ಧಾರವಾಡ, ಸೆ.4: ಸೇವಾ ನ್ಯೂನತೆ ಎಸಗಿದ ಬಿಸ್ಲೇರಿ ಕಂಪನಿಗೆ ಧಾರವಾಡ (Dharwad) ಜಿಲ್ಲಾ ಗ್ರಾಹಕರ ಆಯೋಗವು ದಂಡ ವಿಧಿಸಿ ಆದೇಶಿಸಿದೆ. ಹುಬ್ಬಳ್ಳಿಯ ಲಿಂಗರಾಜ ನಗರದ ಹೂಗಾರ ಲೇಔಟ್‌ನ ದೇವೇಂದ್ರಪ್ಪ ಹೂಗಾರ ಅನ್ನುವವರು ಹುಬ್ಬಳ್ಳಿಯ ಕ್ಲಬ್ ರಸ್ತೆಯಲ್ಲಿ ಶ್ರೀ ರಾಘವೇಂದ್ರ ಜ್ಯೂಸ್ ಹಾಗೂ ಐಸ್‍ಕ್ರೀಮ್ ಅಂಗಡಿಯನ್ನು ಸ್ವಯಂ ಉದ್ಯೋಗದ ಅಡಿ ನಡೆಸುತ್ತಿದ್ದರು.
ಅವರು ತಮ್ಮ ಅಂಗಡಿಯಲ್ಲಿ ಬಿಸ್ಲೇರಿ ನೀರು, ಜೂಸ್ ಮತ್ತು ಐಸ್‌ಕ್ರೀಮ್‌ಗಳನ್ನು ಮಾರಾಟ ಮಾಡುತ್ತಿದ್ದರು. ಜನವರಿ 01, 2023 ರಂದು ಹಳೆ ಹುಬ್ಬಳ್ಳಿಯ ಆನಂದ ನಗರದ ಸಾಯಿ ಎಂಟರ್‌ಪ್ರೈಸಸ್‍ರವರಿಂದ ರೂ. 495 ಕೊಟ್ಟು ದೇವೇಂದ್ರಪ್ಪ ಹೂಗಾರ ವಿವಿಧ ಬಗೆಯ ಬಿಸ್ಲೇರಿ ಬಾಟಲಿಗಳನ್ನು ಖರೀದಿಸಿದ್ದರು.
ಆ ಬಾಕ್ಸನ್ನು ತೆಗೆದು ನೋಡಿದಾಗ 1 ಲೀಟರಿನ ಬಿಸ್ಲೇರಿ ಬಾಟಲಿಯಲ್ಲಿ ಸತ್ತ ಮತ್ತು ಕೊಳೆತ ಜೇಡರ ಹುಳು ಪತ್ತೆಯಾಗಿತ್ತು. ಆ ಬಾಟಲಿಯ ನೀರು ಸಹ ಪರಿಶುದ್ಧವಾಗಿಲ್ಲದ ಕಾರಣ ಬಿಸ್ಲೇರಿ ನೀರಿನ ಬಾಟಲಿಯ ಉತ್ಪಾದಕರಾದ ಮಸ್ಕಿಯ ಸಪ್ತಗಿರಿ ಇಂಡಸ್ಟ್ರೀಸ್, ಮುಂಬೈ ಬಿಸ್ಲೇರಿ ಕಂಪನಿ ಹಾಗೂ ಹುಬ್ಬಳ್ಳಿಯ ಸಾಯಿ ಎಂಟರ್‌ಪ್ರೈಸಸ್‍ರವರು ತನಗೆ ಸೇವಾ ನ್ಯೂನತೆ ಎಸಗಿದ್ದಾರೆ. ಹೀಗಾಗಿ ಕಂಪನಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ದೇವೇಂದ್ರಪ್ಪ ಹೂಗಾರ ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನ ಜೊತೆ ಬಿಸ್ಲೇರಿ ಬಾಟಲಿಯನ್ನೂ ಆಯೋಗದ ಮುಂದೆ ಹಾಜರುಪಡಿಸಿದ್ದರು.
