ಧಾರವಾಡ, ಸೆ.1: ಮೊಬೈಲ್ ಸಿಮ್ ಕಳೆದುಕೊಂಡ ಹಿನ್ನೆಲೆಯಲ್ಲಿ ಮತ್ತೊಂದು ಸಿಮ್ ಸಕ್ರಿಯಗೊಳಿಸಲು ವಿಫಲವಾದ ರಿಲೈನ್ಸ್ ಕಂಪನಿಗೆ ಪರಿಹಾರ ನೀಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಧಾರವಾಡ (Dharwad) ನಗರದ ಮಾಳಮಡ್ಡಿ ಬಡಾವಣೆಯ ನಿವಾಸಿ ಲಕ್ಕಪ್ಪ ಬೆಣ್ಣಿ ಎಂಬುವರು 2017ರಲ್ಲಿ ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆಯಿಂದ ಜಿಯೋ ಸಿಮ್ ಖರೀದಿಸಿದ್ದರು.
ಕೋವಿಡ್-19 ಅವಧಿಯಲ್ಲಿ ಲಕ್ಕಪ್ಪ ಬೆಣ್ಣಿ ಅವರ ಆ ಸಿಮ್‌ನ್ನು ಕಳೆದುಕೊಂಡಿದ್ದರು. ಅದನ್ನು ಮತ್ತೆ ಸಕ್ರಿಯಗೊಳಿಸುವಂತೆ ಸಿಮ್ ಖರೀದಿಸಿದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆ ಮತ್ತು ಜಿಯೋ ಕಸ್ಟಮರ್ ಕೇರ್‌ಗೆ ಸಾಕಷ್ಟು ವಿನಂತಿಸಿದ್ದರು. ಆದರೂ ಹೇಳಿದ ನಂಬರಿನ ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಿರಲಿಲ್ಲ. ಅದರಿಂದ ತನ್ನ ದೈನಂದಿನ ಜೀವನ ನಿರ್ವಹಣೆ ಮತ್ತು ಬ್ಯಾಂಕ್ ಇತ್ಯಾದಿ ಕೆಲಸಕ್ಕೆ ತೊಂದರೆಯಾಗಿದ್ದು, ಎದುರುದಾರರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಲಕ್ಕಪ್ಪ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಕಳೆದುಕೊಂಡ ಸಿಮ್ ಅನ್ನು ಮರು ಸಕ್ರಿಯಗೊಳಿಸಲು ಕೇಳಿಕೊಂಡರೂ ಕೋರಿಕೆಯನ್ನು ಪರಿಗಣಿಸಲು ಸಂಸ್ಥೆಯು ವಿಫಲರಾಗಿದ್ದು, ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಅದೇ ನಂಬರ್‌ಗೆ ಸಿಮ್ ಅನ್ನು ಸಕ್ರಿಯಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಅಲ್ಲದೆ, ಸೇವಾ ನ್ಯೂನ್ಯತೆಗಾಗಿ 10 ಸಾವಿರ ರೂಪಾಯಿ ಪರಿಹಾರ ಮತ್ತು 5 ಸಾವಿರ ರೂಪಾಯಿ ಪ್ರಕರಣದ ಖರ್ಚನ್ನು ನೀಡುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