ಈದ್ಗಾ ಮೈದಾನದಲ್ಲಿ ಶಾಂತಿಯುತ ಗಣೇಶೋತ್ಸವ: ಸಂಭ್ರಮದ ಹಿಂದಿದೆ ಪ್ರಲ್ಹಾದ ಜೋಶಿ ಪರಿಶ್ರಮ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 02, 2022 | 12:50 PM

ಈ ಪ್ರಕರಣ ಇಷ್ಟು ಸುಲಭವಾಗಿ ಇತ್ಯರ್ಥವಾಗಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಕಾರಣ ಎನ್ನುವುದು ಇದೀಗ ಎಲ್ಲರಿಗೂ ಗೊತ್ತಾಗಿರುವ ವಿಚಾರ.

ಈದ್ಗಾ ಮೈದಾನದಲ್ಲಿ ಶಾಂತಿಯುತ ಗಣೇಶೋತ್ಸವ: ಸಂಭ್ರಮದ ಹಿಂದಿದೆ ಪ್ರಲ್ಹಾದ ಜೋಶಿ ಪರಿಶ್ರಮ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ನಡೆದ ಗಣೇಶೋತ್ಸವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Follow us on

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕೊನೆಗೂ ಗಣಪತಿ ಪ್ರತಿಷ್ಠಾಪನೆ ಆಗಿದೆ. ಹಲವಾರು ವಿವಾದಗಳು ನಡೆದು, ಕೊನೆಗೂ ನ್ಯಾಯಾಲಯದ ಆದೇಶದ ಮೇಲೆ ಈ ವಿವಾದಕ್ಕೆ ತೆರೆ ಬಿತ್ತು. ಮಧ್ಯರಾತ್ರಿ ಎರಡು ಗಂಟೆಯವರೆಗೆ ಸಭೆ ನಡೆಸಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೊನೆಗೂ ಈ ವಿವಾದವನ್ನು ಯಾರಿಗೂ ನೋವಾಗದಂತೆ ಬಗೆ ಹರಿಸಿದ್ದು ಇದೀಗ ಇತಿಹಾಸವೇ ಸರಿ. ಅಷ್ಟಕ್ಕೂ ಈ ವಿವಾದ ಏನು? ಈ ವಿವಾದಕ್ಕೆ ಕಾರಣವೇನು?  ಇಲ್ಲಿದೆ ಮಾಹಿತಿ.

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲು ಅನುಮತಿ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗುತ್ತಿದ್ದಂತೆಯೇ ವಾಣಿಜ್ಯ ನಗರಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿಯೂ ವಿನಾಯಕನನ್ನು ಪ್ರತಿಷ್ಠಾಪಿಸಲು ದನಿ ಎತ್ತಲಾಯಿತು. ಅಷ್ಟೇ ಅಲ್ಲ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಒಟ್ಟು 6 ಅರ್ಜಿಗಳು ಕೂಡ ಸಲ್ಲಿಕೆಯಾದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಆಪ್ತ ಮೇಯರ್ ಈರೇಶ ಅಂಚಟಗೇರಿ ಸರ್ವ ಪಕ್ಷಗಳ 5 ಜನ ಸದಸ್ಯರ ಸದನ ಸಮಿತಿ ರಚಿಸಿ, ವರದಿ ನೀಡುವಂತೆ ಹೇಳಿದರು.

ಈ ಸಮಿತಿ ನೀಡಿದ ವರದಿಯಲ್ಲಿ ಗಣಪತಿ ಇಡಲು ಅನುಮತಿ ಕೊಡಬಹುದು ಎಂದು ಹೇಳಲಾಗಿತ್ತು. ಆದರೆ ಇದೇ ವೇಳೆ ಅಂಜುಮನ್ ಸಂಸ್ಥೆ ಈ ಸಮಿತಿಯ ರಚನೆ ಬಗ್ಗೆಯೇ ಆಕ್ಷೇಪಣೆ ಎತ್ತಿತು. ಇನ್ನೇನು ಗಣಪತಿ ಇಡಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಅಂಜುಮನ್ ಸಂಸ್ಥೆ ಸದನ ಸಮಿತಿ ರಚನೆ ವಿರೋಧಿಸಿ ಹೈಕೋರ್ಟ್ ಮೊರೆ ಹೋಯಿತು. ಕೋರ್ಟ್ ಈ ವಿಚಾರದಲ್ಲಿ ಪಾಲಿಕೆ ಆಯುಕ್ತರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಅರ್ಹರು ಎಂದು ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಇದೀಗ ಗಣಪತಿ ಇಡಲು ಆಯುಕ್ತರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆ ಆಯಿತು. ಈ ಪ್ರಕರಣ ಇಷ್ಟು ಸುಲಭವಾಗಿ ಇತ್ಯರ್ಥವಾಗಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಕಾರಣ ಎನ್ನುವುದು ಇದೀಗ ಎಲ್ಲರಿಗೂ ಗೊತ್ತಾಗಿರುವ ವಿಚಾರ.

