ರಾಜ್ಯದಲ್ಲಿ ಬೋಗಸ್ ಕಾರ್ಡ್ ಸರಣಿ, ಇವ್ಯಾವುವೂ ನಡೆಯಲ್ಲ; ಸಿಎಂ ಬೊಮ್ಮಾಯಿ ವ್ಯಂಗ್ಯ

|

Updated on: Mar 20, 2023 | 7:54 PM

ರಾಜ್ಯದಲ್ಲಿ ಕಾಂಗ್ರೆಸ್​ನ ಬೋಗಸ್ ಕಾರ್ಡ್ ಸರಣಿ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್​ನ ಗ್ಯಾರಂಟಿ ಸರಣಿಯ ಕುರಿತು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಬೋಗಸ್ ಕಾರ್ಡ್ ಸರಣಿ, ಇವ್ಯಾವುವೂ ನಡೆಯಲ್ಲ; ಸಿಎಂ ಬೊಮ್ಮಾಯಿ ವ್ಯಂಗ್ಯ
ಸಿಎಂ ಬಸವರಾಜ ಬೊಮ್ಮಾಯಿ‌
Image Credit source: thehansindia.com
Follow us on

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್​ನ ಬೋಗಸ್ ಕಾರ್ಡ್ ಸರಣಿ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್​ನ (Congress) ಗ್ಯಾರಂಟಿ ಸರಣಿಯ ಕುರಿತು ವ್ಯಂಗ್ಯವಾಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈವರೆಗೆ 3 ಬೋಗಸ್​ ಹೇಳಿದ್ದರು, ಇಂದು 4ನೇ ಬೋಗಸ್ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್​ನವರ ಬೋಗಸ್​ ಕಾರ್ಡ್​ ಕಾರ್ಯಗತವಾಗಲಾರದು. ರಾಜಸ್ಥಾನ, ಛತ್ತೀಸ್​ಗಢದಲ್ಲಿ ಮಾಸಾಶನ ಕೊಡುತ್ತೇವೆಂದು ಭರವಸೆ ನೀಡಿ ಈವರೆಗೂ ಕೊಟ್ಟಿಲ್ಲ. ಕಾಂಗ್ರೆಸ್​ನವರು ಹತಾಶರಾಗಿರುವುದರಿಂದ ಸುಳ್ಳು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲವೆಂದು ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಚುನಾವಣೆ ವೇಳೆ ಸುಳ್ಳು ಹೇಳುವುದು ಕಾಂಗ್ರೆಸ್​ನ ಗುಣಧರ್ಮ ಎಂದು ಟೀಕಿಸಿದರು. ರಾಹುಲ್ ಗಾಂಧಿ ಮಾಹಾನ್ ನಾಯಕರು. ದೇಶದ ಬಗ್ಗೆ ಬಹಳ ಅಭಿಮಾನ ಇದ್ದವರು. ಹೊರದೇಶದಕ್ಕೆ ಹೋದಾಗ ದೇಶದ ಬಗ್ಗೆ ಮಾತನಾಡುತ್ತಾರೆ. ಇದಕ್ಕೆಲ್ಲ ಕರ್ನಾಟಕದ ಜನ ಮರಳಾಗುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಊರಿಗೌಡ ನಂಜೇಗೌಡರ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಏನು ಬೇಕಾದರೂ ಮಾಡಲಿ. ಸಂಶೋಧನೆ ಆಗಿ ಸತ್ಯ ಹೊರ ಬರಲಿ ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆ ಸುಧಾಕರ್ ಕಿಡಿ

