ಹುಬ್ಬಳ್ಳಿ: ಹುಬ್ಬಳ್ಳಿಯಿಂದ ದೆಹಲಿಗೆ ಇಂಡಿಗೋ (IndiGo) ವಿಮಾನಯಾನ (flight) ಸೇವೆ ಇಂದಿನಿಂದ ಆರಂಭವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವರ್ಚುವಲ್ ಸಭೆಯ ಮೂಲಕ ಭಾಗಿಯಾಗಿ ಹುಬ್ಬಳ್ಳಿ-ದೆಹಲಿ ವಿಮಾನಯಾನಕ್ಕೆ ಇಂದು (ಅ.14) ಹಸಿರು ನಿಶಾನೆ ತೋರಿಸಿದರು. ಅಲ್ಲಿಗೆ ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ದೆಹಲಿ ವಿಮಾನ ಸೇವೆ ಕನಸು ನನಸಾದಂತ್ತಾಗಿದೆ. ಹುಬ್ಬಳ್ಳಿ ಮಂದಿ ನೇರವಾಗಿ ನವದೆಹಲಿ ತಲುಪುವ ಈ ವಿಮಾನಯಾನ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಹುಬ್ಬಳ್ಳಿಯಿಂದ ಪಾಲ್ಗೊಂಡಿದ್ದರು. ವಿಮಾನ ಸೇವೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು, ಈ ನೇರ ವಿಮಾನಯಾನ ಸೇವೆ ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಾಗಿತ್ತು ಎಂದು ಹೇಳಿದರು.
ಹಿಂದೆ ಹುಬ್ಬಳ್ಳಿಯಿಂದ ದೆಹಲಿಗೆ ಹೋಗಬೇಕಾದರೆ, ಮುಂಬೈ, ಹೈದರಾಬಾದ್ಗೆ ತೆರಳಿ ಹೋಗಬೇಕಾಗಿತ್ತು. ಹುಬ್ಬಳ್ಳಿಯಿಂದ ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕ ದೊರೆತಿರುವುದು ನಗರದ ಪ್ರಗತಿಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲು ಎಂದು ಪ್ರಲ್ಹಾದ್ ಜೋಶಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ @JM_Scindia ಅವರ ಜೊತೆ ವರ್ಚ್ಯುಯಲ್ ಸಭೆಯ ಮೂಲಕ ಹುಬ್ಬಳ್ಳಿ-ದೆಹಲಿ ನಡುವೆ ವಿಮಾನಯಾನ ಸೇವೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕ ಜನರ ಬಹುದಿನಗಳ ಕನಸೊಂದನ್ನು ಈಡೇರಿಸಲಾಯಿತು.@IndiGo6E#Udan pic.twitter.com/h2XrhkPWC0
— Pralhad Joshi (@JoshiPralhad) November 14, 2022
ಕೇವಲ 2 ಗಂಟೆ 30 ನಿಮಿಷದಲ್ಲಿ ಹುಬ್ಬಳ್ಳಿಯಿಂದ ದೆಹಲಿ ತಲುಪಬಹುದು
ಈ ನೇರ ವಿಮಾನದಿಂದ ಕೇವಲ 2 ಗಂಟೆ 30 ನಿಮಿಷದಲ್ಲಿ ಹುಬ್ಬಳ್ಳಿಯಿಂದ ದೆಹಲಿ ತಲುಪಬಹುದಾಗಿದೆ. ಪ್ರತಿನಿತ್ಯ ಈ ಸೇವೆ ಲಭ್ಯವಿರುವುದು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ನನ್ನ ಪ್ರಸ್ತಾವನೆಯನ್ನು ಅನುಮೋದಿಸಿ, ಸೇವೆ ಪ್ರಾರಂಭಿಸುವ ನಿರ್ಧಾರ ಕೈಗೊಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಮತ್ತು ಸೇವೆ ಒದಗಿಸುತ್ತಿರುವ ಇಂಡಿಗೋ ಸಂಸ್ಥೆಗೆ ಪ್ರಲ್ಹಾದ್ ಜೋಶಿ ಧನ್ಯವಾದ ಅರ್ಪಿಸಿದರು.
ದೆಹಲಿ ವಿಮಾನದಲ್ಲಿ ಗಂಡುಮೆಟ್ಟಿದ ನಾಡಿನ ಭಾಷಾ ಸೊಗಡು
ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಆರಂಭವಾಯಿತು ಅನ್ನೋದು ಒಂದು ವಿಶೇಷ ಆದರೆ, ಫ್ಲೈಟ್ ಅನೌನ್ಸ್‌ಮೆಂಟ್ ಸಹ ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಆಗಿದ್ದು ಇನ್ನೊಂದ ವಿಶೇಷ. ಬೈಲಹೊಂಗಲದವರಾದ ಅಕ್ಷಯ್ ಪಾಟೀಲ್ ಇವತ್ತಿನ ವಿಮಾನದ ಪೈಲೆಟ್ ಆಗಿದ್ದು, ಸ್ವಚ್ಛ ಉತ್ತರ ಕರ್ನಾಟಕ ಭಾಷೆಯಲ್ಲಿ ಎಲ್ಲಾ ಪ್ರಯಾಣಿಕರಿಗೆ ಸ್ವಾಗತ ಕೋರಿದ್ದಾರೆ. ಜೊತೆಗೆ ಹುಬ್ಬಳ್ಳಿ-ದೆಹಲಿ ವಿಮಾನಯಾನಕ್ಕೆ ಕಾರಣರಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಅಭಿನಂದಿಸಿದರು. ಉಳಿಬೇಕು ನಮ್ಮ ಭಾಷಾ ಮತ್ತ ಸಂಸ್ಕೃತಿ ಅಂದ್ರ ಪಕ್ಕಾ ಆಗೇ ಆಗ್ತೈತಿ ಪ್ರಗತಿ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:39 pm, Mon, 14 November 22