Hubli-Dharwad ರಾಷ್ಟ್ರೀಯ ಯುವಜನೋತ್ಸವದಲ್ಲಿ ಕ್ರೀಡೆಗಳ ಮೆರಗು: ಮೈನವಿರೇಳಿಸಲಿವೆ 7 ರಾಜ್ಯಗಳ 7 ಆಟಗಳು

| Updated By: ವಿವೇಕ ಬಿರಾದಾರ

Updated on: Jan 11, 2023 | 5:43 PM

National Youth Fest: ರಾಷ್ಟ್ರೀಯ ಯುವಜನೋತ್ಸವದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶವಾಗುವಂತೆ ಗ್ರಾಮೀಣ ಕ್ರೀಡೆಗಳನ್ನು ಆಡಿಸಲಾಗುವುದು.

Hubli-Dharwad ರಾಷ್ಟ್ರೀಯ ಯುವಜನೋತ್ಸವದಲ್ಲಿ ಕ್ರೀಡೆಗಳ ಮೆರಗು: ಮೈನವಿರೇಳಿಸಲಿವೆ 7 ರಾಜ್ಯಗಳ 7 ಆಟಗಳು
ವಿವಿಧ ರಾಜ್ಯಗಳ ದೇಸಿ ಕ್ರೀಡೆಗಳು
Follow us on

ಹುಬ್ಬಳ್ಳಿ-ಧಾರವಾಡ: ಭಾರತ ರಾಷ್ಟ್ರ ಒಂದೇ ಆದರೂ ಹಲವು ಕ್ಷೇತ್ರಗಳಲ್ಲಿ ವಿಭಿನ್ನತೆ ಮತ್ತು ವೈಶಿಷ್ಟ್ಯತೆಯನ್ನು ಹೊಂದಿದೆ. ಭಾರತ ತನ್ನದೇ ಆದ ವಿಶೇಷತೆಗಳಿಂದ ವಿಭಿನ್ನವಾಗಿ ಕಾಣಿಸುತ್ತದೆ. ಅನೇಕ ಆಧುನಿಕ ಹಾಗೂ ಪಾಶ್ಚಿಮಾತ್ಯ ಆಟಗಳ ಮಧ್ಯದಲ್ಲೂ ಭಾರತದ ದೇಸಿಯ ಕ್ರೀಡೆಗಳು ತಮ್ಮ ಜನಪ್ರಿಯತೆ ಹಾಗೂ ಪಾವಿತ್ರ್ಯತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿವೆ. ಹುಬ್ಬಳ್ಳಿ-ಧಾರವಾಡದಲ್ಲಿ ಜನವರಿ 12 ರಿಂದ 16 ರ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವದಲ್ಲಿ (National Youth Fest) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ದೇಶಿಯ ಕ್ರೀಡೆಗಳ ಪ್ರದರ್ಶನಕ್ಕೆ ಅವಕಾಶ ನೀಡಿ ಸಾರ್ವಜನಿಕರಿಗೆ ಆಸಕ್ತಿ ಹುಟ್ಟಿಸಲು ಕ್ರಮ ಕೈಗೊಂಡಿದೆ.

ಜನವರಿ 13, 14, 15 ರಂದು ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1-30 ರ ವರೆಗೆ ಮತ್ತು ಮಧ್ಯಾಹ್ನ 2-30 ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ರೀತಿಯ ಮನರಂಜನಾತ್ಮಕ ಹಾಗೂ ಶಾರೀರಿಕ ಬೆಳವಣಿಗೆಗೆ ಸಹಾಯವಾಗುವ ಸುಮಾರು 7 ತರಹದ ದೇಸಿ ಕ್ರೀಡೆಗಳನ್ನು ಆಡಿಸಲಾಗುತ್ತಿದೆ. ಈ 7 ಕ್ರೀಡೆಗಳು 7 ರಾಜ್ಯದ ರಾಜ್ಯ ಆಟಗಳಾಗಿವೆ.