ಶಾಂತಿಯುತ ಗಣೇಶೋತ್ಸವ

ಚಾಮರಾಜಪೇಟೆ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್​ನಲ್ಲಿ ನಡೆಯುತ್ತಿರುವಾಗಲೇ ಬೆಂಗಳೂರಿನ ಹೈಕೋರ್ಟ್​ನಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶೋತ್ಸವ ವಿವಾದದ ವಿಚಾರಣೆ ನಡೆಯಿತು. ಗಣೇಶೋತ್ಸವಕ್ಕೆ ಅನುಮತಿ ನೀಡುವುದು ಪಾಲಿಕೆ ಆಯುಕ್ತರ ನಿರ್ಧಾರಕ್ಕೆ ಬಿಟ್ಟ ವಿಷಯ. ಈ ವಿಚಾರದಲ್ಲಿ ಅವರದ್ದೇ ಅಂತಿಮ ನಿರ್ಧಾರ ಎಂದು ಹೈಕೋರ್ಟ್​ ತೀರ್ಪು ನೀಡಿತು. ಈ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹೈಕೋರ್ಟ್ ಆದೇಶ ಬರುತ್ತಿದ್ದಂತೆಯೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿದರು. ರಾತ್ರಿ ಎರಡು ಗಂಟೆಯವರೆಗೆ ಸಭೆ ನಡೆಸಿ, ಕೊನೆಗೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸಹಮತ ಮೂಡಿಸಿದರು.

ಬುಧವಾರ ಮಧ್ಯಾಹ್ನ ಅದ್ಧೂರಿ ಮೆರವಣಿಗೆ ಮೂಲಕ ಗಣೇಶನ ವಿಗ್ರಹವನ್ನು ತರಲು ಯೋಜನೆ ರೂಪಿಸಲಾಗಿತ್ತು. ಆದರೆ ಅಂಜುಮನ್ ಸಂಸ್ಥೆಯವರು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾರೆ ಅನ್ನೋ ಸುದ್ದಿ ಬಂದ ಹಿನ್ನೆಲೆಯಲ್ಲಿ ಬೆಳಿಗ್ಗೆ 7:30 ಕ್ಕೆ ಗಣೇಶನ ಪ್ರತಿಷ್ಠಾಪನೆ ಮಾಡಲಾಯಿತು. ಆ ಮೂಲಕ ಹಲವಾರು ವರ್ಷಗಳಿಂದ ಇದ್ದ ಬೇಡಿಕೆಗೆ ಈಡೇರಿದಂತಾಯಿತು. ಈ ಮಧ್ಯೆ ತಡರಾತ್ರಿ ಹೈಕೋರ್ಟ್ ಆದೇಶ ಬಂದರೂ ಎರಡು ಗಂಟೆವರೆಗೆ ಸಭೆ ನಡೆಸಿ, ಸೂಕ್ತ ನಿರ್ದೇಶನ ನೀಡಿ, ಕೊನೆಗೂ ಈ ವಿವಾದದಿಂದ ಯಾರಿಗೂ ನೋವಾಗದಂತೆ ವ್ಯವಸ್ಥಿತವಾಗಿ ಎಲ್ಲವನ್ನು ನೆರವೇರಿಸಿದ್ದು ಪ್ರಲ್ಹಾದ ಜೋಶಿ. ತಿರಂಗಾ ಯಾತ್ರೆಯಿಂದ ಹಿಡಿದು, 30 ವರ್ಷಗಳ ಹಿಂದೆ ಇದೇ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಹಾಗೂ ಇದೇ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಸಾಧ್ಯವಾಗುವಂತೆ ಮಾಡಿದ್ದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಂದರೆ ತಪ್ಪಾಗಲಾರದು.

