ಧಾರವಾಡ: ಹಳೆಯ ಬೆಲೆಯಲ್ಲಿಯೇ ಜಮೀನು ಸ್ವಾಧೀನಕ್ಕೆ ಮುಂದಾಗಿದೆ ಸರ್ಕಾರ, ಭೂಮಿ ಕಳೆದುಕೊಂಡ ರೈತರ ಗೋಳು ಕೇಳೋರೇ ಇಲ್ಲ

| Updated By: ಸಾಧು ಶ್ರೀನಾಥ್​

Updated on: Dec 02, 2022 | 2:37 PM

ಆ ಊರಿನ ರೈತರು ಕೇಂದ್ರ ಮತ್ತು ರಾಜ್ಯದ ಸರ್ಕಾರದ ಮಹತ್ವದ ಯೋಜನೆಗಳಿಗೆಲ್ಲ ತಮ್ಮ ಭೂಮಿ ಕೊಟ್ಟು ಕೊಟ್ಟೂ ನೊಂದೂ ಬೆಂದು ಹೋಗಿದ್ದಾರೆ. ಈಗ ಅಳಿದುಳಿದ ಭೂಮಿಯಲ್ಲಿ ಹೇಗೋ ಜೀವನೋಪಾಯ ಮಾಡಿಕೊಂಡಿದ್ದಾರೆ. ಆದರೆ ಈಗ ಆ ಭೂಮಿಯ ಮೇಲೂ ಸರ್ಕಾರದ ಕಣ್ಣು ಬಿದ್ದಿದೆ.

ಧಾರವಾಡ: ಹಳೆಯ ಬೆಲೆಯಲ್ಲಿಯೇ ಜಮೀನು ಸ್ವಾಧೀನಕ್ಕೆ ಮುಂದಾಗಿದೆ ಸರ್ಕಾರ, ಭೂಮಿ ಕಳೆದುಕೊಂಡ ರೈತರ ಗೋಳು ಕೇಳೋರೇ ಇಲ್ಲ
ಧಾರವಾಡ: ಹಳೆಯ ಬೆಲೆಯಲ್ಲಿಯೇ ಜಮೀನು ಸ್ವಾಧೀನಕ್ಕೆ ಮುಂದಾಗಿದೆ ಸರ್ಕಾರ
Follow us on

ಆ ಊರಿನ ರೈತರು ಕೇಂದ್ರ ಮತ್ತು ರಾಜ್ಯದ ಸರ್ಕಾರದ ಮಹತ್ವದ ಯೋಜನೆಗಳಿಗೆಲ್ಲ ತಮ್ಮ ಭೂಮಿ ಕೊಟ್ಟು ಕೊಟ್ಟೂ ನೊಂದೂ ಬೆಂದು ಹೋಗಿದ್ದಾರೆ. ಈಗ ಅಳಿದುಳಿದ ಭೂಮಿಯಲ್ಲಿ ಹೇಗೋ ಜೀವನೋಪಾಯ ಮಾಡಿಕೊಂಡಿದ್ದಾರೆ. ಆದರೆ ಈಗ ಆ ಭೂಮಿಯ ಮೇಲೂ ಸರ್ಕಾರದ ಕಣ್ಣು ಬಿದ್ದಿದೆ. ಹೀಗಾಗಿ ತಮ್ಮ ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸಿರೋ ಆ ರೈತರು ಭಾರಿ ಮೊತ್ತದ ಪರಿಹಾರ (Compensation) ಕೇಳುತ್ತಿದ್ದಾರೆ.

ಧಾರವಾಡ (Dharwad) ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ರೈತರ ಜಮೀನುಗಳು ಫಲವತ್ತಾದ ಬೆಳೆ (Agriculture) ಹೊಂದಿವೆ. ಆದರೆ ಧಾರವಾಡದಲ್ಲಿ ಹೊಸದಾಗಿ ಸ್ಥಾಪನೆಯಾಗಿರೋ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಂದರೆ ಐಐಟಿಗೆ ಇದೇ ರೈತರ ಪಕ್ಕದ ಜಮೀನುಗಳು ಹೋಗಿವೆ. ಅನೇಕ ಕೈಗಾರಿಕಾ ಯೋಜನೆಗಳಿಗೂ ನೂರಾರು ಎಕರೆ ಭೂಮಿ ಇದೇ ಗ್ರಾಮದಿಂದ ಹೋಗಿದೆ. ಇಷ್ಟೆಲ್ಲ ಆದ ಬಳಿಕ ಈಗ ಒಂದಷ್ಟು ಭೂಮಿ ಮಾತ್ರವೇ ಇದ್ದು, ಅದನ್ನು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಜಿಲ್ಲಾಡಳಿತ ಸ್ವಾಧೀನಪಡಿಸಿಕೊಳ್ಳೋಕೆ ಮುಂದಾಗಿದೆ.

