ಧಾರವಾಡ ಸರ್ಕಾರಿ ಹುದ್ದೆಗಳ ಭರ್ತಿ: ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಭೇಟಿಗೆ ಅವಕಾಶ ನೀಡಿ ಹೈಕೋರ್ಟ್​ ಆದೇಶ

ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪರಿಗಣಿಸಿದೆ. ಸಿಎಂ ಭೇಟಿಯಾಗಿ ಮನವಿ ಸಲ್ಲಿಸಲು ಹೈಕೋರ್ಟ್ ನಿರ್ದೇಶಿಸಿದ್ದು, ಸಾವಿರಾರು ನಿರುದ್ಯೋಗಿ ಯುವಕರಿಗೆ ಇದರಿಂದ ಹೊಸ ಭರವಸೆ ಮೂಡಿದೆ.

ಧಾರವಾಡ ಸರ್ಕಾರಿ ಹುದ್ದೆಗಳ ಭರ್ತಿ: ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಭೇಟಿಗೆ ಅವಕಾಶ ನೀಡಿ ಹೈಕೋರ್ಟ್​ ಆದೇಶ
ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಭೇಟಿಗೆ ಅವಕಾಶ ನೀಡಿ ಹೈ ಕೋರ್ಟ್​ ಆದೇಶ
Updated By: ಭಾವನಾ ಹೆಗಡೆ

Updated on: Dec 15, 2025 | 3:34 PM

ಧಾರವಾಡ, ಡಿಸೆಂಬರ್ 15: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಬೃಹದ್ ಪ್ರತಿಭಟನೆ ನಡೆದಿತ್ತು. ಸಾವಿರಾರು ಯುವಕನ್ನೊಳಗೊಂಡ ಧರಣಿಗೆ ಅವಕಾಶ ನೀಡದ ಪೊಲೀಸರ ಕ್ರಮ ಪ್ರಶ್ನಿಸಿದ್ದ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ, ಧಾರವಾಡ (Dharwad) ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ಇದೀಗ ಸಂಘದ ಅರ್ಜಿ ಇತ್ಯರ್ಥಗೊಂಡಿದ್ದು, ಅರ್ಜಿದಾರರ ಮನವಿ ಪರಿಗಣಿಸಲು ಹೈಕೋರ್ಟ್ ಪೀಠ ಸೂಚಿಸಿದೆ.

ಸಿಎಂಗೆ ಮನವಿ ಸಲ್ಲಿಸಲು ಹೈಕೋರ್ಟ್​ ಅಸ್ತು

ಸಿಎಂ ಭೇಟಿ ಅನುಮತಿ ಕೊಡಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ (AKSA)ಕ್ಕೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಸಿಎಂ ಭೇಟಿಗೆ ಅವಕಾಶ ಕೊಡಿಸುವಂತೆ ನ್ಯಾ.ನಾಗಪ್ರಸನ್ನ ಅವರ ಪೀಠ ನಿರ್ದೇಶನ ನೀಡಿದ್ದು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಂಪರ್ಕಿಸಲು ಅರ್ಜಿದಾರರಿಗೆ ಸೂಚನೆ ನೀಡಿದೆ.

ಖಾಲಿ ಹುದ್ದೆ ಭರ್ತಿಗಾಗಿ ಆಕಾಂಕ್ಷಿಗಳ ಹೋರಾಟ

ರಾಜ್ಯದಲ್ಲಿ ಸರ್ಕಾರಿ ನೌಕರಿಯ ಕನಸಿಟ್ಟುಕೊಂಡು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವವರು ಸಾಕಷ್ಟು ಮಂದಿಯಿದ್ದಾರೆ. ಅದರಲ್ಲಿಯೂ ಧಾರವಾಡದಲ್ಲಿಯೇ ಅಂದಾಜು 80 ಸಾವಿರ ಉದ್ಯೋಗಾಕಾಂಕ್ಷಿಗಳಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ಖಾಸಗಿ ವಿವಿಗಳು ಮತ್ತು ಕೋಚಿಂಗ್ ಸೆಂಟರ್​ಗಳಿಂದ ಕೂಡಿದ ನಗರವನ್ನರಸಿ ರಾಜ್ಯದ ಹಲವು ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಪಾಲಕರಿಂದ ದೂರವಿದ್ದು, ಪಾರ್ಟ್​ ಟೈಮ್ ಕೆಲಸ ಮಾಡಿ ತಿಂಗಳ ಖರ್ಚು ನಿಭಾಯಿಸುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಾರೆ. ಹೀಗಿರುವಾಗ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ನಡೆಯದೆ ಉದ್ಯೋಗಾಂಕ್ಷಿಗಳು ಆಕ್ರೋಶದಿಂದ ಪ್ರತಿಭಟನೆಗಿಳಿದಿದ್ದರು.

ಇದನ್ನೂ ಓದಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯ ಹೆಡ್​​ ಕ್ವಾರ್ಟಸ್​ ಆಗಿದ್ದೇಕೆ ವಿದ್ಯಾಕಾಶಿ ಧಾರವಾಡ?

ಧರಣಿಗಿಳಿದಿದ್ದ 30 ಸಾವಿರ ಯುವಕರು

ರಾಜ್ಯದಲ್ಲಿ ಒಟ್ಟು 2.84 ಲಕ್ಷ ಹುದ್ದೆಗಳು ಖಾಲಿ ಇದ್ದು, ರಾಜ್ಯ ಆರ್ಥಿಕ ಇಲಾಖೆಯಲ್ಲಿನ 9,536 ಹುದ್ದೆಗಳು ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಹುದ್ದೆಗಳು ಖಾಲಿ ಇವೆ. ಪೊಲೀಸ್ ನೇಮಕಾತಿ ಹೆಚ್ಚಿಸದ ಕಾರಣ ಹಲವಾರು ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೀಗಿರುವಾಗ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಡಿ. 1ರಂದೂ ಸಹ ಮತ್ತೊಂದು ಹೋರಾಟಕ್ಕೆ ಕರೆ ನೀಡಲಾಗಿತ್ತು. ಸುಮಾರು 30 ಸಾವಿರ ಉದ್ಯೋಗಾಕಾಂಕ್ಷಿಗಳು ಧರಣಿಗಿಳಿದಿದ್ದರು. ಆದರೆ ಈ ಹಿಂದಿನ ಇಂತಹುದ್ದೇ ಪ್ರತಿಭಟನೆಯಲ್ಲಿ ಅಹಿತಕರ ಘಟನೆಗಳಾಗಿದ್ದವೆಂದ ಪೊಲೀಸರು, ಹೋರಾಟಕ್ಕೆ ನೀಡಿರಲಿಲ್ಲ. ಪೊಲೀಸರ ಈ ಕ್ರಮ ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ್ದ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದ ಮನವಿಯನ್ನು ಧಾರವಾಡ ಹೈಕೋರ್ಟ್​ ಪೀಠ ಪರಿಗಣಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:11 pm, Mon, 15 December 25