ಧಾರವಾಡ: ಧಾರವಾಡ ಜಿ.ಪಂ. ಸಭಾಂಗಣದಲ್ಲಿ ಇಂದು ನಡೆದ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಕಾರಿಡಾರ್‌ನಲ್ಲಿ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಸದ್ಯ ಕಾಮಗಾರಿ ನಿಂತಿದೆ. ಕಾಮಗಾರಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಪರ ಮುಖ್ಯ ಕಾರ್ಯದರ್ಶಿ (ಎಸಿಎಸ್) ವಿ ಮಂಜುಲಾ ಅಡ್ಡಿಪಡಿಸುತ್ತಿದ್ದಾರೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಚಿವ ಪ್ರಲ್ಹಾದ ಜೋಶಿ ಅವರ ಮುಂದೆ ಪ್ರಸ್ತಾಪಿಸದರು. ಆಗ ಅಪರ ಮುಖ್ಯ ಕಾರ್ಯದರ್ಶಿ ವಿ ಮಂಜುಲಾ ವಿರುದ್ಧ ಜೋಶಿ ಗರಂ ಆದರು.
ಆ ಅಧಿಕಾರಿ ಏನು ಹಿಟ್ಲರನಾ? ಸರ್ವೆ ಮುಗಿಸಿ ಕೆಲಸ ಮಾಡಿ. ಏನೇ ಬಂದರೂ ನಾನು ನೋಡಿಕೊಳ್ಳುತ್ತೇನೆ. ನೀವು ಹೋಗಿ ಕೆಲಸ ಆರಂಭಿಸಿ. ಆಕೆ ಬಂಧಿಸುವುದಾದರೆ ನನ್ನನ್ನು ಬಂಧಿಸಲಿ. ಮುಂದೆ ಆ ಅಧಿಕಾರಿ ಕರೆಯುವ ಸಭೆಗೆ ಹೋಗಬೇಡಿ. ಅವರು ಏನು ತಿಳಿದುಕೊಂಡಿದ್ದಾರೆ ನಮ್ಮನ್ನು? ಅವರು ಏನೇ ಮಾತನಾಡುವುದಿದ್ದರೂ ನನ್ನ ಜೊತೆ ಮಾತನಾಡಲಿ. ತಮ್ಮನ್ನು ತಾವು ಹಿಟ್ಲರ್ ಅಂದುಕೊಂಡಿದ್ದಾರಾ? ಜನಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲವೇ? ಈ ಕೂಡಲೇ ಕಾಮಗಾರಿ ಆರಂಭಿಸಿ ಎಂದು ಅಧಿಕಾರಿ ವಿರುದ್ಧ ಹರಿಹಾಯ್ದರು.
ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಲಘಟಗಿ ತಹಶೀಲ್ದಾರ್ ವಿರುದ್ಧ ಕೂಡ ಯಲ್ಲಪ್ಪ ಗೋಣೆಣ್ಣವರ್ ಸಿಟ್ಟಾಗಿದ್ದಾರೆ. ಕಲಘಟಗಿ ತಹಶೀಲ್ದಾರ್ ಕಚೇರಿ ಭ್ರಷ್ಟಾಚಾರ ಕೇಂದ್ರವಾಗಿದೆ. ಎಲ್ಲೂ ನಡೆಯದ ಭ್ರಷ್ಟಾಚಾರ ನಿಮ್ಮ ಕಚೇರಿಯಲ್ಲಿ ನಡೆಯುತ್ತಿದೆ. ತಹಶೀಲ್ದಾರ್ ಕಚೇರಿಯಲ್ಲಿ ಜನರಿಗೆ ಕಿರುಕುಳ ಕೊಡುತ್ತಿದ್ದೀರಾ? ಹಣ ಕೊಡದೇ ಯಾವುದೇ ಕೆಲಸ ಆಗುತ್ತಿಲ್ಲ ಎಂದು ದೂರು ಬರುತ್ತಿವೆ. ದುಮ್ಮವಾಡ ಕಂದಾಯ ನಿರೀಕ್ಷಕನಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ ಎಂದು ತರಾಟೆಗೆ ತಗೆದುಕೊಂಡರು.