ಭಕ್ತರ ನಡುವೆ ಗಣೇಶೋತ್ಸವದಲ್ಲಿ ನಡೆದ ಮಹಾಮಂಗಳಾರತಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾಗವಹಿಸಿದ್ದರು. ತಿರಂಗಾ ಹಾರಿಸುವ ಯತ್ನದಲ್ಲಿ ಪೊಲೀಸರ ಲಾಠಿ ಏಟಿಗೂ ಬಗ್ಗದೇ ಮುನ್ನುಗ್ಗಿ ಬೆಳೆದು ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಪ್ರಭಾವಿ ಖಾತೆ ಹೊಂದಿರುವ ಪ್ರಲ್ಹಾದ ಜೋಶಿ ಅವರ ವ್ಯಕ್ತಿತ್ವ ಎಂಥದ್ದು ಅನ್ನೋದಕ್ಕೆ ಈದ್ಗಾ ಮೈದಾನದಲ್ಲಿ ನಡೆಯುತ್ತಿರೋ ಈ ಗಣೇಶೋತ್ಸವವೇ ಸಾಕ್ಷಿ.

ಹುಬ್ಬಳ್ಳಿ ಈದ್ಗಾ ಮೈದಾನಕ್ಕಿದೆ ಸುದೀರ್ಘ ಇತಿಹಾಸ

1920-21ರಲ್ಲಿ ಬ್ರಿಟಿಷ್ ಸರಕಾರ ಈದ್ಗಾ ಮೈದಾನದಲ್ಲಿ ಅಂಜುಮನ್ ಸಂಸ್ಥೆಯವರಿಗೆ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ಸಲ್ಲಿಸಲು ಲೈಸೆನ್ಸ್ ನೀಡಿದ್ದರು. ವರ್ಷಕ್ಕೆ 1 ರೂಪಾಯಿ ಫೀ ಪಡೆದು 999 ವರ್ಷದವರೆಗೆ ಅವರು ಈ ಜಾಗದಲ್ಲಿ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಕಾಲಾಂತರದಲ್ಲಿ ಸ್ವಾತಂತ್ರ ಬಂದ ಬಳಿಕ ಅಸ್ತಿತ್ವಕ್ಕೆ ಬಂದ ಸರಕಾರಗಳು ಕೂಡ ಹಿಂದಿನ ಪದ್ಧತಿಯನ್ನೇ ಮುಂದುವರೆಸಿಕೊಂಡು ಹೋದವು. 1980ರ ದಶಕದಲ್ಲಿ ಅಂಜುಮನ್ ಸಂಸ್ಥೆ ಈ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಶುರು ಮಾಡಿತು. ಆಗ ಮಹಾನಗರ ಪಾಲಿಕೆ ಇದನ್ನು ತಡೆಯಲು ಯತ್ನಿಸಿತು. ಆಗ ಅಂಜುಮನ್ ಸಂಸ್ಥೆ ಕೋರ್ಟ್ ಮೊರೆ ಹೋಗಲಾಗಿ, 1991 ರಲ್ಲಿ ಸ್ಥಳೀಯ ನ್ಯಾಯಾಲಯ ಈ ಜಾಗ ಪಾಲಿಕೆಗೆ ಸೇರಿದ್ದು ಎಂದು ಆದೇಶ ನೀಡಿತು.

ಬಳಿಕ ಅಂಜುಮನ್ ಸಂಸ್ಥೆ ಈ ಆದೇಶ ಪ್ರಶ್ನಿಸಿ ಮೇಲಿನ ಕೋರ್ಟ್​ಗೆ ಹೋಗಲಾಗಿ, ಕೊನೆಗೆ 2011ರಲ್ಲಿ ಸುಪ್ರಿಂ ಕೋರ್ಟ್ ಸ್ಥಳೀಯ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿದು, ಅಲ್ಲಿ ಅದಾಗಲೇ ನಿರ್ಮಿಸಲಾಗಿದ್ದ ವಾಣಿಜ್ಯ ಮಳಿಗೆಗಳನ್ನು ಅಂಜುಮನ್ ಸಂಸ್ಥೆಯೇ ತೆರವುಗೊಳಿಸಿಕೊಡಬೇಕು ಎಂದು ಆದೇಶ ಮಾಡಿತು. ಆಗ ಕಟ್ಟಡ ತೆರವು ಕೂಡ ಆಯಿತು.

