ಹುಬ್ಬಳ್ಳಿ, ಸೆ.25: ನೇಹಾ ಹಿರೇಮಠ ಹಾಗೂ ಅಂಜಲಿ ಹತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿ(hubballi)ಯಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಹುಡುಗಿ ಚುಡಾಯಿಸಿದ್ದಕ್ಕೆ ಬುದ್ದಿ ಹೇಳಿದ ಮಹಿಳೆಗೆ ಚಾಕು ಇರಿದು ಪರಾರಿಯಾದ ಘಟನೆ ಹುಬ್ಬಳ್ಳಿಯ ಲೋಹಿಯಾನಗರದಲ್ಲಿ ನಡೆದಿದೆ. ಸಧ್ಯ ಚಾಕು ಇರಿದು ಎಸ್ಕೇಫ್ ಆಗಿದ್ದ ಆರೋಪಿ ಮಹೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳು ನೀಲಾ ಹಂಪಣ್ಣ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ವಿಷಯ ತಿಳಿದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ, ಚಾಕು ಇರಿತಕ್ಕೆ ಒಳಗಾದ ಮಹಿಳೆಯಿಂದ ಮಾಹಿತಿ ಪಡೆಯುತ್ತಿದ್ದಾರೆ.
ಹೌದು, ಹುಡುಗಿಗೆ ಚುಡಾಯಿಸಿದ್ದಕ್ಕೆ ಆರೋಪಿ ಮಹೇಶ್ಗೆ ಗಾಯಾಳು ಮಹಿಳೆ ನೀಲಾ ಅವರು ಬುದ್ಧಿ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಮಹೇಶ್, ನೀಲಾ ಅವರಿಗೆ ಚಾಕು ಇರಿದು ಪರಾರಿಯಾಗಿದ್ದ. ಕೂಡಲೇ ಆತನನ್ನು ಪತ್ತೆ ಹಚ್ಚಿದ ಪೊಲಿಸರು, ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಮಾತನಾಡಿದ ಹು-ಧಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಏಕಾಏಕಿ ಮನೆಗೆ ನುಗ್ಗಿ ನೀಲಾ ಎಂಬ ಮಹಿಳೆಯ ಹೊಟ್ಟೆಯ ಎಡ ಭಾಗಕ್ಕೆ ಚಾಕು ಇರಿದಿದ್ದಾನೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ನೀಲಾ ಹಂಪಣ್ಣವರ ಮಗಳಿಗೆ ಮದುವೆಯಾಗು ಎಂದು ಆರೋಪಿ ಮಹೇಶ್ ಪೀಡಿಸುತ್ತಿದ್ದ. ನಂತರ ಬುದ್ದಿ ಹೇಳಿದ್ದಕ್ಕೆ ಸುಮ್ಮನೆ ಆಗಿದ್ದ. ಆದರೆ, ಇಂದು (ಬುಧವಾರ) ಸಂಜೆ ನಾಲ್ಕು ಗಂಟೆ ಸುಮಾರಿಗೆ ಮನೆಗೆ ನುಗ್ಗಿ ಚಾಕು ಇರಿದಿದ್ದಾನೆ. ಬಳಿಕ ಮಹೇಶ್ ಅವರೇ ಹಲ್ಲೆ ಮಾಡಿದ್ದಾರೆ ಎಂದು ಚೀರುತ್ತಾ ಓಡಿ ಹೋಗಿದ್ದ. ಸದ್ಯ ಚಾಕು ಹಾಕಿರುವ ಮಹೇಶ್ನನ್ನು ಹಳೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿತ್ತಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