ಧಾರವಾಡ: ಜಿಲ್ಲೆಯಲ್ಲಿ ತುಪ್ಪರಿ ಹಳ್ಳ (Tuppari Halla) ಯಾವಾಗ ತುಂಬಿ ಹರಿಯುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಮಳೆ ಬಂದರೆ ಸಾಕು ಜನ, ಜಾನುವಾರು ಹಳ್ಳದಲ್ಲಿ ಸಿಕ್ಕು ನರಳುವ ಸ್ಥಿತಿಯಿದೆ. ಅವರನ್ನ ಉಳಿಸಲು ಕಾರ್ಯಾಚರಣೆಗೆ ಇಳಿದ ಎಸಿ, ಪಿಎಸ್ಐ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಿಲುಕಿ ಯಾತನೆ ಅನುಭವಿಸಿದ್ದೂ ಉಂಟು. ಅವರನ್ನೆಲ್ಲ ಜೀವಂತ ಹೊರಗೆ ತರಲು ಇರುಳಿನಲ್ಲಿ ಕೂಡ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ನೇತ್ರತ್ವದಲ್ಲಿ ಹಲವಾರು ಬಾರಿ ಕಾರ್ಯಾಚರಣೆ ನಡೆದಿವೆ. ಇದನ್ನ ಮನಗಂಡ ಸರಕಾರ ತುಪ್ಪರಿಹಳ್ಳದ ಶಾಶ್ವತ ಪರಿಹಾರಕ್ಕೆ ನಿರ್ಧರಿಸಿತ್ತು. ಆ ಐತಿಹಾಸಿಕ ಕ್ಷಣಕ್ಕೆ ರವಿವಾರ ಸಾಕ್ಷಿಯಾಗಲಿದೆ. ಹನ್ನೆರಡು ವರ್ಷಗಳ ಕಾಲ ನಡೆದ ನಿರಂತರ ಪ್ರಯತ್ನಕ್ಕೆ ಇದಿಗ ಫಲ ದೊರೆತಿದೆ. ತುಪ್ಪರಿಹಳ್ಳದ ಶಾಶ್ವತ ಪರಿಹಾರ ಕಲ್ಪಿಸೋ ಯೋಜನೆಗೆ ಮಾ. 12 ರಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ಅವರಾದಿ ಗ್ರಾಮದಿಂದ ಆರಂಭವಾಗುವ ತುಪ್ಪರಿಹಳ್ಳ ನವಲಗುಂದ ಕ್ಷೇತ್ರದಲ್ಲಿ ಬರುತ್ತಿದ್ದ ಹಾಗೇ ಹಲವು ಸಮಸ್ಯೆಗಳನ್ನ ಉಂಟು ಮಾಡುತ್ತಿತ್ತು. ಇದೇ ಕಾರಣದಿಂದ ಹಲವರು ಪ್ರಾಣವನ್ನ ಕಳೆದುಕೊಂಡಿದ್ದಾರೆ. ಜಾನುವಾರುಗಳು ನೀರು ಪಾಲಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಯೂ ನಾಶವಾಗುತ್ತ ಬಂದಿದ್ದು, ಸ್ವತಃ ನವಲಗುಂದ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಜನರ ಪ್ರಾಣ ಉಳಿಸಲು ಹಲವು ಬಾರಿ ಹಳ್ಳದ ದಡದಲ್ಲಿಯೇ ರಾತ್ರಿ ಕಳೆಯುವಂತಾಗಿದೆ.
ಇದನ್ನೂ ಓದಿ: ಗ್ರೀನ್ ಕ್ಯಾಂಪಸ್ ಹೊಂದಿರುವ ಧಾರವಾಡ ಐಐಟಿ; ಮೋದಿ ಭೇಟಿ ನೀಡಲಿರುವ ಈ ಕ್ಯಾಂಪಸ್ ಸ್ಪೆಷಾಲಿಟಿ ಏನು ಗೊತ್ತಾ?
ತುಪ್ಪರಿಹಳ್ಳದ ಸಮಸ್ಯೆ ಅರಿತಿದ್ದ ಶಂಕರ ಪಾಟೀಲ ಮುನೇನಕೊಪ್ಪ, 2010 ರಲ್ಲಿ ಈ ಹಳ್ಳವನ್ನ ಜಲಸಂಪನ್ಮೂಲ ಇಲಾಖೆಗೆ ಸೇರುವಂತೆ ಮಾಡಿದರು. ಇದೀಗ ತುಪ್ಪರಿಹಳ್ಳದ ಶಾಶ್ವತ ಪರಿಹಾರದ ಕಾಮಗಾರಿ ಆರಂಭಕ್ಕೆ ಸ್ವತಃ ಪ್ರಧಾನಿ ಚಾಲನೆ ನೀಡುತ್ತಿದ್ದಾರೆ. ಈ ಕಾಮಗಾರಿಗೆ 150 ಕೋಟಿ ರೂಪಾಯಿ ವೆಚ್ಚ ತಗುಲುತ್ತದೆ. ಈ ಯೋಜನೆ ಜಾರಿಗೆ ಬರುತ್ತಿರುವುದು ಇದೀಗ ಜಿಲ್ಲೆಯ ಜನರಿಗೆ ಖುಷಿ ತಂದಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Sat, 11 March 23