ಕ್ಯಾನ್ಸರ್ ಅಂದಕೂಡಲೇ ಎಂಥವರೂ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಕ್ಯಾನ್ಸರ್ ಕಾಯಿಲೆಯೇ ಅಂಥದ್ದು. ಮನುಷ್ಯರಿಗೆ ಇಂಥ ಕ್ಯಾನ್ಸರ್ ಬರೋದು ಸಾಮಾನ್ಯ. ಇನ್ನು ಚಿಕಿತ್ಸೆ ನೀಡುವುದು ಕೂಡ ಸಹಜ. ಆದರೆ ಧಾರವಾಡದಲ್ಲಿ (Dharwad) ಹಾವಿಗೆ ಆಗಿದ್ದ ಕ್ಯಾನ್ಸರ್ ಗಡ್ಡೆಯನ್ನು ವೈದ್ಯರು ಹೊರಗೆ ತೆಗೆದಿದ್ದು, ಸಾವಿನ ಮನೆಯ ಕದ ತಟ್ಟಿದ್ದ ಹಾವಿಗೆ ಮರುಜನ್ಮ ನೀಡಿದ್ದಾರೆ. ಧಾರವಾಡದ ಪ್ರಾಣಿ ಪ್ರಿಯ ಹಾಗೂ ಪ್ರಾಣಿ ರಕ್ಷಕರಾಗಿರುವ ಸೋಮಶೇಖರ್ ಚೆನ್ನಶೆಟ್ಟಿ ಅವರಿಗೆ ಕರೆಯೊಂದು ಬಂದಿತ್ತು. ತಮ್ಮ ಮನೆಯಲ್ಲಿ ಹಾವು ಅಡಗಿಕೊಂಡಿದೆ ಎಂದು ಮನೆಯವರು ತಿಳಿಸಿದ್ದರು. ಅದರಂತೆ ಹಾವಿನ ರಕ್ಷಣೆಗೆ ಧಾವಿಸಿದ್ದ ಅವರಿಗೆ ಕಂಡದ್ದು ಆಭರಣ ಹಾವು (Trinket snake). ವಿಷಕಾರಿಯಲ್ಲದ ಹಾವು ನೋಡಲು ಬಹಳ ಸುಂದರವಾಗಿದ್ದ ಹಿನ್ನೆಲೆಯಲ್ಲಿ ಕೈಯಲ್ಲಿ ಹಿಡಿದುಕೊಂಡಾಗ ತಲೆ ಮೇಲೆ ಉಬ್ಬಿದ ಜಾಗ (cancer tumor) ಕಂಡು ಬಂತು. ನಂತರ ಅದನ್ನು ಕೃಷಿ ವಿಶ್ವವಿದ್ಯಾಲಯದ ಪಶು ಆಸ್ಪತ್ರೆಯ ಹಿರಿಯ ವೈದ್ಯರಾಗಿರುವ ಡಾ. ಅನಿಲಕುಮಾರ ಪಾಟೀಲ (Veterinary Doctor) ಹತ್ತಿರ ತೆಗೆದುಕೊಂಡು ಹೋಗಿದ್ದಾರೆ. ಅದನ್ನು ನೋಡಿ ಡಾ. ಪಾಟೀಲ್, ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಅಂತಾ ಹೇಳಿದ್ದಾರೆ.
ಕಷ್ಟಕರವಾಗಿದ್ದ ಶಸ್ತ್ರಚಿಕಿತ್ಸೆ:
ಅತ್ಯಂತ ಸೂಕ್ಷ್ಮ ಜೀವಿಯಾಗಿರೋ ಹಾವಿನ ಚರ್ಮ ಅದಕ್ಕಿಂತಲೂ ಸೂಕ್ಷ್ಮವಾಗಿರುತ್ತದೆ. ಚಿಕಿತ್ಸೆಗೆ ಬಂದ ಹಾವನ್ನು ಪರಿಶೀಲಿಸಿದ ಡಾ. ಅನಿಲಕುಮಾರ್ ಪಾಟೀಲ್ ಅವರಿಗೆ ಇದು ಎಲುಬುಗಳ ಮೇಲೆ ಟ್ಯೂಮರ್ ಬೆಳೆದಿದೆ ಅಂತಾ ಅನ್ನಿಸಿದರೂ ಇನ್ನಷ್ಟು ಪರೀಕ್ಷೆಗಳನ್ನು ಮಾಡಿಸಿದಾಗ ತಲೆ ಭಾಗದಲ್ಲಿ ಬೆಳೆದ ಕ್ಯಾನ್ಸರ್ ಗಡ್ಡೆ ಅಂತಾ ಖಚಿತವಾಯಿತು.
