ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ (Hubballi Dharwad Mahanagara Palike) 22 ನೇ ಅವಧಿಗೆ ಮಹಾಪೌರ ಹಾಗೂ ಉಪ ಮಹಾಪೌರ ಸ್ಥಾನಗಳಿಗೆ ಚುನಾವಣೆಯನ್ನು ಜೂನ್ 20, 2023 ರಂದು ನಿಗದಿ ಪಡಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ (ಚುನಾವಣೆ)ಯ ಅಧ್ಯಕ್ಷಾಧಿಕಾರಿಗಳೂ ಆಗಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ ಸುನೀಲಕುಮಾರ ಅವರು ತಿಳಿಸಿದ್ದಾರೆ.
ಈ ವಿಚಾರವಾಗಿ ಪ್ರಕಟಣೆ ನೀಡಿರುವ ಅವರು, ಜೂನ್ 20, 2023 ರಂದು ಮುಂಜಾನೆ 9 ರಿಂದ 11 ಗಂಟೆಯವರೆಗೆ ಧಾರವಾಡದ ಪಾಲಿಕೆಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಭಾಭವನದಲ್ಲಿ ಮಹಾಪೌರ ಹಾಗೂ ಉಪ ಮಹಾಪೌರ ಸ್ಥಾನಗಳಿಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮಧ್ಯಾಹ್ನ 1 ಗಂಟೆಗೆ ಸಭೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು 22ನೇ ಅವಧಿಯ ಚುನಾವಣೆಗೆ ಮಹಾಪೌರ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪ ಮಹಾಪೌರ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿಯನ್ನು ನಿಗದಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Dharwad Power Cut: ಧಾರವಾಡದ ಹಲವೆಡೆ ಬುಧವಾರ ವಿದ್ಯುತ್ ವ್ಯತ್ಯಯ; ಇಲ್ಲಿದೆ ವಿವರ
ಮಹಾಪೌರ ಮತ್ತು ಉಪ ಮಹಾಪೌರ ಸ್ಥಾನಕ್ಕೆ ನಡೆಯುವ ಚುನಾವಣೆ ಪ್ರಕ್ರಿಯೆಯಲ್ಲಿ ಸ್ವೀಕರಿಸಿದ ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದ ಫಲಿತಾಂಶ ಘೋಷಣೆ, ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ, ನಡುವಳಿಕೆ ಪುಸ್ತಕದಲ್ಲಿ ಸದಸ್ಯರ ಸಹಿ ದಾಖಲಿಸುವುದು, ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಸುನೀಲ ಕುಮಾರ ಅವರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