ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಧಾರವಾಡ ರೈತರಿಗೆ ಈ ಬಾರಿಯೂ ನಿರಾಸೆ

| Updated By: ಸುಷ್ಮಾ ಚಕ್ರೆ

Updated on: Oct 07, 2021 | 7:07 AM

ಒಂದು ಬೆಳೆಯಲ್ಲಿ ಆಗಿದ್ದ ಹಾನಿಯನ್ನು ಮತ್ತೊಂದು ಬೆಳೆಯಲ್ಲಾದರೂ ತುಂಬಿಕೊಳ್ಳುವ ಲೆಕ್ಕಾಚಾರ ಹಾಕಿದ್ದರು. ಆದರೆ ಧಾರಾಕಾರ ಮಳೆಯಿಂದ ಈ ಕನಸು ಕೈಗೂಡಿಲ್ಲ.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಧಾರವಾಡ ರೈತರಿಗೆ ಈ ಬಾರಿಯೂ ನಿರಾಸೆ
ಮಳೆಯಿಂದಾಗಿ ಧಾರವಾಡ ರೈತರು ಬೆಳೆದಿದ್ದ ಜೋಳದ ಬೆಳೆ ಹಾಳಾಗಿದೆ.
Follow us on

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಧಾರವಾಡದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಎರಡು ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದರೆ, ಕಳೆದ ವರ್ಷ ಕೊರೊನಾ ಹಾವಳಿಯಿಂದ ನಷ್ಟ ಅನುಭವಿಸಿದ್ದರು. ಈ ವರ್ಷವೂ ರೈತರ ಸಂಕಷ್ಟದ ಪರ್ವ ಮುಂದುವರೆದಿದೆ. ಈ ಬಾರಿ ರೈತರು ಒಂದು ಬೆಳೆಯಲ್ಲಿ ಆಗಿದ್ದ ಹಾನಿಯನ್ನು ಮತ್ತೊಂದು ಬೆಳೆಯಲ್ಲಾದರೂ ತುಂಬಿಕೊಳ್ಳುವ ಲೆಕ್ಕಾಚಾರ ಹಾಕಿದ್ದರು. ಮುಂಗಾರಿನಲ್ಲಿ ಕೈಕೊಟ್ಟಿದ್ದ ಬೆಳೆ ತೆಗೆದು ಶೀಘ್ರವಾಗಿ ಕೈಗೆ ಸಿಗಬಲ್ಲ ಮತ್ತೊಂದು ಬೆಳೆ ಬೆಳೆದಿದ್ದರು. ರೈತರ ಲೆಕ್ಕಾಚಾರದಂತೆ ಬೆಳೆಯೇನೋ ಚೆನ್ನಾಗಿಯೇ ಬಂದಿತ್ತು. ಇನ್ನೇನು ಹಾಕಿದ್ದ ಶ್ರಮಕ್ಕೆ ಫಲ ಬರೋ ಸಮಯ ಬಂತು ಅನ್ನುವ ಸಮಯದಲ್ಲೇ ಧಾರಾಕಾರವಾಗಿ ಸುರಿದ ಮಳೆ ರೈತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ. ರೈತರ ಆಸೆಯ ಮೇಲೆ ಕಲ್ಲು ಎಳೆದಿದೆ.

