ಹುಬ್ಬಳ್ಳಿ-ಧಾರವಾಡ: ಅವಳಿನಗರದಲ್ಲಿ (Hubli-Dharwad) ನಡೆಯುತ್ತಿರುವ 26 ರಾಷ್ಟ್ರೀಯ ಯುವಜನೋತ್ಸವಕ್ಕೆ (National Youth Fest) ಅವಳಿ ನಗರದ ಆಡಳಿತ ವ್ಯವಸ್ಥೆ, ಸಂಘ-ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಸೇವೆ, ಪ್ರಾಯೋಜಕತ್ವ, ದೇಣಿಗೆ, ಪರಿಕರಗಳನ್ನು ನೀಡಿ ವೈಭವದ ಸಂಭ್ರಮೋಲ್ಲಾಸದಲ್ಲಿ ಭಾಗಿಯಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 12 ರಂದು ರಾಷ್ಟ್ರೀಯ ಯುವ ಜನೋತ್ಸವವನ್ನು ಉದ್ಘಾಟಿಸಲಿದ್ದು, ಈ ವೈಭವದ ಸಮಾರಂಭದ ಯಶಸ್ಸಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬಹುತೇಕ ಸಂಸ್ಥೆಗಳು ಒಂದೊಂದು ರೀತಿಯಲ್ಲಿ ನೆರವಾಗುತ್ತಿವೆ. ಜನರ ಸಹಭಾಗಿತ್ವ (ಜನ್ ಭಾಗೀದಾರ್) ಕುರಿತ ಪ್ರಧಾನಮಂತ್ರಿಯವರ ಆಶಯವನ್ನು ಇಲ್ಲಿ ಸಾಕಾರಗೊಳಿಸುತ್ತಿದ್ದಾರೆ.
ಪ್ರತಿನಿಧಿಗಳು ಯುವ ಜನೋತ್ಸವವನ್ನು ಕಣ್ತುಂಬಿಕೊಳ್ಳಲು ಜಿಲ್ಲಾಡಳಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಈ ಸಾರಿಗೆ ಬಸ್ ಹಾಗೂ ಜಿಲ್ಲಾಡಳಿತದ ಆಯ್ದ ವಾಹನಗಳಿಗೆ ಭಾರತೀಯ ತೈಲ ನಿಗಮ ಉಚಿತವಾಗಿ ಡೀಸೆಲ್ ಪೂರೈಸುತ್ತಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಶೇಷತೆ, ರಾಷ್ಟ್ರದ ವೈವಿಧ್ಯತೆ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಮೂಲಕ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಮಹತ್ಕಾರ್ಯಕ್ಕೆ ಕೈ ಜೋಡಿಸಿದೆ.
ಇದನ್ನೂ ಓದಿ: ನವನಗರದ ಕಿಮ್ಸ್ ಥೆರಪಿ ಸಂಶೋಧನಾ ಕೇಂದ್ರ ಸರ್ಕಾರದ ಒಂದು ಭಾಗ ಎಂದು ಆದೇಶ ಹೊರಡಸುತ್ತೇನೆ: ಸಿಎಂ ಬೊಮ್ಮಾಯಿ
ಧಾರವಾಡ ಎಂದಾಕ್ಷಣ ಪೇಡ ನೆನಪಿಗೆ ಬರುವುದು ಸಹಜ. ಬಾಯಲ್ಲಿ ನೀರೂರಿಸುವ, ಒಮ್ಮೆ ಸವಿದರೆ ಜೀವನಪರ್ಯಂತ ನೆನಪಿನಲ್ಲಿ ಉಳಿಯುವ ಪೇಡ ನೀಡುವ ಮೂಲಕ ರಾಷ್ಟ್ರೀಯ ಉತ್ಸವವನ್ನು ಸ್ಮರಣೀಯವಾಗಿಸಲು ಮುಂದಾಗಿದೆ ಧಾರವಾಡ ಮಿಶ್ರ ಪೇಡ ಸಂಸ್ಥೆ, ದೇಶದ ಎಲ್ಲ ಭಾಗಗಳಿಂದ ಆಗಮಿಸುತ್ತಿರುವ ಎಲ್ಲಾ 7500 ಪ್ರತಿನಿಧಿಗಳಿಗೆ ಉಚಿತವಾಗಿ ಮಿಶ್ರ ಪೇಡ ವಿತರಿಸಲು ಸಜ್ಜಾಗಿದೆ. ಈಗಾಗಲೇ ಬಹುತೇಕ ಪ್ಯಾಕಿಂಗ್ ಪೂರ್ಣಗೊಳಿಸಿದ್ದು, ಪೇಡದ ಸ್ವಾದ ಮತ್ತು ಘಮಲನ್ನು ದೇಶಾದ್ಯಂತ ಪಸರಿಸಲು ಮುಂದಾಗಿದೆ.
ಯುವ ಜನೋತ್ಸವ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದು, ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಪ್ರತಿನಿಧಿಗಳಿಗೆ ಕುಡಿಯುವ ನೀರಿನ ಬಾಟೆಲ್ಗಳನ್ನು ಪೂರೈಸಲು ಹಲವು ಸಂಸ್ಥೆಗಳು ಮುಂದಾಗಿವೆ. ಕೆನರಾಬ್ಯಾಂಕ್ ಮತ್ತು ಟಾಟಾ ಹಿಟಾಚಿ ಸಂಸ್ಥೆ ತಲಾ ಎರಡು ಸಾವಿರ ಬಾಟೆಲ್ಗಳನ್ನು ಒದಗಿಸುತ್ತಿವೆ. ಇದರ ಜೊತೆಗೆ ಹುಬ್ಬಳ್ಳಿ-ಧಾರವಾಡ ವೈನ್ ಅಸೋಸಿಯೇಷನ್ ಕೂಡ 10 ಲಕ್ಷ ಕುಡಿಯುವ ನೀರಿನ ಬಾಟೆಲ್ಗಳನ್ನು ಕೊಡುಗೆ ನೀಡುತ್ತಿದೆ.
