ಬಡವರ ಪಾಲಿಗೆ ದುಬಾರಿಯಾದ ಧಾರವಾಡ ಜಿಲ್ಲಾ ಆಸ್ಪತ್ರೆ: ವೈದ್ಯಕೀಯ ಸೇವೆ ದರ ಏಕಾಏಕಿ ಏರಿಕೆ

| Updated By: Ganapathi Sharma

Updated on: Nov 29, 2023 | 7:30 PM

ಕಳೆದ ಹತ್ತು ವರ್ಷಗಳಿಂದ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ದರ ಏರಿಕೆ ಮಾಡಿರಲಿಲ್ಲ. ಹುಬ್ಬಳ್ಳಿ ಕಿಮ್ಸ್ ದರಕ್ಕೆ ಹೋಲಿಕೆ ಮಾಡಿ ಈ ದರ ಏರಿಕೆ ಮಾಡಲಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳಿಗೆ ಹೋಲಿಸಿದರೆ, ಇದು ತೀರಾ ಕಡಿಮೆ ಎಂದು ದರ ಏರಿಕೆಯನ್ನು ಜಿಲ್ಲಾಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಬಡವರ ಪಾಲಿಗೆ ದುಬಾರಿಯಾದ ಧಾರವಾಡ ಜಿಲ್ಲಾ ಆಸ್ಪತ್ರೆ: ವೈದ್ಯಕೀಯ ಸೇವೆ ದರ ಏಕಾಏಕಿ ಏರಿಕೆ
ವೈದ್ಯಕೀಯ ಸೇವಾ ದರ ಹೆಚ್ಚಳ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಯಿತು.
Follow us on

ಧಾರವಾಡ, ನವೆಂಬರ್ 29: ಧಾರವಾಡದ ಜಿಲ್ಲಾ ಆಸ್ಪತ್ರೆ (Dharawad District Hospital) ಈಗ ಬಡವರ ಪಾಲಿಗೆ ದುಬಾರಿಯಾಗಿ ಹೋಗಿದೆ. ಏಕೆಂದರೆ ಬಿಪಿಎಲ್ ಕಾರ್ಡ್​​ದಾರರೂ ಕೂಡ ಶೇ 50ರಷ್ಟು ಹಣ ನೀಡಿ ಚಿಕಿತ್ಸೆ ಪಡೆಯಬೇಕು ಎಂಬುದಾಗಿ ಆದೇಶ ಹೊರಡಿಸಲಾಗಿದ್ದು, ಹಿಂದಿನ ದರಗಳನ್ನು ಏಕಾಏಕಿ ಏರಿಕೆ (Service Charges Hike) ಮಾಡಲಾಗಿದೆ. ಧಾರವಾಡ ಜಿಲ್ಲಾ ಆಸ್ಪತ್ರೆ ಕೇವಲ ಜಿಲ್ಲೆಗೆ ಮಾತ್ರವಲ್ಲ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಕೆಲವು ತಾಲೂಕುಗಳ ಬಡವರಿಗೂ ಸಹ ಜೀವ ಸಂಜೀವಿನಿಯಾಗಿದೆ. ಆದರೆ ಇಂಥ ಆಸ್ಪತ್ರೆಯಿಂದ ಬಡವರು ದೂರ ಆಗುವಂಥ ಪರಿಸ್ಥಿತಿ ಬಂದಿದೆ. ಏಕೆಂದರೆ ಇಲ್ಲಿರೋ ಇಲ್ಲಿ ವೈದ್ಯಕೀಯ ಸೇವೆಯ ಎಲ್ಲ ದರಗಳನ್ನು ಏಕಾಏಕಿಯಾಗಿ ಏರಿಕೆ ಮಾಡಲಾಗಿದೆ. ಈ ಹಿಂದೆ ಇದ್ದ ಒಪಿಡಿ ನೋಂದಣಿ ಶುಲ್ಕವನ್ನು 10 ರೂಪಾಯಿಯಿಂದ 20 ರೂಪಾಯಿಗೆ ಏರಿಸಲಾಗಿದ್ದರೆ, ಅದರ ಜೊತೆಗೆ ಎಲ್ಲ ಪರೀಕ್ಷೆಗಳ ದರವನ್ನೂ ಎರಡುಪಟ್ಟು ಮಾಡಿದ್ದಾರೆ.