ಮೆಣಸು ಕಿತ್ತು ಮೆಕ್ಕೆಜೋಳ ಬೆಳದಿದ್ದ ರೈತರು
ಧಾರವಾಡ ತಾಲೂಕಿನ ದುಬ್ಬನಮರಡಿ, ಶಿಂಗನಳ್ಳಿ, ಬೋಗೂರು, ಮುಗಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮೂರು ತಿಂಗಳ ಹಿಂದೆ ಮೆಕ್ಕೆಜೋಳ ನಾಟಿ ಮಾಡಿದ್ದರು. ಇದಕ್ಕೆ ಕಾರಣ ಮುಂಗಾರಿನಲ್ಲಿ ಮೆಣಸಿನಕಾಯಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಿದ್ದು. ಆರಂಭದಲ್ಲಿ ಇಲ್ಲಿನ ರೈತರು ಮೆಣಸಿನಕಾಯಿ ಬೆಳೆದಿದ್ದರು. ಕೊರೊನಾ ಎರಡನೇ ಅಲೆಯಿಂದಾಗಿ ಲಾಕ್​ಡೌನ್ ಘೋಷಣೆಯಾಗಿ ಮಾರುಕಟ್ಟೆ ಸಮಸ್ಯೆ ಆಗಿಹೋಗಿತ್ತು. ಇದರಿಂದಾಗಿ ಮೆಣಸಿನಕಾಯಿ ಕೈಗೆ ಬಂದರೂ ಮಾರುಕಟ್ಟೆ ಲಭ್ಯತೆ ಇಲ್ಲದೇ ರೈತರು ನಷ್ಟ ಅನುಭವಿಸಿದ್ದರು. ಹೀಗಾಗಿ ಆಗಲೇ ಮೆಣಸಿನಕಾಯಿ ಬೆಳೆಯನ್ನೆಲ್ಲ ಕಿತ್ತು ಹಾಕಿ, ಮೂರು ತಿಂಗಳಿಗೆ ಕೈಗೆ ಬರುವ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಮೆಕ್ಕೆಜೋಳ ಬೆಳೆದರೆ ಜಾನುವಾರುಗಳಿಗೆ ಮೇವು ಕೂಡ ಆಗಬಲ್ಲದು ಅನ್ನೋದು ರೈತರ ಲೆಕ್ಕಾಚಾರವಾಗಿತ್ತು. ಎಕರೆಗೆ ಸುಮಾರು 20 ಸಾವಿರ ರೂಪಾಯಿ ಖರ್ಚು ಮಾಡಿರುವ ರೈತರು, ಚೆನ್ನಾಗಿ ತೆನೆ ಕಟ್ಟಿದರೆ ಎಕರೆಗೆ 50 ಸಾವಿರ ರೂಪಾಯಿ ಆದಾಯ ಪಡೆಯಬಹುದಿತ್ತು. ಜೊತೆಗೆ ತಮ್ಮ ಜಾನುವಾರುಗಳಿಗೆ ಹಸಿ ಮೇವಿನ ಜೊತೆಗೆ ಒಣಗಿಸಿದ ದಂಟಿನಿಂದ ಮೇವು ಸಂಗ್ರಹ ಮಾಡಿಟ್ಟುಕೊಳ್ಳಬಹುದಿತ್ತು. ಆದರೆ ಈ ಗ್ರಾಮಗಳ ಸುತ್ತಮುತ್ತ ಸುರಿದ ಮಳೆಯಿಂದಾಗಿ ಇದೀಗ ಎಲ್ಲ ಬೆಳೆ ನಾಶವಾಗಿ ಹೋಗಿದೆ.

ನೆಲಕ್ಕೆ ಉರುಳಿದ ಮೆಕ್ಕೆಜೋಳ ಬೆಳೆ; ಕಂಗಾಲಾದ ರೈತ ಸಮೂಹ
ಕಳೆದ ಮೂರು ದಿನಗಳಿಂದ ಈ ಗ್ರಾಮಗಳ ಸುತ್ತಮುತ್ತ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ಬೀಸುತ್ತಿರುವ ಗಾಳಿಯಿಂದಾಗಿ ಮೆಕ್ಕೆಜೋಳದ ಬೆಳೆ ನೆಲಕ್ಕೆ ಉರುಳಿದೆ. ಮೆಣಸಿನಕಾಯಿ ಬೆಳೆಯ ನಷ್ಟವನ್ನು ಮೆಕ್ಕೆಜೋಳದಲ್ಲಾದರೂ ತುಂಬಿಕೊಳ್ಳಬಹುದು ಅಂದುಕೊಂಡಿದ್ದ ರೈತರ ಆಸೆ ನುಚ್ಚುನೂರಾಗಿದೆ. ಮಳೆ ಹಾಗೂ ಗಾಳಿಯಿಂದಾಗಿ ಇಷ್ಟೆತ್ತರಕ್ಕೆ ಬೆಳೆದು ನಿಂತಿದ್ದ ಮೆಕ್ಕೆಜೋಳದ ಬೆಳೆ ನೆಲಕ್ಕುರುಳಿದೆ. ಗದ್ದೆಯಲ್ಲಿ ಕೆಸರು ಇರುವ ಕಾರಣಕ್ಕೆ ಕೆಳಗೆ ಬೀಳುವ ಮೆಕ್ಕೆಜೋಳವೆಲ್ಲವೂ ಅಲ್ಲಿಯೇ ಕೊಳೆಯುತ್ತಿದೆ. ಹೀಗಾಗಿ ಈ ಬಾರಿಯೂ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಹಾಳಾಗಿರುವ ಜೋಳದ ಬೆಳೆ