7 ರಾಜ್ಯದ 7 ಕ್ರೀಡೆಗಳು

ಅವುಗಳಲ್ಲಿ ಪ್ರಮುಖವಾಗಿ ಕೇರಳ ರಾಜ್ಯದ ಕಲರಿಪಯಟ್ಟು (15 ಜನರಿರುವ ಮಾರ್ಷಲ್ ಆಟ), ಮಹಾರಾಷ್ಟ್ರದ ಮಲ್ಲಕಂಬ (15 ಜನರಿರುವ ಜಿಮ್ನಾಸ್ಟಿಕ್) ಮತ್ತು ಸಿಲಂಬಂ (7 ಜನರಿರುವ ಮಾರ್ಷಲ್ ಆಟ), ಮಣಿಪುರ ರಾಜ್ಯದ ಮುಖನಾ ಮತ್ತು ತಂಗಟಾ (19 ಜನರಿರುವ ಕುಸ್ತಿ ಮತ್ತು ಮಾರ್ಷಲ್ ಆಟ), ತೆಲಂಗಾಣ ರಾಜ್ಯದ ಕಬಡ್ಡಿ ಆಟ (15 ಜನರಿರುವ ಕಬಡ್ಡಿ ಆಟ), ಆಸ್ಸಾಂ ರಾಜ್ಯದ ಖೊಂಲೈನೈ (15 ಜನರಿರುವ ಕಬ್ಬಡ್ಡಿ ತರಹ ಆಟ), ಪಂಜಾಬ ರಾಜ್ಯದ ಘಾಟಕಾ (15 ಜನರಿರುವ ಯುದ್ಧಕಲೆ) ಒಟ್ಟು 101 ಜನ ತರಬೇತಿ ಹೊಂದಿದ ಪಟುಗಳು ಪ್ರದರ್ಶನ ನೀಡಲಿದ್ದಾರೆ.
ಸಾರ್ವಜನಿಕರಿಗೆ ಅವಕಾಶವಿರುವ ದೇಸಿ ಕ್ರೀಡೆಗಳು

ಯುವಜನೋತ್ಸವದಲ್ಲಿ ಸಾರ್ವಜನಿಕರು ಭಾಗವಹಿಸಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶವಾಗುವಂತೆ ದೇಸಿಯ ಆಟಗಳಾದ ಹಗ್ಗ ಜಗ್ಗಾಟ, ಕಲ್ಲುಗುಂಡು ಎತ್ತುವುದು, ಲಗೋರಿ, ಗಿಲ್ಲಿದಾಂಡು, ಬುಗುರಿ ಆಟ, ಗೋಲಿ ಆಟ ಆಯೋಜಿಸಲಾಗಿದೆ. ಸಾರ್ವಜನಿಕರು ಉಚಿತವಾಗಿ ಈ ಆಟಗಳಲ್ಲಿ ಭಾಗವಹಿಸಲು ಅವಕಾಶವಿದೆ.

ಜ. 12 ರ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ವೇದಿಕೆ ಮುಂದೆ ಪ್ರದರ್ಶನ

ಅವಳಿ ನಗರದಲ್ಲಿ ಹಬ್ಬದ ವಾತಾವರಣ ಮೂಡಿಸಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಜ.12 ರಂದು ಸಂಜೆ 4 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಯುವಸಮೂಹವನ್ನು ಉದ್ದೇಶಿಸಿ ಪ್ರೇರಕ ಭಾಷಣವನ್ನು ಮಾಡಲಿದ್ದಾರೆ.

5 ದಿನಗಳ ರಾಷ್ಟ್ರೀಯ ಯುವಜನೋತ್ಸವದಲ್ಲಿ ವಿವಿಧ ರೀತಿಯ ಕಲೆ, ನೃತ್ಯ ಮತ್ತು ಶಾರೀರಿಕ ಪ್ರದರ್ಶನಗಳು ನಡೆಯಲಿವೆ. ಪ್ರಧಾನಮಂತ್ರಿಗಳ ಉದ್ಘಾಟನಾ ಕಾರ್ಯಕ್ರಮದ ನಂತರ ವೇದಿಕೆ ಮುಂಭಾಗದಲ್ಲಿ ಪ್ರಧಾನಮಂತ್ರಿಗಳ ಮುಂದೆ ಮಹಾರಾಷ್ಟ್ರದ ಅಹಮದನಗರ ಜಿಲ್ಲೆಯ ಸಾಮನಗರದ 19 ಜನ ಯೋಗ ಪಟುಗಳಿಂದ ಯೋಗ ಪ್ರದರ್ಶನವಾಗಲಿದೆ. ಮತ್ತು ಇದೇ ಸಂದರ್ಭದಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯ 16 ಜನ ಯುವಪಟುಗಳು ಮಲ್ಲಕಂಬ ಪ್ರದರ್ಶನ ನಡೆಯಲಿದೆ.

ವರದಿ-ನರಸಿಂಹಮೂರ್ತಿ ಪ್ಯಾಟಿ ಟಿವಿ9, ಧಾರವಾಡ