ಅಜ್ಜಿಯ ದೂರನ್ನು ಮೂಢನಂಬಿಕೆ ಎಂದು ವಾಪಸ್ ಕಳುಹಿಸಿದ್ದ ಪೊಲೀಸರು; ಹುಬ್ಬಳ್ಳಿಯಲ್ಲಿ ನಡೆಯಿತು ನೇಹಾ ಮಾದರಿಯ ಮತ್ತೊಂದು ಕೊಲೆ

ಹುಬ್ಬಳ್ಳಿಯಲ್ಲಿ ನೇಹಾ ಮಾದರಿಯ ಮತ್ತೊಂದು ಕೊಲೆಯಾಗಿದೆ. ಆದರೆ, ಇದಕ್ಕೆ ಪೊಲೀಸರ ದಿವ್ಯ ನಿರ್ಲಕ್ಷ್ಯವೂ ಕಾರಣವಾಗಿದೆ. ಮೃತ ಯುವತಿಯ ಅಜ್ಜಿ ನೀಡಿದ್ದ ದೂರನ್ನು ಮೂಢನಂಬಿಕೆ ಎಂದಿದ್ದ ಪೊಲೀಸರು ಅವರನ್ನು ವಾಪಸ್ ಕಳುಹಿಸಿದ್ದರು. ಪರಿಣಾಮವಾಗಿ ಬುಧವಾರ ಬೆಳಗ್ಗೆ ನಸುಕಿನಲ್ಲೇ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಕೊಲೆ ನಡೆದಿದೆ.

ಅಜ್ಜಿಯ ದೂರನ್ನು ಮೂಢನಂಬಿಕೆ ಎಂದು ವಾಪಸ್ ಕಳುಹಿಸಿದ್ದ ಪೊಲೀಸರು; ಹುಬ್ಬಳ್ಳಿಯಲ್ಲಿ ನಡೆಯಿತು ನೇಹಾ ಮಾದರಿಯ ಮತ್ತೊಂದು ಕೊಲೆ
ಆರೋಪಿ ವಿಶ್ವ ಅಲಿಯಾಸ್ ಗೀರಿಶ್
Edited By:

Updated on: May 15, 2024 | 10:03 AM

ಹುಬ್ಬಳ್ಳಿ, ಮೇ 15: ನೇಹಾ ಹಿರೇಮಠ ಕೊಲೆಯ (Neha Hiremath Murder Case) ಕಹಿ ನೆನಪು ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ (Hubballi) ಅಂಥದ್ದೇ ಮತ್ತೊಂದು ಘಟನೆ ನಡೆದಿದೆ. ನಸುಕಿನ ಜಾವ ನಸುನಿದ್ದೆಯಲ್ಲಿದ್ದ ಯುವತಿಯನ್ನು ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಹತ್ಯೆ ಮಾಡಿದ ಭೀಕರ ಘಟನೆಗೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಓಣಿ ಸಾಕ್ಷಿಯಾಗಿದೆ. ಮೃತ ಯುವತಿಯನ್ನು ಅಂಜಲಿ ಅಂಬಿಗೇರ (Anjali Ambigera) ಎಂದು ಗುರುತಿಸಲಾಗಿದೆ. ವಿಶ್ವ ಅಲಿಯಾಸ್ ಗಿರೀಶ್ ಎಂಬಾತ ಈ ಯುವತಿಯನ್ನು ಹತ್ಯೆ ಮಾಡಿದ್ದು, ನಂತರ ತಲೆಮರೆಸಿಕೊಂಡಿದ್ದಾನೆ.

