ಧಾರವಾಡ, ಆಗಸ್ಟ್ 9: ಧಾರವಾಡ ನಗರದ (Dharawad) ಗೌಡರ ಓಣಿ ನಿವಾಸಿ ಕಿರಣ ಗಿರಿಯಪ್ಪನವರ್ ಅವರ ಅಜ್ಜ ವಿರೂಪಾಕ್ಷಪ್ಪ ಗಿರಿಯಪ್ಪನವರ್ ಎಂಬುವವರು ಧಾರವಾಡದ ಕೆಸಿಸಿ ಬ್ಯಾಂಕಿನಲ್ಲಿ (KCC Bank) 9 ಲಕ್ಷ ರೂ.ಗಳ ಠೇವಣಿ ಇರಿಸಿದ್ದರು. ಈ ಠೇವಣಿ ಅವಧಿ 2023 ರ ಜುಲೈ 27 ರಂದು ಮುಕ್ತಾಯವಾಗುವುದಿತ್ತು. ಈ ಅವಧಿಯೊಳಗೆ ವಿರೂಪಾಕ್ಷಪ್ಪ 2022 ರ ಜೂನ್ 17 ರಂದು ನಿಧನ ಹೊಂದಿದರು. ಅವರು ಠೇವಣಿಗೆ ಮೊಮ್ಮಗ ಕಿರಣ್‌ನನ್ನು ನಾಮ ನಿರ್ದೇಶನ ಮಾಡಿದ್ದರು. ಹೀಗಾಗಿ ಅಜ್ಜ ಇಟ್ಟಿದ್ದ ಠೇವಣಿ ಹಣ ಕೊಡುವಂತೆ ಕಿರಣ್ ಬ್ಯಾಂಕಿಗೆ ಅರ್ಜಿ ಹಾಕಿದ್ದರು. ಬ್ಯಾಂಕಿನವರು ಠೇವಣಿ ಹಣವನ್ನು ಕಿರಣ್ ಖಾತೆಗೆ ವರ್ಗಾಯಿಸಿದ್ದರು.
ಈ ಮಧ್ಯೆ ಠೇವಣಿದಾರ ವಿರೂಪಾಕ್ಷಪ್ಪನ ಮಗ ರಾಜೇಂದ್ರ ಮತ್ತು ಮಗಳು ಭುವನೇಶ್ವರಿ ಬ್ಯಾಂಕಿಗೆ ವಕೀಲರ ಮೂಲಕ ನೋಟಿಸ್ ಕೊಡಿಸಿ ದೂರುದಾರನಿಗೆ ಠೇವಣಿ ಹಣ ನೀಡಬಾರದೆಂದು ಆಕ್ಷೇಪಿಸಿದ್ದರು. ಅವರ ಆಕ್ಷೇಪಣೆಯನ್ನು ಪರಿಗಣಿಸಿ ಬ್ಯಾಂಕಿನವರು ದೂರುದಾರರಿಗೆ ಠೇವಣಿ ಹಣ ತಡೆಹಿಡಿದಿದ್ದರು. ಇದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಬ್ಯಾಂಕಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಿರಣ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ಧಾರವಾಡ ಬೆಳಗಾವಿ ನೂತನ ರೈಲು ಮಾರ್ಗ ಯೋಜನೆಗೆ ಭೂಸ್ವಾಧೀನದ್ದೇ ದೊಡ್ಡ ಸಮಸ್ಯೆ
ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಸದಸ್ಯ ಪ್ರಭು ಹಿರೇಮಠ ಅವರು ದೂರುದಾರ ಠೇವಣಿ ಹಣಕ್ಕೆ ಸಂಬಂಧಿಸಿದಂತೆ ನಾಮ ನಿರ್ದೇಶಿತ ಇದ್ದಾನೆ. ಕಾರಣ ಠೇವಣಿ ಹಣ ನಾಮಿನಿಯಾದ ದೂರುದಾರನಿಗೆ ಸಲ್ಲಬೇಕಾಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ. 3 ತಿಂಗಳೊಳಗಾಗಿ ಆ ಇಬ್ಬರೂ ಆಕ್ಷೇಪಿತರು ಸಂಬಂಧಿಸಿದ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ಹೂಡಿ ತಮಗೂ ಆ ಠೇವಣಿ ಹಣದಲ್ಲಿ ಇರುವ ಹಕ್ಕಿನ ಬಗ್ಗೆ ಆದೇಶ ಪಡೆದು ಬ್ಯಾಂಕಿಗೆ ಹಾಜರುಪಡಿಸುವಂತೆ ಸೂಚಿಸಿದೆ. ಅಲ್ಲದೇ ಅವರಿಬ್ಬರಿಗೂ ನೋಟಿಸ್ ನೀಡುವಂತೆ ಬ್ಯಾಂಕಿಗೆ ಆಯೋಗ ಸೂಚಿಸಿದೆ. ಮೂರು ತಿಂಗಳೊಳಗಾಗಿ ಠೇವಣಿಯಲ್ಲಿ ತಮ್ಮ ಹಕ್ಕನ್ನು ಸಾಬೀತುಪಡಿಸಿ, ಸಂಬಂಧಿಸಿದ ನ್ಯಾಯಾಲಯದಿಂದ ಆಕ್ಷೇಪಿತರು ಆದೇಶ ತರಲು ವಿಫಲರಾದಲ್ಲಿ ನಾಮಿನಿಯಾದ ದೂರುದಾರನಿಗೆ 9 ಲಕ್ಷ ರೂ. ಠೇವಣಿ ಹಣ ಮತ್ತು ಅದರ ಮೇಲೆ ಬರುವ ಬಡ್ಡಿ ಸೇರಿಸಿ ನೀಡುವಂತೆ ಬ್ಯಾಂಕಿಗೆ ಆಯೋಗ ಆದೇಶಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