ಜೈಪುರ: ವಿಭಾಗೀಯ ಕೇಂದ್ರ ಕಚೇರಿಯಿಂದ ದೂರದಲ್ಲಿ ವಾಸಿಸುವ ಜನರ ಅಗತ್ಯತೆಗಳನ್ನು ಪೂರೈಸಲು 19 ಹೊಸ ಜಿಲ್ಲೆಗಳು ಮತ್ತು ಇನ್ನೂ ಮೂರು ವಿಭಾಗೀಯ ಕೇಂದ್ರಗಳನ್ನು ರಚಿಸುವುದಾಗಿ ರಾಜಸ್ಥಾನ ಸರ್ಕಾರ ಶುಕ್ರವಾರ ಘೋಷಿಸಿದೆ.ಚುನಾವಣಾ ವರ್ಷದಲ್ಲಿ ಅಶೋಕ್ ಗೆಹ್ಲೋಟ್ (Ashok Gehlot) ನೇತೃತ್ವದ ಕಾಂಗ್ರೆಸ್ (Congress) ಸರ್ಕಾರದ ನಡೆಯನ್ನು ಬಿಜೆಪಿ (BJP) ಟೀಕಿಸಿದ್ದು , ನಿರ್ಧಾರದ ಹಿಂದಿನ ನಿಜವಾದ ಉದ್ದೇಶವು ವೈಯಕ್ತಿಕ ರಾಜಕೀಯ ಉದ್ದೇಶಗಳನ್ನು ಪೂರೈಸುವುದಾಗಿದೆ ಎಂದು ಆರೋಪಿಸಿದೆ. ರಾಜ್ಯದಲ್ಲಿ ಕೆಲವು ಹೊಸ ಜಿಲ್ಲೆಗಳ ರಚನೆಗೆ ಬೇಡಿಕೆಗಳನ್ನು ಸ್ವೀಕರಿಸಿದ್ದೇವೆ. ಈ ಪ್ರಸ್ತಾವನೆಗಳನ್ನು ಪರಿಶೀಲಿಸಲು ನಾವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು ನಾವು ಅಂತಿಮ ವರದಿಯನ್ನು ಸ್ವೀಕರಿಸಿದ್ದೇವೆ. ನಾನು ಈಗ ರಾಜ್ಯದಲ್ಲಿ ಹೊಸ ಜಿಲ್ಲೆಗಳ ರಚನೆಯನ್ನು ಘೋಷಿಸುತ್ತೇನೆ ಎಂದು ವಿಧಾನಸಭೆಯಲ್ಲಿ ರಾಜಸ್ಥಾನ ಸಿಎಂ ಹೇಳಿದ್ದಾರೆ.
ರಾಜಸ್ಥಾನವು ಭೌಗೋಳಿಕ ವಿಸ್ತೀರ್ಣದಲ್ಲಿ ದೇಶದ ಅತಿದೊಡ್ಡ ರಾಜ್ಯವಾಗಿದೆ. ಕೆಲವು ಜಿಲ್ಲಾ ಕೇಂದ್ರಕ್ಕೆ 100 ಕಿ.ಮೀ.ಗಿಂತ ಹೆಚ್ಚು ದೂರವಿದೆ. ಜನರು ಸುಲಭವಾಗಿ ಜಿಲ್ಲಾ ಕೇಂದ್ರವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಮತ್ತು ಆಡಳಿತ ಕೂಡಾ ಪ್ರತಿಯೊಂದು ಕುಟುಂಬವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಗೆಹ್ಲೋಟ್ ಹೇಳಿದ್ದಾರೆ.
ರಾಜಸ್ಥಾನವು ಪ್ರಸ್ತುತ 33 ಜಿಲ್ಲೆಗಳನ್ನು ಹೊಂದಿದೆ. ಪಾಲಿ, ಸಿಕರ್ ಮತ್ತು ಬನ್ಸ್ವಾರಾ ಇಲ್ಲಿನ ಮೂರು ಹೊಸ ವಿಭಾಗೀಯ ಕೇಂದ್ರಗಳಾಗಿವೆ. ಜಿಲ್ಲೆಗಳು ಚಿಕ್ಕದಾಗಿದ್ದರೆ, ಅದು ಪರಿಣಾಮಕಾರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಆಡಳಿತವನ್ನು ಒದಗಿಸಬಹುದು ಎಂದಿದ್ದಾರೆ ಗೆಹ್ಲೋಟ್.