ನೇಹಾ ಮಾದರಿಯಲ್ಲಿ ಹತ್ಯೆ ಮಾಡುತ್ತೇನೆ ಎಂದು ಅಂಜಲಿ ಅಂಬಿಗೇರಗೆ ವಿಶ್ವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅದರಂತೆಯೇ ಬುಧವಾರ ಬೆಳಗ್ಗೆ 5.30ಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ. ಮನೆಯವರು ತಡೆಯಲು ಮುಂದಾದರೂ ಬಿಡದೆ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ವಿಶ್ವ ಧಮ್ಕಿ ಹಾಕಿದ್ದ. ಅಕಸ್ಮಾತ್ ನೀನು ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಆದ ಹಾಗೆಯೇ ನಿನಗೂ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದ. ಈತನ ವಿರುದ್ಧ ಹಲವು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾದ ಆರೋಪವೂ ಇದೆ. ಜತೆಗೆ, ಬೈಕ್ ಕಳ್ಳತನದಲ್ಲಿಯೂ ಆರೋಪಿಯಾಗಿದ್ದಾನೆ.

ದೂರು ನೀಡಿದ್ದ ಅಜ್ಜಿ: ಮೂಢ ನಂಬಿಕೆ ಎಂದು ಕಳುಹಿಸಿದ್ದ ಪೊಲೀಸರು

ಆರೋಪಿ ವಿಶ್ವ ಅಂಜಲಿಗೆ ಧಮ್ಕಿ ಹಾಕಿರುವ ವಿಚಾರವಾಗಿ ಆಕೆಯ ಅಜ್ಜಿ ಗಂಗಮ್ಮ ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ, ಅಜ್ಜಿಯ ಮಾತಿಗೆ ಹೆಚ್ಚು ಪ್ರಾಶಸ್ತ್ಯ ನೀಡದ ಪೊಲೀಸರು, ಇದೆಲ್ಲ ಮೂಢನಂಬಿಕೆ ಎಂದು ಹೇಳಿ ಕಳುಹಿಸಿದ್ದರು. ಪರಿಣಾಮವಾಗಿ ಇದೀಗ ಮತ್ತೊಂದು ಕೊಲೆಯಾಗಿದೆ.

ಕೊಲೆಯಾದ ಮನೆ ಮುಂದೆ ಜನ ಜಮಾಯಿಸಿರುವುದು

ಕ್ರೌರ್ಯದ ಪರಮಾವಧಿ

ಮನೆಗೆ ನುಗ್ಗಿದ ವಿಶ್ವ ಅಂಜಲಿಯನ್ನು ಆಕೆಯ ಅಜ್ಜಿ ಹಾಗೂ ಇಬ್ಬರು ಸಹೋದರಿಯರ ಮುಂದೆಯೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಇರಿದಿದ್ದಾನೆ. ಮೊದಲಿಗೆ ಮನೆಯ ಪಡಸಾಲಿಯಲ್ಲಿ ಅಂಜಲಿಗೆ ಚಾಕು ಹಾಕಿದ ವಿಶ್ವ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಲ್ಲಿಂದ ಅಡುಗೆಯ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕು ಚುಚ್ಚಿದ್ದಾನೆ. ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಇದನ್ನೂ ಓದಿ: ನೇಹಾ ಕೊಲೆ ಪ್ರಕರಣ: ಅವಳು ನನ್ನ ಜೊತೆ ಮಾತಾಡಲ್ಲ ಅಂದಳು, ಅದಕ್ಕೆ ಚಾಕು ಹಾಕಿದೆ; ಆರೋಪಿ ಫಯಾಜ್​

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ, ವಿದ್ಯಾರ್ಥಿನಿ ನೇಹಾರನ್ನು ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಏಪ್ರಿಲ್ 18ರಂದು ಚೂರಿಯಿಂದ ಹಲವು ಬಾರಿ ಇರಿದು ಹತ್ಯೆ ಮಾಡಲಾಗಿತ್ತು. ಘಟನೆ ರಾಜ್ಯದಾದ್ಯಂತ ರಾಜಕೀಯವಾಗಿಯೂ ಭಾರಿ ಸದ್ದು ಮಾಡಿತ್ತು. ಇದೀಗ ಅಂಥದ್ದೇ ಮತ್ತೊಂದು ಕೃತ್ಯ ನಡೆದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:40 am, Wed, 15 May 24

Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us