ಬೆಂಗಳೂರಲ್ಲಿ 5,000 ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಿದ ಬಸವರಾಜ ಬೊಮ್ಮಾಯಿ
ನಾನು ತುಂಬಾ ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ ಬೊಮ್ಮಾಯಿಯವರಷ್ಟು ಸಿಂಪಲ್ ಸಿಎಂ ಅನ್ನು ನಾನು ಎಲ್ಲಿಯೂ ನೋಡಿಲ್ಲ. ಬಡವರಿಗೋಸ್ಕರ ಏನು ಕೆಲಸ ಆದರೂ ಮಾಡು, ಅದಕ್ಕೆ ಸಹಿ ಮಾಡಲು ನಾನು ತಯಾರಿದ್ದೇನೆ ಎನ್ನುವ ಮೂಲಕ ಮುಖ್ಯಮಂತ್ರಿಗಳನ್ನ ಹೊಗಳಿದ ಸಚಿವ ಆರ್. ಅಶೋಕ್
ಬೆಂಗಳೂರು: ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94(ಸಿ), 94(ಸಿಸಿ) ಯೋಜನೆಯಡಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು 5,000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದಾರೆ. ಇಂದು (ಮಾ.20) ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಂದಿನ ಸರ್ಕಾರದಲ್ಲಿ ಅರ್ಜಿ ಕೊಟ್ಟರೂ ಕ್ರಮ ತೆಗೆದುಕೊಳ್ಳಲಿಲ್ಲ. ಯಾವುದೇ ಸರ್ಕಾರ ಮನೆ ಕೊಡುವ ದಿಟ್ಟ ಕ್ರಮ ಕೈಗೊಂಡಿರಲಿಲ್ಲ. ಅರ್ಜಿ ಕೊಟ್ಟಾಗ ಕಾನೂನಿನ ತೊಡಕಿನ ಬಗ್ಗೆ ಹೇಳುತ್ತಿದ್ದರು. ಸಮಸ್ಯೆಗೆ ಪರಿಹಾರ ಕೊಡುವ ಕಾನೂನು ತಂದು ಬಗೆಹರಿಸಬೇಕು. ಕೇವಲ ಘೋಷಣೆಯಿಂದ ಯಾವುದೇ ಬದಲಾವಣೆ ಸಾಧ್ಯವಾಗಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿಯವರನ್ನ ಹಾಡಿ ಹೊಗಳಿದ ಆರ್.ಅಶೋಕ್
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಸಿಎಂ ಬೊಮ್ಮಾಯಿಯವರನ್ನ ಹಾಡಿ ಹೊಗಳಿದ್ದಾರೆ. ಇದು ಕಾಂಪ್ಲೆಕ್ಸ್ ಕಟ್ಟುವ ಕಾರ್ಯಕ್ರಮವಲ್ಲ, ಬಡವರ ಕಾರ್ಯಕ್ರಮ. ಬಡವರಿಗೆ ಸೈಟ್ ಕೊಡುವ ಕಾರ್ಯಕ್ರಮ ಎಂದ ತಕ್ಷಣ ಸಿಎಂ ನಾನು ಬರುತ್ತೇನೆ ಎಂದರು. ನಾನು ತುಂಬಾ ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ ಬೊಮ್ಮಾಯಿಯವರಷ್ಟು ಸಿಂಪಲ್ ಸಿಎಂನ್ನ ನಾನು ಎಲ್ಲಿಯೂ ನೋಡಿಲ್ಲ. ಕಾಮನ್‌ಮ್ಯಾನ್ ಸಿಎಂ ಎಂದು ಹೊಗಳಿದರು. ನನಗೆ ಕೆಲಸ ಮಾಡಲು ಪೂರ್ತಿ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಬಡವರಿಗೋಸ್ಕರ ಏನು ಕೆಲಸ ಆದರೂ ಮಾಡು, ಅದಕ್ಕೆ ಸಹಿ ಮಾಡಲು ನಾನು ತಯಾರಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ರಾಜಕೀಯ ನಿವೃತ್ತಿ; ಶ್ರೀನಿವಾಸಗೌಡ
ಚುನಾವಣೆ ಹತ್ತಿರ ಬಂದಾಗ ಕೆಲವು ಪುಡಾರಿಗಳು ಬರುತ್ತಾರೆ. ವೋಟ್ ಹಾಕಲಿಲ್ಲ ಅಂದರೆ ಹಕ್ಕುಪತ್ರ ಕೊಡಲ್ಲ ಅಂತಾರೆ. ಈ ತರದ ರಾಜಕಾರಣ ನಾನು ಮಾಡಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಕೆಲವು ತಾಂಡಗಳಿಗೆ ಊರಿನ ಹೆಸರು ಇನ್ನು ಇರಲಿಲ್ಲ. ಬಡವರಿಗೆ ಏನ್ ಬೇಕಾದರೂ ಮಾಡು ಎಂದು ಸಿಎಂ ಹೇಳಿದರು. ಶ್ರೀರಂಗಪಟ್ಟಣದಲ್ಲೂ ಗ್ರಾಮವೊಂದನ್ನ ಘೋಷಿಸಿದ್ದೇನೆ. ಕಾಫಿ ಬೆಳೆಯುತ್ತಿದ್ದ ಬಡ ರೈತರಿಗೆ 40 ಸಾವಿರ ಎಕರೆ ಲೀಸ್ಗೆ ಕೊಟ್ಟಿದ್ದೇವೆ ಎಂದರು.