ಇದೆಲ್ಲ ಘಟನೆಗಳ ನಡುವೆ 1992ರಲ್ಲಿ ಬಿಜೆಪಿ ಮುಖಂಡ ಮುರಳಿ ಮನೋಹರ ಜೋಶಿ ಜಮ್ಮು-ಕಾಶ್ಮೀರದಲ್ಲಿ ತಿರಂಗಾ ಯಾತ್ರೆಯನ್ನು ಆರಂಭಿಸಿದರು. ಇದರ ಬೆಂಬಲಾರ್ಥವಾಗಿ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಲ್ಲಿಯೂ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರ ನೇತೃತ್ವವನ್ನು ಪ್ರಲ್ಹಾದ ಜೋಶಿ ಹಾಗೂ ಇತರರು ವಹಿಸಿಕೊಂಡಿದ್ದರು. ಈ ಜಾತ್ರೆ ನಡೆದಾಗ ರಾಣಿ ಚೆನ್ನಮ್ಮ ವೃತ್ತದ ಪಕ್ಕದಲ್ಲಿಯೇ ಇದ್ದ ಈದ್ಗಾ ಮೈದಾನದಲ್ಲಿಯೂ ತಿರಂಗಾ ಹಾರಿಸಲು ಯತ್ನಿಸಲಾಯಿತು. ಆದರೆ ಆ ಯತ್ನಕ್ಕೆ ವಿರೋಧ ವ್ಯಕ್ತವಾಯಿತು. ಇದೇ ವಿರೋಧ ಮುಂದೆ ದೊಡ್ಡ ಹೋರಾಟಕ್ಕೆ ಕಾರಣವಾಗಿ ಹೋಯಿತು. ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ವಿರೋಧ ವ್ಯಕ್ತವಾಗಿದ್ದಕ್ಕೆ ಪ್ರಲ್ಹಾದ ಜೋಶಿ ಹಾಗೂ ಇತರರೆಲ್ಲ ಸೇರಿ 1992 ರಲ್ಲಿ ಧ್ವಜ ರಕ್ಷಣಾ ಸಮಿತಿಯನ್ನು ರಚಿಸಿದರು. ಈ ಸಮಿತಿ ಮೂಲಕ ಎಲ್ಲ ಕಡೆಗೆ ತಿರಂಗಾ ಬಗ್ಗೆ ಜಾಗೃತಿ ಮೂಡಿಸಲಾಯಿತು.

1993 ರ ಜನವರಿ 26 ರಂದು ಇದೇ ಸಮಿತಿ ವತಿಯಿಂದ ಈದ್ಗಾದಲ್ಲಿ ಧ್ವಜ ಹಾರಿಸಲು ಮುಂದಾದಾಗ ದೊಡ್ಡ ಗಲಾಟೆಯೇ ನಡೆದು ಹೋಯಿತು. ಆಗ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಒಟ್ಟು 6 ಜನರು ಮೃತಪಟ್ಟರು. ಆದರೆ ಈದ್ಗಾ ಮೈದಾನದಲ್ಲಿ ತಿರಂಗಾ ಹಾರಿಸುವಲ್ಲಿ ಧ್ವಜ ರಕ್ಷಣಾ ಸಮಿತಿ ಸದಸ್ಯರು ಯಶಸ್ವಿಯಾಗಿದ್ದರು. ಇದರ ಎಲ್ಲ ನಾಯಕತ್ವ ವಹಿಸಿದ್ದು ಪ್ರಲ್ಹಾದ ಜೋಶಿ. ಇನ್ನು 1994 ರಲ್ಲಿ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಆಗಿದ್ದಾಗ ಇಲ್ಲಿ ಧ್ವಜ ಹಾರಿಸಲು ಇದ್ದ ಅಡ್ಡಿಯನ್ನು ದೂರ ಮಾಡಿದ್ದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಈ ಸಮಸ್ಯೆಯನ್ನು ಸರಳವಾಗಿ ಬಗೆ ಹರಿಸಿದ್ದರು. ಆಗಲೂ ಇದರ ಮುಂಚೂಣಿಯಲ್ಲಿ ಇದ್ದವರು ಇದೇ ಪ್ರಲ್ಹಾದ ಜೋಶಿ.

ವರದಿ: ನರಸಿಂಹಮೂರ್ತಿ ಪ್ಯಾಟಿ

Published On - 12:50 pm, Fri, 2 September 22