕಿದೆ.
ವರದಿ: ರಹಮತ್ ಕಂಚಗಾರ್, ಟಿವಿ9 ಹುಬ್ಬಳ್ಳಿ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