ಚೆನ್ನಾಗಿ ಬಂದಿದ್ದ ಬೆಳೆ ನೆಲದ ಪಾಲು
ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಮೆಕ್ಕೆಜೋಳ ಬೆಳೆದಿದ್ದರು. ಮೂರು ತಿಂಗಳ ಅವಧಿಯ ಮೆಕ್ಕೆಜೋಳ ಚೆನ್ನಾಗಿಯೇ ಬೆಳೆದಿತ್ತು. ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಮೆಕ್ಕೆಜೋಳದ ಬೆಳೆ ನೋಡಿ ರೈತರು ಖುಷಿಯಾಗಿದ್ದರು. ಅದಾಗಲೇ ತೆನೆ ಕಟ್ಟಿಕೊಳ್ಳುವ ಪ್ರಕ್ರಿಯೆ ಶುರುವಾಗಿತ್ತು. ಈ ಸಮಯದಲ್ಲಿ ಬೆಳೆಗೆ ಯಾವುದೇ ತೊಂದರೆ ಎದುರಾಗದೆ ಇದ್ದರೆ ರೈತರು ಒಳ್ಳೆಯ ಲಾಭ ಪಡೆಯುತ್ತಿದ್ದರು. ಆದರೆ ಮೂರು ದಿನಗಳಿಂದ ಸುರಿದ ಗಾಳಿ-ಮಳೆಗೆ ಮೆಕ್ಕೆಜೋಳ ನೆಲಕ್ಕೆ ಒರಗಿದೆ. ಇದರಿಂದಾಗಿ ರೈತರು ಹಾಕಿದ ಬಂಡವಾಳವೆಲ್ಲವೂ ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ.

ಟೊಮೆಟೊ ಕಬ್ಬಿಗೂ ಇದೇ ಸ್ಥಿತಿ
ಈ ಪ್ರದೇಶದಲ್ಲಿ ಮಳೆಯ ಸಮಸ್ಯೆಯಿಂದ ಮೆಕ್ಕೇಜೋಳವಷ್ಟೇ ಅಲ್ಲ ಟೊಮೆಟೊ ಹಾಗೂ ಕಬ್ಬು ಬೆಳೆಗೂ ಹಾನಿಯಾಗಿದೆ. ಕಬ್ಬು ನೆಲಕ್ಕೊರಗಿದ್ದರೆ, ಟೊಮೆಟೊ ಹಣ್ಣುಗಳು ಹೊಲದಲ್ಲಿ ಉದುರಿವೆ. ಇದರಿಂದಾಗಿ ಟೊಮೆಟೊ ಹಾಗೂ ಕಬ್ಬು ಬೆಳೆದ ರೈತರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ನೆಲಕ್ಕೆ ಉದುರಿ ಬಿದ್ದಿರುವ ಟೊಮೆಟೊ ಹಣ್ಣನ್ನು ಮಾರುಕಟ್ಟೆಗೆ ತರುವ ಸ್ಥಿತಿಯಲ್ಲಿ ರೈತರು ಇಲ್ಲ. ಇದನ್ನೆಲ್ಲಾ ನೋಡುತ್ತಿದ್ದರೆ, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೀಗಾಗಿ ಪರಿಹಾರಕ್ಕಾಗಿ ರೈತರು ಸರಕಾರದತ್ತ ಮುಖ ಮಾಡಿ ಕೂಡುವಂತಾಗಿದೆ.

ನಮ್ಮ ಸಮಸ್ಯೆಯತ್ತ ಗಮನ ಹರಿಸಲಿ: ಹೈದರ್ ಅಲಿ
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಮಸ್ಯೆಗಳನ್ನು ಎದುರಿಸಿದ ಬಳಿಕ ಈ ಬಾರಿ ಉತ್ತಮ ಬೆಳೆ ಬಂದಿತ್ತು. ಕೈಗೆ ಒಂದಷ್ಟು ಹಣ ಸಿಗಬಹುದು ಅಂದುಕೊಂಡಿದ್ದೆವು. ಆದರೆ ಇದೀಗ ಆ ನಿರೀಕ್ಷೆ ಕೂಡ ಹುಸಿಯಾಗಿದೆ. ಇದೀಗ ಮಳೆಯಿಂದಾಗಿ ಬೆಳೆಯೆಲ್ಲಾ ನೆಲಕ್ಕುರುಳಿ ನಷ್ಟ ಅನುಭವಿಸುವಂತಾಗಿದೆ. ಸರ್ಕಾರವು ನಮ್ಮ ಕಡೆಗೆ ಗಮನ ಹರಿಸಿ, ಪರಿಹಾರ ನೀಡುವ ಮೂಲಕ ಬದುಕಿಗೆ ಆಸರೆ ಒದಗಿಸಬೇಕಿದೆ ಅನ್ನುತ್ತಾರೆ ಸಿಂಗನಳ್ಳಿ ಗ್ರಾಮದ ರೈತ ಹೈದರ್ ಅಲಿ.

ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