ಧಾರವಾಡ, ಆಗಸ್ಟ್ 21: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿ ಮಾನವೀಯತೆ ಮೆರೆದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ. ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಮಾರುಕಟ್ಟೆಯಿಂದ ಮನೆ ಕಡೆಗೆ ವಾಪಸ್ ಆಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ (Accident) ನಗರದ ಸಂಗೊಳ್ಳಿ ರಾಯಣ್ಣ ಬಡಾವಣೆಯ ನಿವಾಸಿ ಚೆನ್ನಬಸಪ್ಪ ಶಿವಪ್ಪ ಹುಲ್ಲಲ್ಲಿ (35) ಸಾವನ್ನಪ್ಪಿದ್ದರು. ಇವರ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.
ಟಾಟಾ ಮಾರ್ಕೋಪೋಲ್ ಕಂಪನಿಯ ಉದ್ಯೋಗಿಯಾಗಿದ್ದ ಮೂಲತಃ ಲಕ್ಷ್ಮೇಶ್ವರದ ನಿವಾಸಿ ಚೆನ್ನಬಸಪ್ಪ ಶಿವಪ್ಪ ಹುಲ್ಲಲ್ಲಿ ತನ್ನ ಇಬ್ಬರು ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಮಾರುಕಟ್ಟೆಯಿಂದ ಮನೆ ಕಡೆಗೆ ಹೋಗುತ್ತಿದ್ದರು. ಈ ವೇಳೆ ತೇಜಸ್ವಿ ನಗರ ಬಡಾವಣೆ ಬಳಿ ಮುಂಭಾಗದಿಂದ ವೇಗವಾಗಿ ಬಂದ ಬೈಕ್ ಸವಾರ ಚೆನ್ನಬಸಪ್ಪ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಚೆನ್ನಬಸಪ್ಪ ಮತ್ತು ಇವರ ಮಕ್ಕಳಾದ ಅಥರ್ವ (7), ಅಪೂರ್ವ (4) ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು: ಶಾಸಕ ಶಿವಲಿಂಗೇಗೌಡ ಆಪ್ತನ ಕಾರು, ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು
ಕೂಡಲೇ ಗಾಯಾಳುಗಳನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೆನ್ನಬಸಪ್ಪ ಮೃತಪಟ್ಟಿದ್ದಾರೆ. ಘಟನೆಯಿಂದ ಕುಟುಂಬಸ್ಥರು ಅತೀವ ದುಃಖದಲ್ಲಿದ್ದರೂ ಚೆನ್ನಬಸಪ್ಪ ಅವರ ಆಸೆಯಂತೆ ಕಣ್ಣು ದಾನ ಮಾಡಲು ನಿರ್ಧರಿಸಿದರು. ಕೂಡಲೇ ಎಸ್‌ಡಿಎಂ ಆಸ್ಪತ್ರೆಗೆ ಕಣ್ಣು ದಾನದ ಕುರಿತು ಮಾಹಿತಿ ನೀಡಿದ್ದಾರೆ.
ಕುಟುಂಬಸ್ಥರು ಕೋರಿಕೆ ಮೇರೆಗೆ ಎಸ್‌ಡಿಎಂ ಆಸ್ಪತ್ರೆ ವೈದ್ಯರು ಚೆನ್ನಬಸಪ್ಪ ಅವರ ಕಣ್ಣುಗಳನ್ನು ಪಡೆದಿದ್ದಾರೆ. ಇಂತಹ ನೋವಿನ ಸಮಯದಲ್ಲಿಯೂ ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬಸ್ಥರ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Mon, 21 August 23