ಗೆಹ್ಲೋಟ್ ರಾಜಕೀಯ ಉದ್ದೇಶಗಳನ್ನು ಪೂರೈಸಲು ಹೊಸ ಜಿಲ್ಲೆಗಳನ್ನು ರಚಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕಿ ವಸುಂಧರಾ ರಾಜೆ ಹೇಳಿದ್ದಾರೆ. ಹೊಸ ಜಿಲ್ಲೆಗಳನ್ನು ಘೋಷಿಸಿದ ವಿಧಾನವು (ರಾಜ್ಯ) ಬಜೆಟ್ ಮತ್ತು ಆರ್ಥಿಕ ರಚನೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಹೊಸ ಜಿಲ್ಲೆಗಳನ್ನು ಘೋಷಿಸುವಲ್ಲಿ ಅನೇಕ ಪ್ರಮುಖ ಸಮಸ್ಯೆಗಳನ್ನು ಕಡೆಗಣಿಸಲಾಗಿದೆ. ಈ ಕ್ರಮವು ಹೆಚ್ಚಿನ ಆಡಳಿತಾತ್ಮಕ ಸವಾಲುಗಳನ್ನು ಉಂಟುಮಾಡುತ್ತದೆ ಎಂದಿದ್ದಾರೆ ರಾಜೆ.
ಹೊಸ ಜಿಲ್ಲೆಗಳನ್ನು ರಚಿಸುವ ಮೊದಲ ಹಂತದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲಕ್ಕಾಗಿ ₹ 2,000 ಕೋಟಿ ಬಜೆಟ್ನ್ನು ಗೆಹ್ಲೋಟ್ ಘೋಷಿಸಿದ್ದರು. ಹದಿನೈದು ವರ್ಷಗಳ ಹಿಂದೆ, ರಾಜೆ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತಾಪಗಢವನ್ನು ಜಿಲ್ಲೆಯಾಗಿ ರಚಿಸಿದ್ದರು.
ಗಂಗಾನಗರದ ಭಾಗವಾಗಿದ್ದ ಅನೂಪ್‌ಗಢ್, ಬಲೋತ್ರಾ (ಬಾರ್ಮೇರ್), ಬೇವಾರ್ (ಅಜ್ಮೀರ್), ಕೇಕ್ರಿ (ಅಜ್ಮೀರ್), ದೀಗ್ (ಭರತ್‌ಪುರ), ದೀದ್ವಾನಾ-ಕುಚಮನ್ (ನಾಗೌರ್), ದುಡು (ಜೈಪುರ), ಗಂಗಾಪುರ ನಗರ (ಸವಾಯಿ ಮಾಧೋಪುರ್), ಜೈಪುರ ಉತ್ತರ, ಜೈಪುರ ದಕ್ಷಿಣ, ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ , ಕೊಟ್‌ಪುತಲಿ-ಬೆಹ್ರೋರ್ (ಜೈಪುರ್-ಅಲ್ವಾರ್), ಖೇರ್ತಾಲ್ (ಅಲ್ವಾರ್), ನೀಮ್ ಕಾ ಥಾನಾ (ಸಿಕರ್), ಫಲೋಡಿ (ಜೋಧ್‌ಪುರ), ಸಲೂಂಬರ್ (ಉದೈಪುರ), ಸಂಚೋರ್ (ಜಾಲೋರ್) ಮತ್ತು ಶಾಹ್ಪುರ (ಭಿಲ್ವಾರಾ)- ಇವು ಹೊಸ ಜಿಲ್ಲೆಗಳು.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ಪ್ರಚಾರವನ್ನು ಆರಂಭಿಸಿವೆ. ಎರಡೂ ಪಕ್ಷಗಳು ಕಳೆದ ತಿಂಗಳು ಗುಜ್ಜರ್ ಸಮುದಾಯವನ್ನು ಭೇಟಿ ಮಾಡಿದ್ದವು. ರಾಜ್ಯದ ಜನಸಂಖ್ಯೆಯ ಸುಮಾರು ಶೇ 9 ರಿಂದ 1 ರಷ್ಟಿರುವ ಮತ್ತು ಪೂರ್ವ ರಾಜಸ್ಥಾನದಲ್ಲಿ 40 ರಿಂದ 50 ವಿಧಾನಸಭಾ ಸ್ಥಾನಗಳಲ್ಲಿ ಗಮನಾರ್ಹವಾಗಿರುವ ಗುಜ್ಜರ್‌ಗಳು ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ನಿರ್ಣಾಯಕ ಮತ ಬ್ಯಾಂಕ್ ಆಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