ಹೀಗಾಗಿ ಇದನ್ನು ತೆಗೆಯಲೇಬೇಕಾದ ಅನಿವಾರ್ಯತೆ ಇದೆ ಅಂದುಕೊಂಡು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಕೊನೆಗೆ ಸಹಾಯಕರ ಸಹಕಾರದಿಂದ ಗಡ್ಡೆಯನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಹಾವು ಸುಧಾರಿಸಿಕೊಳ್ಳುತ್ತಿದೆ. ಪ್ರಾಣಿಪ್ರಿಯ ಸೋಮಶೇಖರ್ ಹಾಗೂ ವೈದ್ಯ ಡಾ. ಅನಿಲಕುಮಾರ್ ಪಾಟೀಲ್ ಅವರ ಈ ಕೆಲಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಈ ಬಗ್ಗೆ ಟಿವಿ-9 ಡಿಜಿಟಲ್ ಜತೆಗೆ ಮಾನಾಡಿದ ಡಾ. ಅನಿಲಕುಮಾರ ಪಾಟೀಲ, ಹಾವುಗಳು ಅತ್ಯಂತ ಸೂಕ್ಷ್ಮ ಜೀವಿಗಳಾಗಿದ್ದು, ಅವುಗಳಿಗೆ ಚಿಕಿತ್ಸೆ ನೀಡುವದೇ ಸವಾಲಿನ ಕೆಲಸ. ಈ ಹಾವಿಗೆ ಕಣ್ಣು ಹಾಗೂ ತಲೆಯ ನಡುವೆ ಕ್ಯಾನ್ಸರ್ ಗಡ್ಡೆ ಬೆಳೆದಿತ್ತು. ಸುಮಾರು ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಹೊರಗೆ ತೆಗೆಯಲಾಗಿದೆ. ತಲೆ ಬಳಿ ಇಂಥ ಶಸ್ತ್ರಚಿಕಿತ್ಸೆ ಮಾಡೋದು ತುಂಬಾನೇ ಕಷ್ಟಕರ. ಅಲ್ಲದೇ ಅಷ್ಟೇ ರಿಸ್ಕಿ ಕೂಡಾ ಹೌದು.
ಅಲ್ಲಿಯೇ ಮೆದುಳು, ಕಣ್ಣು ಇರೋದ್ರಿಂದ ತುಂಬಾನೇ ಜಾಗರೂಕತೆಯಿಂದ ಶಸ್ತ್ರಚಿಕಿತ್ಸೆ ಮಾಡಬೇಕು. ಇದೀಗ ಹಾವನ್ನು ಸೋಮಶೇಖರ್ ಚೆನ್ನಶೆಟ್ಟಿ ಹತ್ತಿರವೇ ಇಟ್ಟುಕೊಳ್ಳಲು ಸೂಚಿಸಿದ್ದೇನೆ. ಅದಕ್ಕೆ ಒಂದೆರೆಡು ದಿನ ಡ್ರೆಸ್ಸಿಂಗ್ ಅಗತ್ಯವಿದೆ. ಅದನ್ನು ಸೋಮಶೇಖರ್ ಅವರೇ ಮಾಡಲಿದ್ದಾರೆ. ಅಲ್ಲದೇ ಗಡ್ಡೆ ಮತ್ತೆ ಬೆಳೆಯುತ್ತಾ ಅನ್ನೋದನ್ನು ಗಮನಿಸಬೇಕು ಎಂದರು.
ಇನ್ನು ಪ್ರಾಣಿರಕ್ಷಕ ಸೋಮಶೇಖರ್ ಅವರು ಎಂದಿನಂತೆ ನನಗೆ ಹಾವಿನ ರಕ್ಷಣೆ ಮಾಡಲು ಕರೆ ಬಂದಿತ್ತು. ನಾನು ಹೋಗಿ ನೋಡಿದಾಗ ಅದು ಆಭರಣ ಹಾವಾಗಿತ್ತು. ಸೂಕ್ಷ್ಮವಾಗಿ ನೋಡಿದಾಗ ಏನೋ ಅನುಮಾನ ಬಂದು ಡಾ. ಅನಿಲಕುಮಾರ ಪಾಟೀಲ ಹತ್ತಿರ ಹೋದಾಗ ಅವರು ಶಸ್ತ್ರಚಿಕಿತ್ಸೆ ಮಾಡಿ ಕ್ಯಾನ್ಸರ್ ಗಡ್ಡೆ ಹೊರ ತೆಗೆಯುವ ಮೂಲಕ ಅದರ ಜೀವ ಉಳಿಸಿದ್ದಾರೆ. ಅವರಿಗೆ ಧನ್ಯವಾದಗಳು ಅಂತಾ ಹೇಳಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:16 am, Fri, 30 December 22