ಕಾಂಗ್ರೆಸ್​ನ ಗ್ಯಾರಂಟಿ ಘೋಷಣೆಗೆ ಸಚಿವ ಸುಧಾಕರ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​​ನವರು ಕೊಟ್ಟ ಭರವಸೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ರಾಜ್ಯವನ್ನು ದೌರ್ಭಾಗ್ಯಕ್ಕೆ ತೆಗೆದುಕೊಂಡು ಹೋಗುವ ಭರವಸೆಗಳನ್ನು ಕೊಟ್ಟಿದ್ದಾರೆ. ಇಂತಹ ಸುಳ್ಳು, ಕೆಳ ಮಟ್ಟಕ್ಕೆ ಹೋಗುವ ಮೂಲಕ ಕಾಂಗ್ರೆಸ್ ನಿಜಕ್ಕೂ ಚಿಂತಾಜನಕ ಸ್ಥಿತಿಗೆ ತಲುಪಿದೆ ಎಂಬುದು ಗೊತ್ತಾಗಿದೆ. ಅವರ ಭರವಸೆ ಈಡೇರಿಸಲು 60-65 ಸಾವಿರ ಕೋಟಿ ರೂ. ಹಣ ಬೇಕು. ನಾನು ಅವರ ನಾಲ್ಕು ಯೋಜನೆಗಳಿಗೆ ಬೇಕಾಗುವ ಹಣದ ಬಗ್ಗೆ ಲೆಕ್ಕ ಹಾಕೊಂಡು ಬಂದಿದ್ದೇನೆ. ನಮ್ಮದು 3 ಲಕ್ಷ ಕೋಟಿ ರೂಪಾಯಿ ಬಜೆಟ್​ ಇರುವ ರಾಜ್ಯ. ನಮಗೆ ಇದರಲ್ಲಿ ಅಭಿವೃದ್ಧಿಗೆ ಸಿಗುವುದೇ 50-60 ಸಾವಿರ ಕೋಟಿ ರೂ. ಮಾತ್ರ. ಅದರೊಂದಿಗೆ ಹಿಂದಿನ ಯೋಜನೆಗಳಿಗೂ ಹಣ ಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Rahul in Belagavi; ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಪದವೀಧರರಿಗೆ 2 ವರ್ಷದವರೆಗೆ ಪ್ರತಿ ತಿಂಗಳು ರೂ. 3,000 ನಿರುದ್ಯೋಗ ಭತ್ಯೆ: ರಾಹುಲ್ ಗಾಂಧಿ

13 ಬಜೆಟ್ ಕೊಟ್ಟ ಒಬ್ಬ ಆರ್ಥಿಕ ತಜ್ಞ ಇರುವ ನಾಯಕ ಇರುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನರು ಎಂದಿಗೂ ಕ್ಷಮಿಸುವುದಿಲ್ಲ. ನಮಗೆ ಆ ರೀತಿ ಸುಳ್ಳು ಹೇಳುವ ಅಭ್ಯಾಸವಿಲ್ಲ. ನಾವು ಈ ರಾಜ್ಯವನ್ನು ಹಾಳು ಮಾಡುವುದಕ್ಕೆ ಹೋಗುವುದಿಲ್ಲ. ನಾವು ರಚನಾತ್ಮಕವಾದ ಪ್ರಣಾಳಿಕೆ ಕೊಡುತ್ತೇವೆ. ಕಾಂಗ್ರೆಸ್​ನ ಭರವಸೆಗಳಿಗೆ ಕಿಮ್ಮತ್ತು ಇಲ್ಲ, ಅವುಗಳನ್ನು ಯಾರು ಕೂಡ ನಂಬುವುದಿಲ್ಲ. ರಾಜಾಸ್ಥಾನದಲ್ಲಿ ಕೊಟ್ಟ ಭರವಸೆ ಈಡೇರಿಲ್ಲ. ಹಾಗೇ ಕರ್ನಾಟಕದಲ್ಲಿ ಇವರ ಭರವಸೆ ಈಡೇರಲ್ಲ ಎಂದು ಸುಧಾಕರ್ ಹೇಳಿದರು.

ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಯುವ ನಿಧಿ ಹೆಸರಿನಲ್ಲಿ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯಾಗಿ ಪದವೀಧರರಿಗೆ 3,000 ರೂ, ಡಿಪ್ಲೊಮಾ ಪದವೀಧರರಿಗೆ 1500 ರೂ, ನೀಡಲಾಗುವುದು ಎಂದು ಬೆಳಗಾವಿಯ ಸಿಪಿಎಡ್​ ಮೈದಾನದಲ್ಲಿ ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಘೋಷಿಸಿದ್ದಾರೆ. ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ಕಾರ್ಡ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