ವರ್ಣರಂಜಿತ ಉತ್ಸವಕ್ಕೆ ವಿಶೇಷ ದೀಪಾಲಂಕಾರ ಮಾಡಲು ಹೆಸ್ಕಾಂ ಉಚಿತವಾಗಿ ವಿದ್ಯುತ್ ಪೂರೈಸುತ್ತಿದೆ. ವಿದ್ಯುತ್ ಜ್ಯೋತಿಯೊಂದಿಗೆ ಜ್ಞಾನದ ಜ್ಯೋತಿ ಬೆಳಗಲು ನೆರವಾಗಿದೆ. ಕ್ರೆಡೆಲ್ ಸಂಸ್ಥೆ ಆರ್ಥಿಕ ಸಹಾಯ ಮಾಡಿದರೆ ಕ್ರಡಾಯಿ ಸಂಸ್ಥೆ ಪ್ರತಿನಿಧಿಗಳಿಗೆ ವೆಲ್ಕಂ ಕಿಟ್ಗಳನ್ನು ಒದಗಿಸಿದೆ.
ಇದನ್ನೂ ಓದಿ: ಜ. 12ರಂದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗಿ
ಹುಬ್ಬಳ್ಳಿ-ಧಾರವಾಡ ಹೋಟೆಲ್ ಅಸೋಸಿಯೇಷನ್, ಪ್ರತಿನಿಧಿಗಳಿಗೆ ರಿಯಾಯಿತಿ ದರದಲ್ಲಿ ಕೊಠಡಿಗಳನ್ನು ಒದಗಿಸಿದ್ದು, ಚೇಂಬರ್ ಆಫ್ ಕಾಮರ್ಸ್ ಯುವ ಪ್ರತಿನಿಧಿಗಳು ನೆಲೆಸುತ್ತಿರುವ ಹಾಸ್ಟೆಲ್ಗಳಿಗೆ 1 ಸಾವಿರ ಬಕೆಟ್ಗಳನ್ನು ನೀಡಿದೆ. ಧಾರವಾಡದ ಅಕ್ವೇಸ್ ಪ್ರವೈಟ್ ಲಿಮಿಟೆಡ್ ಸ್ಮರಣಿಕೆಗಳನ್ನು, ಯುಫ್ಲೆಕ್ಸ್ ಲಿಮಿಟೆಡ್ 5000 ಯೋಗ ಮ್ಯಾಟ್ಗಳನ್ನು ಪೂರೈಸಿದೆ.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಪಾಲಿಕೆ, ಕೆ.ಎಂ.ಎಫ್ ಹುಬ್ಬಳ್ಳಿ, ಟಾಟಾ ಮೋಟರ್ಸ್, ಯುನಿಬೆಕ್ಸ್, ಯೂನಿಯನ್ ಬ್ಯಾಂಕ್, ಧಾರವಾಡ ಜಿಲ್ಲಾ ಕ್ರಷರ್ ಮಾಲೀಕರ ಸಂಘ ಮತ್ತು ಮಹಿಂದ್ರ ಸಂಸ್ಥೆ ಉದಾರವಾಗಿ ಧನ ಸಹಾಯ ಮಾಡಿವೆ. ವಿವಿಧ ಇಲಾಖೆಗಳು, ಸಿಬ್ಬಂದಿ, ಅಧಿಕಾರಿ ವರ್ಗ, ಒಟ್ಟಾರೆ ಜಿಲ್ಲಾಡಳಿತ ಒಂದಲ್ಲಾ ಒಂದು ರೀತಿಯಲ್ಲಿ ಯುವ ಜನೋತ್ಸವದ ಯಶಸ್ಸಿಗೆ ಸಹಕರಿಸುತ್ತಿದೆ.
ಗುರುದತ್ ಹೆಗಡೆ ಜಿಲ್ಲಾಧಿಕಾರಿ, ಧಾರವಾಡ:-
ಜನರ ಪಾಲ್ಗೊಳ್ಳುವಿಕೆಯಿಂದ ರಾಷ್ಟ್ರೀಯ ಯುವ ಜನೋತ್ಸವ ಆಚರಿಸಲಾಗುತ್ತಿದ್ದು, ಹುಬ್ಬಳ್ಳಿ-ಧಾರವಾಡ ಜನತೆ ದೇಶಕ್ಕೆ ಮಾದರಿಯಾಗಿದ್ದಾರೆ. ಯುವ ಜನೋತ್ಸವಕ್ಕೆ ಸಂತೋಷದಿಂದ ದೇಣಿಗೆ, ನೆರವು, ಪ್ರಾಯೋಜಕತ್ವ ಒದಗಿಸಿರುವುದು ಹೆಮ್ಮೆ ತಂದಿದೆ. ಇವರೆಲ್ಲರ ಅಭಿಮಾನಕ್ಕೆ ಜಿಲ್ಲಾಡಳಿತ ಋಣಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Tue, 10 January 23