ಈ ಹಿಂದೆ ಬಿಪಿಎಲ್ ಕಾರ್ಡ್​​ದಾರರಿಗೆ ಇಲ್ಲಿ ನೋಂದಣಿ ಉಚಿತವಾಗಿತ್ತು. ಆದರೆ ಈಗ ಬಿಪಿಎಲ್ ಕಾರ್ಡ್​​ದಾರರೂ ಸಹ ನೋಂದಣಿ ಸೇರಿದಂತೆ ಎಲ್ಲ ಪರೀಕ್ಷೆಗಳಿಗೂ ಶೇ 50ರಷ್ಟು ಹಣ ಕೊಡಬೇಕಿದೆ. ಹೀಗಾಗಿ ಇದು ದುಬಾರಿ ಆಸ್ಪತ್ರೆ ಆಗಿ ಬದಲಾಗಿದೆ. ಇಲ್ಲಿ ಬರೋರೆಲ್ಲ ಬಡವರು. ಬಡವರಿಂದ ಹೀಗೆ ಹಣ ಸುಲಿಗೆ ಮಾಡೋದು ಎಷ್ಟರಮಟ್ಟಿಗೆ ಸರಿ ಅನ್ನೋ ಆಕ್ರೋಶ ಜನರಿಂದ ವ್ಯಕ್ತವಾಗುತ್ತಿದೆ.

ಹೀಗೆ ದರಗಳನ್ನು ಹೆಚ್ಚಳ ಮಾಡಲಾಗಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿರೋ ಹಿನ್ನೆಲೆಯಲ್ಲಿಯೇ ಇದನ್ನು ಖಂಡಿಸಿ ಹೋರಾಟಗಳು ಕೂಡ ಆರಂಭವಾಗಿವೆ. ಈಗ ಮೊದಲೇ ಬರಗಾಲ ಇದೆ. ಇಂಥ ಬರಗಾಲದ ಸಮಯದಲ್ಲಿಯೇ ದರ ಏರಿಕೆ ಮಾಡಿದ್ದು ಎಷ್ಟು ಸರಿ ಅನ್ನೋ ಆಕ್ರೋಶ ವ್ಯಕ್ತವಾಗಿದೆ. ದರ ಏರಿಕೆಯನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅನೇಕ ಹೋರಾಟಗಳು ಶುರುವಾಗಿವೆ. ಒಂದು ಕಡೆ ಸರಕಾರ ಉಚಿತ ಯೋಜನೆಗಳನ್ನು ಗ್ಯಾರಂಟಿ ಹೆಸರಿನಲ್ಲಿ ನೀಡುತ್ತಿದ್ದರೆ, ಅದೇ ಸರಕಾರ ಮತ್ತೊಂಡು ಕಡೆಯಿಂದ ಬಡವರಿಂದ ಹಣವನ್ನು ಕಿತ್ತುಕೊಳ್ಳುತ್ತಿದೆ ಅನ್ನೋ ಆಕ್ರೋಶವೂ ವ್ಯಕ್ತವಾಗುತ್ತಿದೆ.

ದರ ಏರಿಕೆಯನ್ನು ಜಿಲ್ಲಾಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ದರ ಏರಿಕೆ ಮಾಡಿರಲಿಲ್ಲ. ಹುಬ್ಬಳ್ಳಿ ಕಿಮ್ಸ್ ದರಕ್ಕೆ ಹೋಲಿಕೆ ಮಾಡಿ ಈ ದರ ಏರಿಕೆ ಮಾಡಲಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳಿಗೆ ಹೋಲಿಸಿದರೆ, ಇದು ತೀರಾ ಕಡಿಮೆ. ಈ ಹಣವನ್ನು ಇದೇ ಆಸ್ಪತ್ರೆಯ ಸುಧಾರಣೆಗೆ ವಿನಿಯೋಗ ಮಾಡುತ್ತೇವೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಕಾಶಿಯಾತ್ರೆ ಯೋಜನೆಯಡಿ ಏಕಕಾಲಕ್ಕೆ 400 ಭಕ್ತಾಧಿಗಳಿಂದ ತೀರ್ಥಯಾತ್ರೆ: ದಿವ್ಯ ದರ್ಶನ ಸಿಗಲಿ ಎಂದು ಶುಭ ಹಾರೈಸಿದ ಪ್ರಲ್ಹಾದ ಜೋಶಿ

ಸದ್ಯದ ಗ್ಯಾರಂಟಿ ಯೋಜನೆಗಳ ಕಾರಣಕ್ಕೆ ಸರ್ಕಾರದ ಬಳಿ ಸರ್ಕಾರಿ ಆಸ್ಪತ್ರೆಗಳಿಗೆ ಕೊಡುವುದಕ್ಕೂ ಅನುದಾನ ಇಲ್ಲದೇ ಇರೋ ಕಾರಣಕ್ಕೆ ಹೀಗೆ ದರ ಏರಿಕೆ ಮಾಡಿ, ಜನರಿಂದಲೇ ಹಣ ಪಡೆದು ಜನಸಾಮಾನ್ಯರ ಆಸ್ಪತ್ರೆ ನಡೆಸೋಕ್ಕೆ ಮುಂದಾದ್ರಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಜನರ ಆಕ್ರೋಶದ ಹಿನ್ನೆಲೆಯಲ್ಲಿ ಹೊಸ ದರ ಪರಿಷ್ಕರಣೆಯಾಗುತ್ತಾ ಅಥವಾ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