ಕೊವಿಡ್ ಸಮಯದಲ್ಲಿ ಅದೆಷ್ಟೋ ತಂದೆ, ತಾಯಿ ಜೀವ ಕಳೆದುಕೊಂಡಿದ್ದಾರೆ. ಪ್ರಧಾನಿಯವರು ಉಚಿತವಾಗಿ ವ್ಯಾಕ್ಸಿನ್ ಕೊಟ್ಟರು. ಅದೇ ಚೀನಾದಲ್ಲಿ ವ್ಯಾಕ್ಸಿನನ್ನ ಉಚಿತವಾಗಿ ಕೊಡಲಿಲ್ಲ. ಕೋವಿಡ್‌ನಿಂದ ಮೃತರಾದವತರಿಗೆ 1 ಲಕ್ಷ ರೂ. ಕೊಟ್ಟಿದ್ದೇವೆ. ರೈತರ ಜಮೀನಿಗೆ ದಳ್ಳಾಳಿಗಳ ಕಾಟದಿಂದ ಬೆಲೆಯೇ ಇರಲಿಲ್ಲ. 79 ab ತೆಗೆದು ಹಾಕಿ ವ್ಯವಸಾಯ ಮಾಡುವಂತೆ ಮಾಡಿದ್ದೇವೆ. ಬಡವರಿಗೆ ಫ್ಲ್ಯಾಟ್ ತೆಗೆದುಕೊಳ್ಳಲು 3% ಗೆ ಬಡ್ಡಿ ಇಳಿಸಲಾಗಿದೆ. ಜೊತೆಗೆ ಯಾರೂ ಕೂಡ ಹಕ್ಕುಪತ್ರ ಕೊಟ್ಟಿರಲಿಲ್ಲ. ಆದರೆ ಈಗ ನಾವು ಮನೆ ಬಾಗಿಲಿಗೆ ಹಕ್ಕುಪತ್ರವನ್ನ ಕೊಟ್ಟಿದ್ದೇವೆ. 62 ಸಾವಿರ ರೈತರ ಮನೆಗೆ ಕಂದಾಯ ದಾಖಲೆಗಳನ್ನ ತಲುಪಿಸಿದ್ದೇವೆ. ಆ್ಯಸಿಡ್ ದಾಳಿಗೊಳಗಾದವರ ಬಗ್ಗೆ ಸಿಎಂ ಬಳಿ ಮಾತನಾಡಿದ್ದೆ. ಹಿಂದಿನ ಸರ್ಕಾರಗಳು 2/3 ಸಾವಿರ ಕೊಡುತ್ತಿದ್ದರು. ಈಗ ನಮ್ಮ ಸರ್ಕಾರ 10 ಸಾವಿರ ಕೊಡುತ್ತಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಶಾಸಕರಾದ ಉದಯ್ ಗರುಡಾ ಚಾರ್ ಹಾಗೂ ಎಂ ಕೃಷ್ಣಪ್ಪ ಭಾಗಿಯಾಗಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Mon, 20 March 23