ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪಾಲಿಕೆಯಲ್ಲಿ (Hubli Dharwad Mahanagara Palike) ನಡೆಯುತ್ತಿದ್ದ ಮತ್ತೊಂದು ಕಮಿಷನ್ ದಂಧೆ ಇದೀಗ ಬೆಳಕಿಗೆ ಬಂದಿದೆ. ಆಟೊ ಟಿಪ್ಪರ್ ಚಾಲಕರಿಗೆ ಗುತ್ತಿಗೆದಾರ ವೇತನ (Contractors Demand Commission) ನೀಡದೇ ಸತಾಯಿಸುತ್ತಿದ್ದಾನೆ. ಈ ವಿಷಯ ತಿಳಿದಿದ್ದರೂ ಪಾಲಿಕೆಯ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ. ಕಮಿಷನ್ ಕೊಟ್ಟವರಿಗೆ ಮಾತ್ರ ವೇತನ ಪಾವತಿಯಾಗುತ್ತಿದೆ ಎಂದು ಚಾಲಕರು ದೂರಿದ್ದಾರೆ. ಕರ್ನಾಟಕದ 2ನೇ ಅತಿದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಕುರುಡು ದರ್ಬಾರು ನಡೆಯುತ್ತಿದೆ ಎಂದು ಸಿಬ್ಬಂದಿ ದೂರುತ್ತಿದ್ದಾರೆ.
ಪ್ರತಿ ಚಾಲಕನ ವೇತನ ಪಾವತಿಗಾಗಿ ಪಾಲಿಕೆಯು ₹ 16,050 ಹಣ ನೀಡುತ್ತದೆ. ಆದರೆ ಗುತ್ತಿಗೆದಾರರು ಚಾಲಕರಿಗೆ ₹ 12,808 ನೀಡುತ್ತಿದ್ದಾರೆ. ಈ ಮೊತ್ತದಿಂದಲೂ ಪ್ರತಿ ಚಾಲಕರು ₹ 1,500ರಿಂದ ₹ 2,000 ಕಮಿಷನ್ ನೀಡಬೇಕಿದೆ. ಕಮಿಷನ್ ಹಣ ಕಿತ್ತುಕೊಳ್ಳಲೆಂದೇ ಗುತ್ತಿಗೆದಾರರು ಸೂಪರ್ ವೈಸರ್ ನೇಮಿಸಿಕೊಂಡಿದ್ದಾರೆ. ಅವನಿಗೆ ಪ್ರತಿ ತಿಂಗಳು ಫೋನ್ ಪೇ ಮೂಲಕ ಕಮಿಷನ್ ಕೊಟ್ಟರೆ ಮಾತ್ರ ಮಾಸಿಕ ವೇತನ ಸಿಗುತ್ತದೆ ಎಂದು ಕಮಿಷನ್ ಹಣ ಪಾವತಿಸಿದ ದಾಖಲೆಯನ್ನು ಚಾಲಕರು ‘ಟಿವಿ9’ ಪ್ರತಿನಿಧಿಗೆ ತೋರಿಸಿದರು.
ಅವಳಿ ನಗರದಲ್ಲಿ ಕಸ ನಿರ್ವಹಣೆಗಾಗಿ ಒಟ್ಟು 193 ಆಟೊ ಟಿಪ್ಪರ್ಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 150 ಆಟೊ ಟಿಪ್ಪರ್ಗಳು ಹುಬ್ಬಳ್ಳಿಯಲ್ಲಿಯೇ ಇವೆ. ಆದರ್ಶ್ ಎಂಟರ್ ಪ್ರೈಸಸ್ಗೆ ಟಿಪ್ಪರ್ ಚಾಲಕರ ನಿರ್ವಹಣೆಯನ್ನು ಪಾಲಿಕೆಯು ಗುತ್ತಿಗೆ ನೀಡಿದೆ. ಇದೇ ಸಂಸ್ಥೆಯು ಚಾಲಕರನ್ನು ಶೋಷಿಸುತ್ತಿದೆ ಎಂದು ಸಿಬ್ಬಂದಿ ಆರೋಪ ಮಾಡಿದ್ದಾರೆ. ತಿಂಗಳಲ್ಲಿ ಮಧ್ಯೆ ಯಾವಾಗಲಾದರೂ ಒಂದು ದಿನ ರಜೆ ಬೇಕು ಎಂದರೂ ಗುತ್ತಿಗೆದಾರನಿಗೆ ಮಾಮೂಲಿ ಕೊಡಬೇಕಾದ ಪರಿಸ್ಥಿತಿಯಿದೆ. ಪಿಎಫ್ ಹಣವನ್ನೂ ಸರಿಯಾಗಿ ಪಾವತಿಸದೇ ಮೋಸ ಮಾಡಲಾಗುತ್ತಿದೆ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ.
ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮೇಯರ್ ಅಂಚಟಗೇರಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಚಾಲಕರು ಹೇಳಿದ್ದಾರೆ. 2019ರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಆದರ್ಶ್ ಎಂಟರ್ ಪ್ರೈಸಸ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.
Published On - 9:52 am, Tue, 20 September 22