Dharwad hit-and-run: ರಾಹುಲ್ ಗಾಂಧಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ವ್ಯಕ್ತಿ ಹಿಟ್ ಆ್ಯಂಡ್ ರನ್​ಗೆ ಬಲಿ

|

Updated on: Mar 20, 2023 | 9:54 PM

ಬೆಳಗಾವಿಯಲ್ಲಿ ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ಭಾಗವಹಿಯಾಗಿ ರಾಹಲ್ ಗಾಂಧಿ ಭಾಷಣ ಕೇಳಿ ವಾಪಸ್ ಊರಿಗೆ ಬರುತ್ತಿದ್ದ ಅಬ್ದುಲ್ ಖಾದರ್ ಹಿಟ್ ಆ್ಯಂಡ್ ರನ್​ಗೆ ಬಲಿಯಾದ ಘಟನೆ

Dharwad hit-and-run: ರಾಹುಲ್ ಗಾಂಧಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ವ್ಯಕ್ತಿ ಹಿಟ್ ಆ್ಯಂಡ್ ರನ್​ಗೆ ಬಲಿ
ರಾಹುಲ್ ಗಾಂಧಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ವ್ಯಕ್ತಿ ಹಿಟ್ ಆ್ಯಂಡ್ ರನ್​ಗೆ ಬಲಿ (ಸಾಂದರ್ಭಿಕ ಚಿತ್ರ)
Follow us on

ಧಾರವಾಡ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನಲೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ಕುಂದಾನಗರಿ ಬೆಳಗಾವಿಯಲ್ಲಿ (Belagavi) ಇಂದು (ಮಾರ್ಚ್ 20) ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ವಾಪಸ್ ಆಗುತ್ತಿದ್ದ ವೇಳೆ ಧಾರವಾಡದಲ್ಲಿ ಹಿಟ್ ಆ್ಯಂಡ್ ರನ್​ಗೆ (Hit And Run At Dharwad) ಬಲಿಯಾಗಿದ್ದಾರೆ. ಬೆಳಗಾವಿಯಿಂದ ಸಮಾವೇಶ ಮುಗಿಸಿ ವಾಪಸ್ ಆಗುತ್ತಿದ್ದ ಹಳೇ ಹುಬ್ಬಳ್ಳಿಯ ಎಸ್​.ಎಂ.ಕೃಷ್ಣ ನಗರದ ನಿವಾಸಿ ಅಬ್ದುಲ್ ಖಾದರ್ (70) ಎಂಬವರು ಧಾರವಾಡ ಜಿಲ್ಲೆ ತೇಗೂರ ಗ್ರಾಮದ ಮುಲ್ಲಾ ಡಾಬಾ ಬಳಿ ಹಿಟ್​ ಆ್ಯಂಡ್ ರನ್​ಗೆ ಬಲಿಯಾಗಿದ್ದಾರೆ. ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಿ ರಾಹಲ್ ಗಾಂಧಿ ಭಾಷಣ ಕೇಳಿ ವಾಪಸ್ ಊರಿಗೆ ಬರುತ್ತಿದ್ದ ಅಬ್ದುಲ್ ಖಾದರ್, ಊಟ ಮಾಡಲೆಂದು ದಾಬಾ ಬಳಿ ನಿಲ್ಲಿಸಿದ್ದಾರೆ. ಊಟ ಮಾಡಿ ವಾಪಸ್ ರಸ್ತೆ ದಾಟುವ ವೇಳೆ ಬಂದ ಕಾರೊಂದು ಅಬ್ದುಲ್ ಖಾದರ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆ ನಂತರ ಕಾರು ಚಾಲಕ ಪರಾರಿಯಾಗಿದ್ದಾನೆ.

ಬೆಳಗಾವಿ ಜಿಲ್ಲೆ 18ವಿಧಾನಸಭಾ ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಈ ಬಾರಿ ಲೆಕ್ಕಾಚಾರ ಬುಡಮೇಲು ಮಾಡಲು ಇಂದು ರಾಹುಲ್ ಬೆಳಗಾವಿಗೆ ಆಗಮಿಸಿದ್ದರು. ಬೆಳಗಾವಿ ಜೊತೆ ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಚುನಾವಣಾ ರಣಕಹಳೆ ಮೊಳಗಿಸಿದೆ. ಪ್ರಜಾಧ್ವನಿ ಯಾತ್ರೆಯನ್ನೂ ಬೆಳಗಾವಿಯಿಂದಲೇ ಆರಂಭ ಮಾಡಿದ್ದ ಕಾಂಗ್ರೆಸ್, ಇದೀಗ ರಾಹುಲ್ ಕಾರ್ಯಕ್ರಮವನ್ನೂ ಕುಂದಾನಗರಿಯಿಂದಲೇ ಮಾಡುವುದರ ಮೂಲಕ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ತಂತ್ರ ಹೆಣೆದಿದೆ.

ಇದನ್ನೂ ಓದಿ: Yuvakranti Convention: ಸಿದ್ದರಾಮಯ್ಯ ಭಾಷಣ ಮಾಡಲು ಬಂದಾಗ ಕಿವಿಗಡಚಿಕ್ಕುವಂತೆ ಕರತಾಡನ, ರಾಹುಲ್ ಖುಷ್ ಹುವಾ!?

ಈಗಾಗಲೇ ಮಹಿಳೆಯರಿಗೆ ಎರಡು ಸಾವಿರ ರೂ, ಉಚಿತ ಅಕ್ಕಿ ಮತ್ತು ವಿದ್ಯುತ್ ಗ್ಯಾರಂಟಿ ನೀಡಿರುವ ಕಾಂಗ್ರೆಸ್, ಇಂದು ರಾಹುಲ್ ಗಾಂಧಿ ಮೂಲಕ ಭರ್ಜರಿ ಭರವಸೆ ನೀಡಿದೆ. ಸಮಾವೇಶದಲ್ಲಿ ಭಾಷಣ ಮಾಡಿದ ರಾಹುಲ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷದ ಅವಧಿವರೆಗೆ ಮಾಸಿಕ ರೂ. 3,000, ಮತ್ತು ಡಿಪ್ಲೊಮಾ ವ್ಯಾಸಂಗ ಮಾಡಿದರೆ ರೂ. 1,500 ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿದ್ದಾರೆ. ಅಧಿಕಾರಕ್ಕೆ ಬಂದ ನಂತರ 5 ವರ್ಷಗಳ ಅವಧಿಯಲ್ಲಿ 10 ಲಕ್ಷ ಯುವಕರಿಗೆ ಸರ್ಕಾರಿ ನೌಕರಿ ಒದಗಿಸುವ ಆಶ್ವಾಸನೆಯನ್ನೂ ನೀಡಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿ 10 ಕೇಜಿ ಅಕ್ಕಿ, ಗ್ರಹಲಕ್ಷ್ಮಿ ಯೋಜನೆ ಅಡಿ ಗೃಹಿಣಿಯರಿಗೆ ಮಾಸಿಕ ರೂ. 2,000 ಸಹಾಯ ಧನ ಮತ್ತು ಗೃಹಜ್ಯೋತಿ ಯೋಜನೆ ಅಡಿ ತಿಂಗಳಿಗೆ 200 ಯೂನಿಟ್ ವಿದ್ಯತ್ ಅನ್ನು ಉಚಿತವಾಗಿ ನೀಡುವ ಬಗ್ಗೆ ರಾಜ್ಯದ ನಾಯಕರು ಈಗಾಗಲೇ ಘೋಷಣೆ ಮಾಡಿದ್ದಾರೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 pm, Mon, 20 March 23