ಧಾರವಾಡ, ಸೆ.27: ರಾಜ್ಯದಲ್ಲಿ ಮಳೆ ಕೈಗೊಟ್ಟಿದೆ. ಹಲವು ಜಿಲ್ಲೆಗಳಲ್ಲಿ ಬರ (Drought) ತಾಂಡವವಾಡುತ್ತಿದೆ. ಹನಿ ನೀರಿಗೂ ಪರದಾಡೊ ಸ್ಥಿತಿ ನಿರ್ಮಾಣವಾಗುತ್ತಿದೆ. ಸಾಕು ಪ್ರಾಣಿಗಳಿಗೂ ತಿನ್ನಲು ಮೇವಿಲ್ಲ, ಕುಡಿಯೋದಕ್ಕೂ ನೀರಿಲ್ಲ. ಬರದ ಛಾಯೆ ನಡುವೆ ಅನ್ನದಾತರಿಗೆ (Farmers) ಮತ್ತೊಂದು ಸಂಕಷ್ಟ ಎದುರಾಗಿದೆ. ಧಾರವಾಡದ ಮಾಳಾಪುರ ಬಡಾವಣೆಯಲ್ಲಿ ಪ್ರತಿ ಮಂಗಳವಾರ ಜಾನುವಾರುಗಳ ಸಂತೆ ನಡೆಯುತ್ತೆ. ಆದರೆ ಸಂತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾನುವಾರುಗಳು ಕಂಡು ಬರುತ್ತಿವೆ. ಯಾಕಂದ್ರೆ ಬರದಿಂದ ಕಂಗಾಲಾಗಿರೋ ರೈತರು ಜಾನುವಾರುಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಸುಗಳನ್ನ ಮಾರುತ್ತಿದ್ದಾರೆ.
ಧಾರವಾಡದಲ್ಲಿ ಮೇವು ಹಾಗೂ ನೀರಿನ ಅಭಾವ ಹೆಚ್ಚಾಗಿದೆ. ಹಾಲು ಕರೆಯುವ ಒಂದು ರಾಸುವಿಗೆ ಮೇವು, ಹಿಂಡಿ, ಬೂಸಾ ಸೇರಿದಂತೆ ಇತರ ಖರ್ಚಿಗೆ 300 ರೂಪಾಯಿ ಖರ್ಚಾಗುತ್ತದೆ. ಆದರೆ ಪ್ರತಿ ದಿನ 6 ರಿಂದ 8 ಲೀಟರ್ ಹಾಲು ಉತ್ಪಾದಿಸಿ ಡೇರಿಗೆ ಮಾರಿದರೆ ಕೇವಲ 250 ರೂಪಾಯಿ ಆದಾಯ ದೊರಕುತ್ತಿದೆ. ಇದರಿಂದ ಹೈನುಗಾರರು ತಮ್ಮ ಹಾಲು ಕರೆಯುವ ಹಸುಗಳನ್ನು ಕೂಡ ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಜಾನುವಾರುಗಳನ್ನು ಮಾರಾಟಕ್ಕೆ ತಂದರೆ ಅರ್ಧಕ್ಕಿಂತ ಕಡಿಮೆ ಬೆಲೆಗೆ ಕೇಳಲಾಗುತ್ತಿದೆ ಅನ್ನೋದು ರೈತರ ನೋವು.
ಇದನ್ನೂ ಓದಿ: ಮಳೆ ಕೊರತೆ; ಹೊರ ರಾಜ್ಯಗಳಿಗೆ ಮೇವು ಸಾಗಾಟ ನಿಷೇಧಿಸಿದ ಕರ್ನಾಟಕ
ಗ್ರಾಮೀಣ ಭಾಗದಲ್ಲಿ ಜಾನುವಾರು ಸಾಕಿದವರ ಸಮಸ್ಯೆ ಹೇಳತೀರದಾಗಿದೆ. ಹಸುಗಳಿಗೆ ಮೇವು ಇಲ್ಲದೇ ರೈತರು ಪರದಾಡುತ್ತಿದ್ದರೆ. ಮೇವು ಖರೀದಿಸಿ ಜಾನುವಾರುಗಳನ್ನು ರಕ್ಷಿಸಿಕೊಳ್ಳೋಣ ಅಂದರೆ ಎಲ್ಲಿಯೂ ಮೇವು ಸಿಗತ್ತಿಲ್ಲ. ಈ ಬಾರಿ ಬರದಿಂದಾಗಿ ರೈತರಲ್ಲಿನ ಆರ್ಥಿಕ ಶಕ್ತಿಯೂ ತೀರಾನೇ ಕುಗ್ಗಿ ಹೋಗಿದೆ. ಹೀಗಾಗಿ ಎತ್ತು, ಎಮ್ಮೆ, ಆಕಳು ಸೇರಿದಂತೆ ಎಲ್ಲ ಬಗೆಯ ಜಾನುವಾರುಗಳನ್ನು ರೈತರು ಸಂತೆಗೆ ತಂದು ಮಾರ್ತಿದ್ದಾರೆ. ಆದ್ರೆ ಹಸುಗಳನ್ನ ಖರೀದಿ ಮಾಡಲು ಜನರು ಮುಂದಾಗುತ್ತಿಲ್ಲ. ಹೀಗಾಗಿ ರೈತರು ದಿಕ್ಕೇ ತೋಚದೆ ಕೂತಿದ್ದಾರೆ. ರೈತರ ಸಂಕಷ್ಟದ ಬಗ್ಗೆ ಉಸ್ತುವಾರಿ ಸಚಿವರನ್ನ ಕೇಳಿದ್ರೆ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದಾರೆ.
ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೆ ಅನ್ನದಾತರ ಬದುಕು ಬೀದಿಗೆ ಬಂದಿದೆ. ಬೆಳೆ ಸರ್ವನಾಶ ಆಗಿದ್ರೆ, ಇತ್ತ ಸಾಕಿರೋ ಪ್ರಾಣಿಗಳನ್ನು ಉಳಿಸಿಕೊಳ್ಳಲು ರೈತರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಇನ್ನಾದ್ರೂ ಸರ್ಕಾರ ನೇಗಿಲಯೋಗಿ ಕಣ್ಣೀರು ಒರೆಸಬೇಕಿದೆ.
ಧಾರವಾಡಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಕಿಕ್ ಮಾಡಿ