ಆದ್ರೆ ಇದಕ್ಕೆ ಈಗ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಸರ್ಕಾರ ನಿಗದಿಪಡಿಸಿರೋ ದರ ರೈತರಿಗೆ ತೃಪ್ತಿ ತಂದಿಲ್ಲ. ಒಟ್ಟು 537 ಎಕರೆ 28 ಗುಂಟೆ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರೋ ಜಿಲ್ಲಾಡಳಿತ ಮೊದಲು ನಿಗದಿ ಮಾಡಿದ್ದ ದರ ಎಕರೆಗೆ 30 ಲಕ್ಷ ಮಾತ್ರ. ಅದಕ್ಕೆ ರೈತರು ತೀವ್ರ ವಿರೋಧ ಮಾಡಿದಾಗ, ಮತ್ತೊಂದು ಸುತ್ತಿನ ಸಭೆ ನಡೆಸಿರೋ ಜಿಲ್ಲಾಧಿಕಾರಿ ಅದನ್ನು ಈಗ 33 ಲಕ್ಷಕ್ಕೆ ಏರಿಸಿದ್ದಾರೆ. ಆದ್ರೆ ರೈತರ ಬೇಡಿಕೆ ಇರೋದು 75 ಲಕ್ಷದ ಮೇಲೆ. ಅಷ್ಟು ಕೊಟ್ಟರೇ ಮಾತ್ರ ಭೂಮಿ ಕೊಡ್ತೇವಿ ಅದು ಬಿಟ್ಟು ಒತ್ತಾಯ ಮಾಡಿದ್ರೆ ನೀವು ಕೊಡೊ ಪರಿಹಾರದ ಜೊತೆಗೆ ವಿಷವನ್ನೂ ಕೊಡಿ ಅಂತಾ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಈ ಹಿಂದೆ ಪಡೆಯಲಾಗಿದ್ದ 470 ಎಕರೆ ಭೂಮಿಗೆ ಆಗ 26 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಅದಾಗಿ ದಶಕದ ಮೇಲಾಯ್ತು. ಇಷ್ಟು ವರ್ಷದ ಮೇಲೆ ಈ ಭೂಮಿಗಳಿಗೆ ದರವೇ ಏರೋದಿಲ್ಲವಾ? ಅನ್ನೋದು ರೈತರ ಪ್ರಶ್ನೆ. ಇನ್ನು ಈ ಭೂಮಿಗೆ 2009ರಲ್ಲಿಯೇ ಸರ್ಕಾರದ ಅಧಿಸೂಚನೆ ಆಗಿತ್ತು. ಆದರೆ ಇಷ್ಟು ತಡವಾಗಿ ಈಗ ಅದೇ ಹಳೇ ಬೆಲೆಗೆ ಭೂಮಿ ತಗೋತಾ ಇದಾರೆ.

ಈ ಬಗ್ಗೆ ರೈತರು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಮನವಿ ಸಲ್ಲಿಸಿದ್ದಾರೆ. ಜೋಶಿಯವರೇ ಮಧ್ಯಪ್ರವೇಶಿಸಬೇಕು ಎನ್ನುವುದು ರೈತರ ಆಗ್ರಹ. ಇನ್ನು ಈಗಾಗಲೇ ಎರಡು ಸಲ ರೈತರೊಂದಿಗೆ ದರ ನಿಗದಿ ಸಲುವಾಗಿ ಸಭೆ ಮಾಡಿದ್ದ ಜಿಲ್ಲಾಧಿಕಾರಿ ರೈತರ ಮನವೋಲಿಸುವಲ್ಲಿ ವಿಫಲರಾಗಿದ್ದು, ಸರ್ಕಾರದ ಮಾನದಂಡಗಳ ಮೇಲೆ ನಮಗೆ ದರ ನಿಗದಿ ಮಾಡೋದಕ್ಕೆ ಬರುತ್ತದೆ. ರೈತರು ಕೇಳುತ್ತಿರೋ ಬೆಲೆ ನೀಡುವ ಅಧಿಕಾರ ನಮ್ಮ ಬಳಿ ಇಲ್ಲ. ಇದನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸ್ತೀವಿ ಅಂತಿದ್ದಾರೆ.

ಒಟ್ಟಾರೆಯಾಗಿ ಈಗ ಹಳೇ ಅಧಿಸೂಚನೆ ಇಟ್ಟುಕೊಂಡು ಸ್ವಾಧೀನಪಡಿಸಿಕೊಳ್ಳುತ್ತಿರೋದರ ಜೊತೆಗೆ ಹಳೆ ಬೆಲೆಯಲ್ಲಿಯೇ ರೈತರ ಜಮೀನು ಹೊಡೆಯೋಕೆ ಸರ್ಕಾರ ಮುಂದಾಗಿದೆ ಅನ್ನೋ ಆಕ್ರೋಶ ಕೇಳಿ ಬರುತ್ತಿದ್ದು, ಮುಂದೇನಾಗುತ್ತದೆಯೋ ಅನ್ನೋದನ್ನು ಕಾದು ನೋಡಬೇಕಿದೆ. (ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ)