ಧಾರವಾಡ, ಜುಲೈ 27: ಕಡಿಮೆ ಬೆಲೆಯಲ್ಲಿ ಸಿಗುತ್ತೆ ಅಂತ ಅನೇಕರು ಇಂದಿನ ದಿನಗಳಲ್ಲಿ ಆನ್ಲೈನ್ ಮೂಲಕವೇ ಅನೇಕ ವಸ್ತುಗಳನ್ನು ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ಅನೇಕರಿಗೆ ವಂಚನೆಯೂ ಆಗಿರುವುದು ಎಲ್ಲರಿಗೂ ಗೊತ್ತಿರುವ ಸತ್ಯವೇ ಆಗಿದೆ. ಇದೇ ಕಾರಣಕ್ಕಾಗಿ ವಂಚನೆಯಿಂದ ತಪ್ಪಿಸಿಕೊಳ್ಳಲು ದೊಡ್ಡ ದೊಡ್ಡ ಕಂಪನಿಗಳ ಮೊರೆ ಹೋಗುವುದು ಸಹಜ. ಇಂಥ ಕಂಪನಿಗಳು ಗ್ರಾಹಕರು ಕೇಳಿರುವ ವಸ್ತುಗಳನ್ನು ಪೂರೈಸುತ್ತವೆ. ಆದರೆ ಬಳಿಕ ಸೇವೆ ನೀಡುವಲ್ಲಿ ವೈಫಲ್ಯ ತೋರಿಸುತ್ತವೆ. ಇಂಥ ಕಂಪನಿಯೊಂದಕ್ಕೆ ಧಾರವಾಡ ಜಿಲ್ಲಾ ಗ್ರಾಹಕ ಆಯೋಗವು (District Consumer Commission) ಬಿಸಿ ಮುಟ್ಟಿಸಿದೆ.
ಧಾರವಾಡ ನಗರದ ಸಪ್ತಾಪುರ ಬಡಾವಣೆಯ ನಿವಾಸಿ ಗಿರೀಶ ಜೋಶಿ ತಮ್ಮ ಮನೆ ಬಳಕೆಗಾಗಿ ಅಮೆಜಾನ್ ವೆಬ್‌ಸೈಟ್‌ನಿಂದ 2020 ರ ಆಗಸ್ಟ್ 7 ರಂದು ರೂ. 15,499 ಸಂದಾಯ ಮಾಡಿ ವಾಷಿಂಗ್ ಮಶೀನ್ ಖರೀದಿಸಿದ್ದರು. ಖರೀದಿಸಿದ ಕೆಲವೇ ತಿಂಗಳಲ್ಲಿ ಮಶೀನಿನಲ್ಲಿ ದೋಷ ಉಂಟಾಗಿತ್ತು. ಆ ವಿಷಯವನ್ನು ಕಂಪನಿಗೆ ತಿಳಿಸಿದ್ದರು.
ಇದನ್ನೂ ಓದಿ: ನಾಲ್ಕು ದಶಕಗಳ ಕಾಲ ಸಿಪಾಯಿಯಾಗಿ ಸೇವೆ: ಧಾರವಾಡದ ಕವಿವಿಯ ಜಯಣ್ಣ ಕಮ್ಮಾರ್ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಕಂಪನಿಯವರು ಮೂರು ತಿಂಗಳ ನಂತರ ಮಶೀನಿನ ಸಮಸ್ಯೆಯನ್ನು ನಿವಾರಿಸಿದ್ದರು. ಆದರೆ, ಮಶೀನಿನಲ್ಲಿ ಮತ್ತೇ ದೋಷ ಉಂಟಾಗಿ ತೊಂದರೆಯಾಯಿತು. ಈ ಸಂಗತಿಯನ್ನು ಕಂಪನಿಯವರಿಗೆ ತಿಳಿಸಿದರೂ ಸಕಾಲದಲ್ಲಿ ದುರಸ್ತಿ ಮಾಡಿರಲಿಲ್ಲ. ಹೀಗಾಗಿ ಗಿರೀಶ ಅವರು ಗ್ರಾಹಕರ ಆಯೋಗದಲ್ಲಿ ದೂರು ದಾಖಲು ಮಾಡಿದ್ದರು.
ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ವಾಷಿಂಗ್ ಮಷಿನ್ ಖರೀದಿಸಿದ ಒಂದು ವರ್ಷದ ಒಳಗಡೆಯೇ ಅದರಲ್ಲಿ ದೋಷ ಕಂಡುಬಂದಿದ್ದರಿಂದ ಮತ್ತು ಆ ಬಗ್ಗೆ ದೂರೂ ನೀಡಿದರೂ ಸರಿಯಾಗಿ ಸ್ಪಂದಿಸದೇ ಕಂಪನಿ ಸೇವಾ ನ್ಯೂನ್ಯತೆ ಎಸಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: NWKRTC Tour Package: ಜಲಪಾತ ಸ್ಥಳಗಳಿಗೆ ವಾಯುವ್ಯ ಸಾರಿಗೆ ಟೂರ್ ಪ್ಯಾಕೇಜ್, ಜನರಿಂದ ಉತ್ತಮ ಪ್ರತಿಕ್ರಿಯೆ
ಕಂಪನಿಯವರು ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಹೊಸ ವಾಶಿಂಗ್ ಮಷಿನ್ನನ್ನು ದೂರುದಾರರಿಗೆ ಬದಲಾಯಿಸಿ ಕೊಡಬೇಕು. ತಪ್ಪಿದ್ದಲ್ಲಿ ಆ ವಾಷಿಂಗ್ ಮಷಿನ್ನ ಪೂರ್ತಿ ಹಣ ರೂ. 15,499 ಹಾಗೂ ಮೇಲೆ ಶೇ. 8 ರಂತೆ ಬಡ್ಡಿಯನ್ನು ಸಂದಾಯ ಮಾಡುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಕಂಪನಿಯವರು ರೂ. 10,000 ಪರಿಹಾರ ಹಾಗೂ ರೂ. 3,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ನಿರ್ದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.