ಹುಬ್ಬಳ್ಳಿ ಕಿಮ್ಸ್‌ನಲ್ಲಿ ರೋಗಿಗಳಿಗೆ ಓಪಿಡಿ ಸಂಕಷ್ಟ: ಚಿಕಿತ್ಸೆಗೂ ಮುನ್ನ ಚೀಟಿಗಾಗಿ ಗಂಟೆಗಟ್ಟಲೆ ಕ್ಯೂ!

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಓಪಿಡಿ ಚೀಟಿ ಪಡೆಯಲು ರೋಗಿಗಳು 2-3 ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಇದರಿಂದಾಗು, ಮುಂಜಾನೆಯೇ ಬಂದರೂ ಮಧ್ಯಾಹ್ನದವರೆಗೆ ಚೀಟಿ ಸಿಗದೆ ರೋಗಿಗಳು ಮತ್ತು ವೃದ್ಧರು ಆಸ್ಪತ್ರೆಯ ಆವರಣದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಒಂದೇ ದಿನದಲ್ಲಿ ಚಿಕಿತ್ಸೆ ಪಡೆದು ಹೋಗುವುದೂ ಕಷ್ಟವಾಗಿದೆ.

ಹುಬ್ಬಳ್ಳಿ ಕಿಮ್ಸ್‌ನಲ್ಲಿ ರೋಗಿಗಳಿಗೆ ಓಪಿಡಿ ಸಂಕಷ್ಟ: ಚಿಕಿತ್ಸೆಗೂ ಮುನ್ನ ಚೀಟಿಗಾಗಿ ಗಂಟೆಗಟ್ಟಲೆ ಕ್ಯೂ!
ಓಪಿಡಿ ಚೀಟಿ ಮಾಡಿಸಿಕೊಳ್ಳಲು ಸರದಿಯಲ್ಲಿ ಕಾಯುತ್ತಿರುವ ಜನ
Image Credit source: tv9
Edited By:

Updated on: Apr 24, 2026 | 2:25 PM

ಹುಬ್ಬಳ್ಳಿ, ಏಪ್ರಿಲ್ 24: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿಯಾಗಿರುವ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ರೋಗಿಗಳು ಭೇಟಿ ನೀಡುತ್ತಾರೆ. ಆದರೆ, ಇಲ್ಲಿ ಚಿಕಿತ್ಸೆ ಪಡೆಯುವ ಮೊದಲು ಓಪಿಡಿ (OPD) ಚೀಟಿ ಮಾಡಿಸಿಕೊಳ್ಳುವುದೇ ರೋಗಿಗಳಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ವರ್ ಸಮಸ್ಯೆಯಿಂದಾಗಿ ರೋಗಿಗಳು ಮತ್ತು ಅವರ ಕುಟುಂಬದವರು ನರಕಯಾತನೆ ಅನುಭವಿಸುವಂತಾಗಿದೆ. ಚೀಟಿ ಪಡೆಯಲು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವಂಥ ಪರಿಸ್ಥಿತಿ ಉದ್ಭವಿಸಿದೆ.

ಗಂಟೆಗಟ್ಟಲೆ ಕಾಯುವ ಅನಿವಾರ್ಯತೆ

ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪ್ರತಿನಿತ್ಯ 2,000ಕ್ಕೂ ಹೆಚ್ಚು ರೋಗಿಗಳು ಕಿಮ್ಸ್‌ಗೆ ಆಗಮಿಸುತ್ತಾರೆ. ಇಲ್ಲಿ ಚಿಕಿತ್ಸೆ ಪಡೆಯಲು ಮೊದಲು ಓಪಿಡಿ ಚೀಟಿ ಪಡೆಯಬೇಕು. ಇದಕ್ಕಾಗಿ ಆಸ್ಪತ್ರೆಯಲ್ಲಿ ಆರು ಕೌಂಟರ್‌ಗಳ ವ್ಯವಸ್ಥೆ ಇದ್ದರೂ, ಪ್ರತಿಯೊಬ್ಬ ರೋಗಿಯೂ ಕನಿಷ್ಠ ಎರಡು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಮುಂಜಾನೆ 9 ಗಂಟೆಗೆ ಕ್ಯೂ ನಿಂತರೆ, ಚೀಟಿ ಕೈ ಸೇರುವ ಹೊತ್ತಿಗೆ ಮಧ್ಯಾಹ್ನ 12 ಗಂಟೆಯಾಗಿರುತ್ತದೆ. ವೈದ್ಯರು ಊಟಕ್ಕೆ ಹೋಗುವ ಸಮಯವಾಗುವುದರಿಂದ ರೋಗಿಗಳು ಒಂದೇ ದಿನದಲ್ಲಿ ಚಿಕಿತ್ಸೆ ಪಡೆದು ಹಿಂತಿರುಗುವುದು ಅಸಾಧ್ಯವಾಗಿದೆ.