ಅಧಿಕಾರಿಗಳು ಯಾರಿಗೇ ಬೇಕಾದರೂ ಹೇಳಿಕೊಳ್ಳಿ ಅಂತಾರಂತೆ. ಸಿಬ್ಬಂದಿಯೂ ಕಚೇರಿಗೆ ಸಮಯಕ್ಕೆ ಸರಿಯಾಗಿ ಬರದ ಬಗ್ಗೆ ದೂರು ನೀಡಿದ್ದಾರೆ. ಈ ಎಲ್ಲದರ ಬಗ್ಗೆ ಸಾಕಷ್ಟು ಜನ ಬಂದು ದೂರು ಕೊಡುತ್ತಿದ್ದಾರೆ. ನೌಕರರು, ಸಿಬ್ಬಂದಿಯನ್ನು ನಿಯಂತ್ರಿಸಲು ನಿಮಗೆ ಆಗುತ್ತಿಲ್ಲವೇ? ಹೀಗೇ ಆದರೆ ನಿಮ್ಮನ್ನು ಅಮಾನತು ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ದಿಶಾ ಸಭೆಗೆ ಗೈರಾದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರರಿಗೆ ಪ್ರಹ್ಲಾದ್ ಜೋಶಿ ಸೂಚನೆ ನೀಡಿದ್ದಾರೆ.
NHAI ಅಧಿಕಾರಿಗಳನ್ನುಐಎಎಸ್ ಅಧಿಕಾರಿ ವಿ. ಮಂಜುಲಾ ಹೆದರಿಸುತ್ತಿದ್ದಾರೆ
ಐಎಎಸ್ ಅಧಿಕಾರಿ ವಿ. ಮಂಜುಲಾ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿರುವ ವಿಚಾರವಾಗಿ ಮಾತನಾಡಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹುಬ್ಬಳ್ಳಿಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಮಾರ್ಗದಲ್ಲಿ 3 ಬಸ್ ನಿಲ್ದಾಣ ತೆಗೆಯುವಂತೆ ವಿ. ಮಂಜುಲಾ ಅವರಿಗೆ ಮನವಿ ಮಾಡಲಾಗಿದೆ. ಇದರಿಂದ ಬಿಆರ್ಟಿಸಿಎಸ್ಗೆ ಹೊರೆಯಾಗುತ್ತೆ ಎಂದು ಅಧಿಕಾರಿ ವಿ. ಮಂಜುಲಾ ಹೇಳಿದ್ದರು. ಆದರೆ ಫ್ಲೈಓವರ್ ನಿರ್ಮಾಣದ ನಂತರ ನಿಲ್ದಾಣವನ್ನು ಮರು ನಿರ್ಮಾಣ ಮಾಡಿಕೊಡುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ.
ಈಗ ಬಸ್ ನಿಲ್ದಾಣ ತೆರೆವು ಮಾಡದಂತೆ IAS ಅಧಿಕಾರಿ ಹೇಳುತ್ತಿದ್ದಾರೆ. NHAI ಅಧಿಕಾರಿಗಳನ್ನು IAS ಅಧಿಕಾರಿ ಮಂಜುಲಾ ಹೆದರಿಸುತ್ತಿದ್ದಾರೆ. ಇದರಿಂದ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಸಾಕಷ್ಟು ತೊಂದರೆ ಆಗಿದೆ. ಹಾಗಾಗಿ ಅಧಿಕಾರಿ ವಿರುದ್ಧ ಕೇಂದ್ರ ಸಚಿವ ಜೋಶಿ ಸಿಟ್ಟಿಗೆದ್ದಿದ್ದಾರೆ. ಆದರೂ ಐಎಎಸ್ ಅಧಿಕಾರಿ ವಿ.ಮಂಜುಲಾಗೆ ತಿಳಿವಳಿಕೆ ಇಲ್ಲ ಎಂದು ವಿ.ಮಂಜುಲಾ ವಿರುದ್ಧ ಅರವಿಂದ ಬೆಲ್ಲದ್ ಹುಬ್ಬಳ್ಳಿಯಲ್ಲಿ ವಾಗ್ದಾಳಿ ಮಾಡಿದ್ದಾರೆ.
