ಕಾಂಗ್ರೆಸ್ ಸರಕಾರದ ಉಚಿತ ವಿದ್ಯುತ್ ಗ್ಯಾರಂಟಿ ಯೋಜನೆಯಾದ ‘ಗೃಹ ಜ್ಯೋತಿ’ ಜಾರಿಯಾದರೆ ರಾಜ್ಯದಲ್ಲಿ ವಿದ್ಯುತ್ ಬಳಕೆ (Electricity) ಹೆಚ್ಚಾಗಲಿದೆ ಎನ್ನಲಾಗಿತ್ತು. ಆದರೆ ಹೆಸ್ಕಾಮ್ ವ್ಯಾಪ್ತಿಯಲ್ಲಿ ಇದು ಸುಳ್ಳಾಗಿ ಪರಿಣಮಿಸಿದೆ. ಈ ಯೋಜನೆ (Gruha Jyothi) ಆರಂಭವಾಗೋದಕ್ಕಿಂತ ಮುಂಚೆ ಮತ್ತು ಆರಂಭವಾದ ಬಳಿಕ ಕಂಡು ಬಂದ ಬೇಡಿಕೆ ನೋಡಿದರೆ ಅಚ್ಚರಿಯ ಅಂಕಿ-ಅಂಶಗಳು ಬಯಲಿಗೆ ಬಂದಿವೆ. ಏನದು? ಇಲ್ಲಿದೆ ನೋಡಿ.
ಉಚಿತ ವಿದ್ಯುತ್ ನೀಡಿದರೆ ದುರುಪಯೋಗ ಹೆಚ್ಚಾಗುತ್ತದೆ ಅನ್ನೋ ಆರೋಪ ಇಟ್ಟುಕೊಂಟು ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಭರವಸೆ ವಿರುದ್ಧ ಬಿಜೆಪಿ ಹರಿಹಾಯ್ದಿತ್ತು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು, 200 ಯೂನಿಟ್ ಉಚಿತ ವಿದ್ಯುತ್ ನೀಡೋ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆ ಜಾರಿಯಾದರೆ ವಿದ್ಯುತ್‌ನ್ನು ಬೇಕಾಬಿಟ್ಟಿ ಬಳಸುತ್ತಾರೆ, ಇದು ಸರಕಾರಕ್ಕೆ ಹೊರೆಯಾಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ಆದರೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (Hubli Electricity Supply Company -HESCOM) ವ್ಯಾಪ್ತಿಯ ಎಂಟು ಜಿಲ್ಲೆಗಳ ಗ್ರಾಹಕರು ವಿದ್ಯುತ್ ಬಳಕೆಯಲ್ಲಿ ಮಿತವ್ಯಯ ಸಾಧಿಸುವ ಮೂಲಕ ಇದನ್ನು ಸುಳ್ಳು ಮಾಡಿದ್ದಾರೆ. ಹೌದು, ಗೃಹ ಜ್ಯೋತಿ ಯೋಜನೆ ಜಾರಿಗೆ ಮುನ್ನ ಮತ್ತು ತದನಂತರದಲ್ಲಿನ ವಿದ್ಯುತ್ ಬಳಕೆಯ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ನಿರೀಕ್ಷೆಗೂ ಮೀರಿ ಕಡಿಮೆ ವಿದ್ಯುತ್ ಬಳಸುವ ಮೂಲಕ ಗ್ರಾಹಕರು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ ಎಂದು ಮಹಮ್ಮದ್ ರೋಷನ್, ಎಂ.ಡಿ, ಹೆಸ್ಕಾಂ ತಿಳಿಸಿದ್ದಾರೆ.