ಇದನ್ನೂ ಓದಿ: ಧಾರವಾಡ: ಸಿಮ್ ಸಕ್ರಿಯಗೊಳಿಸಲು ಜಿಯೋ ಕಂಪನಿಗೆ ನಿರ್ದೇಶನ ನೀಡಿದ ಗ್ರಾಹಕರ ಆಯೋಗ
ದೇವೇಂದ್ರಪ್ಪ ಹೂಗಾರ ವ್ಯಾಪಾರಿಯಾಗಿದ್ದು, ಅವರು ತಮ್ಮ ವ್ಯವಹಾರಕ್ಕಾಗಿ ಆ ಬಿಸ್ಲೇರಿ ಬಾಟಲಿಗಳನ್ನು ಖರೀದಿಸಿದ್ದಾರೆ. ಹೀಗಾಗಿ ಅವರು ಗ್ರಾಹಕನಾಗುವುದಿಲ್ಲ ಎಂದು ಮುಂಬೈ ಬಿಸ್ಲೇರಿ ಕಂಪನಿ ಹಾಗೂ ಹುಬ್ಬಳ್ಳಿಯ ಸಾಯಿ ಎಂಟರ್‌ಪ್ರೈಸಸ್ ಆಕ್ಷೇಪಣೆ ಎತ್ತಿದೆ. ಅಲ್ಲದೇ ತಾವು ಅಂತಾರಾಷ್ಟ್ರೀಯ ಖ್ಯಾತಿಯ ನೀರು ಬಾಟಲಿ ಉತ್ಪಾದಕರಿದ್ದು, ಪ್ರತಿ ಬಾಟಲಿ ನೀರನ್ನು ತಯಾರಿಸುವಾಗ ಆ ನೀರಿನ ಗುಣಮಟ್ಟ ಮತ್ತು ಪರಿಶುದ್ಧತೆಯ ಬಗ್ಗೆ ಪರಿಶೀಲಿಸಿ ಹಾಗೂ ಕಾಳಜಿ ವಹಿಸಿ ತಯಾರಿಸುವುದಾಗಿ ಹೇಳಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ತಮ್ಮಿಂದ ಯಾವುದೇ ಸೇವಾ ನ್ಯೂನ್ಯತೆ ಆಗಿಲ್ಲ ಎಂದು ಆಕ್ಷೇಪಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ದೇವೇಂದ್ರಪ್ಪ ವ್ಯಾಪಾರಿ ಆಗಿದ್ದರೂ ತನ್ನ ಕುಟುಂಬ ನಿರ್ವಹಣೆಗಾಗಿ ಸ್ವಯಂ ಉದ್ಯೋಗ ನಡೆಸುತ್ತಿದ್ದಾರೆ. ಹೀಗಾಗಿ ಅವರು ಗ್ರಾಹಕನಾಗುತ್ತಾರೆ ಮತ್ತು ಬಿಸ್ಲೇರಿ ಕಂಪನಿಯವರು ಸೇವೆ ಒದಗಿಸುವವರಾಗುತ್ತಾರೆ ಅಂತಾ ಆಯೋಗ ಅಭಿಪ್ರಾಯಪಟ್ಟಿದೆ.
ಆಯೋಗದ ಮುಂದೆ ಹಾಜರು ಮಾಡಿದ ಸೀಲ್ ಹೊಂದಿರುವ ಬಿಸ್ಲೇರಿ ನೀರಿನ ಬಾಟಲಿಯಲ್ಲಿ ಸತ್ತ ಮತ್ತು ಕೊಳೆತ ಜೇಡರ ಹುಳು ಇದೆ. ಅದರಲ್ಲಿರುವ ನೀರು ಕಲುಷಿತವಾಗಿದೆ ಅಂತಾ ಹೇಳಿ ಎದುರುದಾರರ ಆಕ್ಷೇಪಣೆಗಳನ್ನು ತಳ್ಳಿಹಾಕಿದ ಆಯೋಗ, ಕಳಪೆ ಗುಣಮಟ್ಟದ ನೀರು ಉತ್ಪಾದಿಸಿ ಸರಬರಾಜು ಮಾಡಿರುವುದರಿಂದ ಬಿಸ್ಲೇರಿ ಕಂಪನಿಯವರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ತೀರ್ಪು ನೀಡಿದೆ.
ಬಿಸ್ಲೇರಿ ಬಾಟಲಿಗಳನ್ನು ಖರೀದಿಸಲು ದೇವೆಂದ್ರಪ್ಪ ಕೊಟ್ಟ ರೂ. 495 ಹಣವನ್ನು ಹಿಂತಿರುಗಿಸಬೇಕು ಮತ್ತು ಸೇವಾ ನ್ಯೂನ್ಯತೆಯಿಂದ ದೂರುದಾರನಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ. 50,000 ಪರಿಹಾರ ಮತ್ತು ರೂ. 10,000 ಪ್ರಕರಣದ ಖರ್ಚು ವೆಚ್ಚವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಬಿಸ್ಲೇರಿ ಕಂಪನಿ ಮತ್ತು ಮಸ್ಕಿಯ ಸಪ್ತಗಿರಿ ಇಂಡಸ್ಟ್ರೀಸ್‌ಗೆ ಆಯೋಗವು ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:26 pm, Mon, 4 September 23