ಸರ್ವರ್ ಸಮಸ್ಯೆಯೇ ವಿಳಂಬಕ್ಕೆ ಕಾರಣ

ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಮಾಹಿತಿ ಸಂಗ್ರಹಿಸಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಕಳೆದ ಎರಡು ತಿಂಗಳಿನಿಂದ ಸರ್ವರ್ ಸಮಸ್ಯೆ ಪದೇ ಪದೇ ಕಾಡುತ್ತಿದೆ. ಆನ್‌ಲೈನ್‌ನಲ್ಲಿ ಒಬ್ಬರ ಹೆಸರನ್ನು ಎಂಟ್ರಿ ಮಾಡಲು ಸುಮಾರು 5 ರಿಂದ 10 ನಿಮಿಷಗಳು ತಗಲುತ್ತಿವೆ. ಇದರಿಂದಾಗಿ ಸರದಿ ಸಾಲು ಕಿಲೋಮೀಟರ್‌ಗಟ್ಟಲೆ ಬೆಳೆಯುತ್ತಿದೆ. ವೃದ್ಧರು, ಮಹಿಳೆಯರು ಮತ್ತು ಪುಟ್ಟ ಮಕ್ಕಳನ್ನು ಕರೆತಂದ ಪೋಷಕರು ಕ್ಯೂನಲ್ಲಿ ನಿಂತು ನಿಂತು ಸುಸ್ತಾಗಿ ನೆಲದ ಮೇಲೆಯೇ ಕುಳಿತುಕೊಳ್ಳುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿದೆ.

ವೃದ್ಧರ ಪಾಡು ದೇವರಿಗೇ ಪ್ರೀತಿ

ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಕೌಂಟರ್ ಇದ್ದರೂ ಸಹ, ಅಲ್ಲಿ ಎಲ್ಲಾ ವಯೋಮಾನದವರು ಸಾಲಿನಲ್ಲಿ ನಿಲ್ಲುತ್ತಿರುವುದು ವೃದ್ಧರ ಆಕ್ರೋಶಕ್ಕೆ ಕಾರಣವಾಗಿದೆ. ಬಿಲ್ ಪಾವತಿ ಮತ್ತು ವಿವಿಧ ತಪಾಸಣಾ ವರದಿಗಳನ್ನು ಪಡೆಯುವ ಕೌಂಟರ್‌ಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಮ್ಸ್ ನಿರ್ದೇಶಕ ಡಾ. ಈಶ್ವರ್ ಹೊಸಮನಿ, ‘ಕೆಲವೊಮ್ಮೆ ಸರ್ವರ್ ಡೌನ್ ಆಗುತ್ತಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸರ್ವರ್ ಸುಧಾರಣೆಗೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೊಬೈಲ್ ಕೊಡದಿದ್ದಕ್ಕೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆ: ಪೊಲೀಸ್ ಕಮಿಷನರ್ ಹೇಳಿದ್ದೇನು ನೋಡಿ

ಆದರೆ, ಕೇವಲ ಭರವಸೆ ನೀಡಿದರೆ ಸಾಲದು, ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯುವ ಮೂಲಕ ಮತ್ತು ತಾಂತ್ರಿಕ ದೋಷಗಳನ್ನು ಶೀಘ್ರವಾಗಿ ಸರಿಪಡಿಸುವ ಮೂಲಕ ಬಡ ರೋಗಿಗಳ ಪರದಾಟಕ್ಕೆ ಕಿಮ್ಸ್ ಆಡಳಿತ ಮಂಡಳಿ ಮುಕ್ತಿ ನೀಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us