2023ರ ಆಗಸ್ಟ್‌ನಲ್ಲಿ ಗೃಹ ಜ್ಯೋತಿ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿ 202 ದಶಲಕ್ಷ ಯೂನಿಟ್ ಬಳಕೆಯಾಗಿದ್ದರೆ, ಅಕ್ಟೋಬರ್ ತಿಂಗಳಲ್ಲಿ 161.88 ದಶಲಕ್ಷ ಯೂನಿಟ್ ವಿದ್ಯುತ್‌ನ್ನು ಗ್ರಾಹಕರು ಉಪಯೋಗಿಸಿದ್ದಾರೆ. ಆಗಸ್ಟ್‌ನಲ್ಲಿ 152.36 ದಶಲಕ್ಷ ಯೂನಿಟ್, ಸೆಪ್ಟೆಂಬರ್‌ನಲ್ಲಿ 168.51 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿರುವ ಬಗ್ಗೆ ಹೆಸ್ಕಾಂ ಮಾಹಿತಿ ಒದಗಿಸಿದೆ.
ಸರಕಾರ ಉಚಿತ ವಿದ್ಯುತ್ ಕೊಡುತ್ತಿದೆ ಎಂಬ ಕಾರಣಕ್ಕೆ ಗ್ರಾಹಕರು ಅನಗತ್ಯವಾಗಿ ಬಳಕೆ ಮಾಡದೇ ಅವಶ್ಯಕತೆಗೆ ತಕ್ಕಂತೆ ಉಪಯೋಗಿಸುವ ಮೂಲಕ ಜವಾಬ್ದಾರಿ ಮೆರೆದಿದ್ದಾರೆ. ತಿಂಗಳಿಂದ ತಿಂಗಳಿಗೆ ವಿದ್ಯುತ್ ಬಳಕೆ ಕಡಿಮೆಯಾಗುತ್ತಿರುವುದು ಕೂಡ ಗಮನಾರ್ಹ ಸಂಗತಿ. ಇದಲ್ಲದೇ ವಿದ್ಯುತ್ ಬಿಲ್‌ನಲ್ಲಿಯೂ ಸಹ ಗಣನೀಯವಾಗಿ ಇಳಿಕೆಯಾಗಿದೆ. ಜೂನ್ ತಿಂಗಳಲ್ಲಿ ರೂ. 248.23, ಜುಲೈ ತಿಂಗಳಲ್ಲಿ ರೂ. 175.16, ಆಗಸ್ಟ್‌ನಲ್ಲಿ ರೂ. 159 ಕೋಟಿ, ಸಪ್ಟೆಂಬರ್‌ನಲ್ಲಿ ರೂ. 162.32 ಕೋಟಿ ಹಾಗೂ ಅಕ್ಟೋಬರ್‌ನಲ್ಲಿ ರೂ. 153 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ಹೆಚ್ಚೆಚ್ಚು ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತದೆ ಎಂಬುದು ಸಾರ್ವತ್ರಿಕ ನಂಬಿಕೆ. ಆದರೆ ಹೇಳಿಕೊಳ್ಳುವಷ್ಟು ಅತ್ಯಧಿಕ ಪ್ರಮಾಣದ ಯೂನಿಟ್ ಬಳಕೆಯಾಗಿಲ್ಲ ಎಂಬುದು ಕಂಡು ಬಂದಿದೆ. ನವೆಂಬರ್ 12, 13 ಮತ್ತು 14 ಈ ಮೂರು ದಿನಗಳವರೆಗಿನ ದೀಪಾವಳಿ ಹಬ್ಬದಲ್ಲಿ ಸರಾಸರಿ 45.44 ದಶಲಕ್ಷ ಯೂನಿಟ್ ಬಳಕೆಯಾಗಿದ್ದರೆ, ಇದರ ಹಿಂದಿನ ಮೂರು ದಿನ ಅಂದರೆ ನವೆಂಬರ್ 9, 10, 11ರಂದು ಸರಾಸರಿ 44.33 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಒಟ್ಟಿನಲ್ಲಿ ಹೆಸ್ಕಾಂ ವ್ಯಾಪ್ತಿಯಲ್ಲಿ ಕಂಡುಬಂದ ಈ ಅಂಕಿ-ಅಂಶಗಳು ರಾಜ್ಯ ಸರಕಾರದ ವಿರುದ್ದ ನಿರಂತರವಾಗಿ ಆರೋಪ ಮಾಡುತ್ತಾ ಬಂದಿದ್ದ ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿದ್ದು ಮಾತ್ರ ಸತ್ಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