PFI ನಿಷೇಧಿಸಿರುವುದನ್ನು ಕಾಂಗ್ರೆಸ್ಗೆ ವಿರೋಧಿಸಲು ಆಗುತ್ತಿಲ್ಲ
ಸಭೆಗು ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತುಷ್ಟೀಕರಣ ರಾಜಕಾರಣ ನೆಹರು ಕಾಲದಿಂದ ರೂಢಿಯಾಗಿದೆ. PFI ನಿಷೇಧಿಸಿರುವುದನ್ನು ಕಾಂಗ್ರೆಸ್ಗೆ ವಿರೋಧಿಸಲು ಆಗುತ್ತಿಲ್ಲ. ವಿರೋಧ ಮಾಡಿದರೆ ಜನರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತಾರೆ. ಹೀಗಾಗಿ ಪದೇಪದೆ ಆರ್ಎಸ್ಎಸ್ ಹೆಸರು ತೆಗೆದುಕೊಳ್ತಿದ್ದಾರೆ ಎಂದು PFI ಜೊತೆ RSS ಹೋಲಿಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ನಿಡಿರುವ ವಿಚಾರವಾಗಿ ಪ್ರತಿಕ್ರಿಯಸಿದರು.
ರಾಹುಲ್ ಗಾಂಧಿ ಮುತ್ತಜ್ಜನ ಕಾಲದಿಂದಲೂ RSS ತುಳಿಯಲೆತ್ನಿಸಿದ್ದಾರೆ. ನಾವೆಲ್ಲರು ಕೂಡ ಆರ್ಎಸ್ಎಸ್ನವರೆ. ಉತ್ತರಾಖಂಡ್ನಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕಬೇಕಿದೆ. ಪೂರ್ವೋತ್ತರ ರಾಜ್ಯದಲ್ಲಿ ಒಬ್ಬರೂ ಕಾಂಗ್ರೆಸ್ನ ಸಂಸದರು ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವ 2 ರಾಜ್ಯಗಳನ್ನೂ ಕಳೆದುಕೊಳ್ಳಲಿದೆ ಎಂದು ಹೇಳಿದರು.
ಉನ್ನತ ಪದವಿಯಲ್ಲಿ ಇರೋರೆಲ್ಲ ಆರ್.ಎಸ್.ಎಸ್.ನವರು. ಹೀಗಾಗಿ ಈಗ ಏನೂ ಆಗೋದಿಲ್ಲ. ತುಷ್ಠೀಕರಣ ಮಾಡಿ ಮಾಡಿ ವಿರೋಧ ಪಕ್ಷದ ಸ್ಥಾನದಲ್ಲಿ ಇಲ್ಲವಾಗಿದ್ದೀರಿ. ಯುಪಿಯಲ್ಲಿ ಜಿರೋ ಇದ್ದಿರಿ. ರಾಜ್ಯಸಭೆಯಲ್ಲಿ 35ಕ್ಕೆ ಬಂದಿದ್ದೀರಿ. ಇದ್ದ ಎರಡು ರಾಜ್ಯ ಕಳೆದುಕೊಳ್ಳೋದೆ ರಾಹುಲ್ ಗಾಂಧಿ ಯಾತ್ರೆ ಫಲಶೃತಿ. ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಪೂರ್ತಿ ಸಾಯೋದು ಬೇಡ ಎಂದು ಕಾಲೆಳೆದರು.
ರಾಜ್ಯದಲ್ಲಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Sat, 1 October 22