ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿಮಾ ಕಂಪನಿಗೆ ದಂಡ! ಕಾರಣವೇನು?

| Updated By: ಸಾಧು ಶ್ರೀನಾಥ್​

Updated on: Dec 06, 2023 | 6:28 PM

ಎರಡು ಪ್ರಕರಣಗಳಲ್ಲಿ ಜೂನ್ 2ನೇ ತಾರೀಖು ಬ್ಯಾಂಕಿನವರು ವಿಮಾ ಕಂಪನಿಗೆ ವಿಮಾ ಪ್ರಿಮಿಯಮ್ ಹಣ ಕಳಿಸಿದ್ದಾರೆ. ಆದ್ದರಿಂದ ವಿಮಾ ಮೊತ್ತ ಕೊಡಲು ಜೀವವಿಮಾ ನಿಗಮ ಬದ್ಧ. ಆದರೆ ವಿಮಾ ಹಣ ನೀಡದೇ ದೂರುದಾರರಿಗೆ ಸತಾಯಿಸುತ್ತಿರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ- ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಆದೇಶ

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿಮಾ ಕಂಪನಿಗೆ ದಂಡ! ಕಾರಣವೇನು?
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿಮಾ ಕಂಪನಿಗೆ ದಂಡ!
Follow us on

ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಪರಿಹಾರ ನೀಡದ ಜೀವ ವಿಮಾ ನಿಗಮಕ್ಕೆ (Insurance company) ರೂ. 6 ಲಕ್ಷಕ್ಕೂ ಹೆಚ್ಚು ಮೊತ್ತದ ದಂಡ ವಿಧಿಸಿ ದೂರುದಾರರಿಗೆ ಪರಿಹಾರ ನೀಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು (Dharwad District Consumer Commission) ಆದೇಶ ಹೊರಡಿಸಿದೆ. ಹುಬ್ಬಳ್ಳಿಯ ಲಲಿತಾ ನಾಕೋಡ ಹಾಗೂ ಧಾರವಾಡದ ಪ್ರವೀಣ ಕಲ್ಲಟ್ಟಿ ಎಂಬುವವರು ಕರ್ನಾಟಕ ಬ್ಯಾಂಕ್ ಮತ್ತು ಜೀವ ವಿಮಾ ನಿಗಮದ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದರು. ತಮಗೆ ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಯನ್ವಯ ಬರಬೇಕಾದ ಮೊತ್ತವನ್ನು (Compensation) ಕೊಡದೇ ಸತಾಯಿಸುತ್ತಿದ್ದಾರೆ ಎಂದು ದೂರಿದ್ದರು.

1ನೇ ಪ್ರಕರಣದಲ್ಲಿ ಲಲಿತಾ ಅವರ ಪತಿ ರಮೇಶ ನಾಕೋಡ ಎದುರುದಾರ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಪಿಎಂಜೆಜೆಬಿವೈ ಸ್ಕೀಮಿನಲ್ಲಿ 2015ರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಪ್ರತಿ ವರ್ಷ ಪ್ರಿಮಿಯಮ್ ಹಣ ರೂ. 330ರಂತೆ ಕಡಿತ ಮಾಡಿಕೊಂಡಿದ್ದರು. ಪತಿ ರಮೇಶ ನಾಕೋಡ 2021ರ ಏಪ್ರಿಲ್‌ ತಿಂಗಳಲ್ಲಿ ಮೃತ ಪಟ್ಟಿದ್ದರು. ಅದೇ ರೀತಿ 2ನೇ ದೂರುದಾರ ಪ್ರವೀಣ ಕಲ್ಲಟ್ಟಿ ಅವರ ತಾಯಿ ಎದುರುದಾರ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಅವರು ಸಹ 2015 ತಮ್ಮ ಹೆಸರನ್ನು ನೋಂದಾಯಿಸಿ ಎದುರುದಾರರ ಬ್ಯಾಂಕಿನವರು ಪ್ರತಿ ವರ್ಷ ಪ್ರಿಮಿಯಮ್ ಹಣ ರೂ. 330 ಕಡಿತ ಮಾಡಿಕೊಂಡಿದ್ದರು. ದೂರುದಾರರ ತಾಯಿ ಅಮ್ರಿತಾ ಕಲ್ಲಟ್ಟಿ 2020ರ ನವೆಂಬರ್‌ ತಿಂಗಳಲ್ಲಿ ಮೃತ ಪಟ್ಟಿದ್ದರು. ಇಬ್ಬರೂ ವಿಮಾದಾರರು ಸತ್ತ ಮೇಲೆ ಅವರಿಗೆ ಸಂಬಂಧಿಸಿದ ತಲಾ ರೂ. 2 ಲಕ್ಷ ವಿಮಾ ಮೊತ್ತವನ್ನು ಬ್ಯಾಂಕ್ ಹಾಗೂ ವಿಮಾ ಕಂಪನಿ ವಿಮಾ ಮೊತ್ತವನ್ನು ಕೊಡದೇ ನಿರ್ಲಕ್ಷಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ಕಾಣಿಸಿದ್ದರು.

ಈ ದೂರುಗಳಿಗೆ ಆಕ್ಷೇಪಣೆ ಎತ್ತಿದ ಕರ್ನಾಟಕ ಬ್ಯಾಂಕ್‌ ತಮ್ಮಿಂದ ದೂರುದಾರರಿಗೆ ಯಾವುದೇ ಸೇವಾ ನ್ಯೂನ್ಯತೆ ಆಗಿಲ್ಲ. ನಾವು ನಿಯಮಿತವಾಗಿ ದೂರುದಾರರ ಸಂಬಂಧಿಗಳ ಮೃತರ ಬ್ಯಾಂಕ್ ಖಾತೆಯಿಂದ ಯೋಜನೆಯ ವಿಮಾ ಮೊತ್ತ ರೂ. 330 ಕಡಿತಗೊಳಿಸಿ ಎಲ್‌ಐಸಿಗೆ ವರ್ಗಾಯಿಸಿದ್ದು, ದೂರನ್ನು ವಜಾ ಮಾಡುವಂತೆ ಆಕ್ಷೇಪಿಸಿದ್ದರು. ಅದೇ ರೀತಿ ಎದುರುದಾರ ಎಲ್‌ಐಸಿ ದೂರುಗಳಿಗೆ ಆಕ್ಷೇಪಣೆ ಎತ್ತಿ ಯೋಜನೆಯ ಅಡಿ ಬ್ಯಾಂಕಿನವರು ವಿಮಾ ಮೊತ್ತವನ್ನು 1ನೇ ತಾರೀಖಿನ ಬದಲು ಜೂನ್ 2ನೇ ತಾರೀಖು ಬ್ಯಾಂಕಿನವರು ಪಾವತಿಸಿದ್ದು ಅದು ತಡವಾಗಿರುವ ಕಾರಣ ತಾವು ವಿಮೆ ಹಣ ಕೊಡಲು ಬದ್ದರಲ್ಲ ಎಂದು ಆಕ್ಷೇಪಿಸಿದ್ದರು.

ಇದನ್ನೂ ಓದಿ: ಗೋಲ್ಡನ್ ಹೋಮ್ ಶೆಲ್ಟರ್ಸ್‌ಗೆ ಖರೀದಿ ಪತ್ರ ಬರೆದು ಕೊಡಲು ಗ್ರಾಹಕರ ಆಯೋಗ ಆದೇಶ

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಎರಡು ಪ್ರಕರಣಗಳಲ್ಲಿ ದೂರುದಾರರ ಸಂಬಂಧಿಕರ ಉಳಿತಾಯ ಖಾತೆಯಿಂದ ಪ್ರತಿ ವರ್ಷ ಯೋಜನೆಯ ವಿಮೆ ಮೊತ್ತ ಪಡೆದುಕೊಂಡು ಅವರ ನಿಧನದ ನಂತರ ವಿಮಾ ಮೊತ್ತವನ್ನು ಪಾವತಿಸುವುದು ತಪ್ಪು. ಬ್ಯಾಂಕು ಮತ್ತು ಜೀವ ವಿಮಾ ನಿಗಮದ ನಡುವೆ ಆಗಿರುವ ಒಪ್ಪಂದ ಪ್ರಕಾರ ಪ್ರತಿ ವರ್ಷ ಜೂನ್-30 ರೊಳಗಾಗಿ ಬ್ಯಾಂಕಿನವರು ಪ್ರಿಮಿಯಮ್ ಮೊತ್ತವನ್ನು ವಿಮಾ ಕಂಪನಿಗೆ ಕಳಿಸಬೇಕು ಎಂದು ಒಡಂಬಡಿಕೆಯಾಗಿದೆ.

ಈ ಎರಡೂ ಪ್ರಕರಣಗಳಲ್ಲಿ ಜೂನ್ 2ನೇ ತಾರೀಖು ಬ್ಯಾಂಕಿನವರು ವಿಮಾ ಕಂಪನಿಗೆ ವಿಮಾ ಪ್ರಿಮಿಯಮ್ ಹಣ ಕಳಿಸಿದ್ದಾರೆ. ಆದ್ದರಿಂದ ತಲಾ ರೂ. 2 ಲಕ್ಷ ವಿಮಾ ಮೊತ್ತದ ಹಣ ವಿಮಾದಾರರಿಗೆ ಕೊಡಲು ಜೀವವಿಮಾ ನಿಗಮದವರು ಬದ್ಧರಿದ್ದಾರೆ. ಆದರೆ ಅವರು ಆ ವಿಮಾ ಹಣ ನೀಡದೇ ದೂರುದಾರರಿಗೆ ಸತಾಯಿಸುತ್ತಿರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ.

ಹೀಗಾಗಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಇಬ್ಬರೂ ದೂರುದಾರರಿಗೆ ತಲಾ ರೂ. 2 ಲಕ್ಷ ವಿಮಾ ಮೊತ್ತ ಮತ್ತು ಅವರ ವಿಮಾ ಅರ್ಜಿ ತಿರಸ್ಕಾರ ಮಾಡಿದ ದಿನಾಂಕದಿಂದ ಪೂರ್ತಿ ಹಣ ಸಂದಾಯ ಮಾಡುವವರೆಗೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಒಬ್ಬರಿಗೆ ರೂ. 2.37 ಲಕ್ಷ ಮತ್ತು ಇನ್ನೊಬ್ಬ ದೂರುದಾರನಿಗೆ ರೂ. 2.43 ಲಕ್ಷ ನೀಡುವಂತೆ ಜೀವ ವಿಮಾ ನಿಗಮಕ್ಕೆ ಆಯೋಗ ನಿರ್ದೇಶಿಸಿದೆ. ಇಬ್ಬರೂ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ತಲಾ ರೂ. 50 ಸಾವಿರ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ತಲಾ ರೂ. 10 ಸಾವಿರಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ಎದುರುದಾರ ಎಲ್.ಐ.ಸಿ.ಗೆ ಆಯೋಗ ಆದೇಶಿಸಿದೆ. ಎರಡು ಪ್ರಕರಣಗಳಲ್ಲಿ ಎದುರುದಾರ ಕರ್ನಾಟಕ ಬ್ಯಾಂಕ್ ವಿರುದ್ಧದ ದೂರನ್ನು ವಜಾಗೊಳಿಸಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