ಧಾರವಾಡ ಉಪನೋಂದಣಾಧಿಕಾರಿ ಕಚೇರಿಯಲ್ಲಿ 1500 ಕೋಟಿ ರೂ ಆಸ್ತಿಗಳ ಖರೀದಿ: ಕಪ್ಪು ಹಣ ಬಳಕೆಯಾಗಿದೆಯಾ?

| Updated By: ಸಾಧು ಶ್ರೀನಾಥ್​

Updated on: Feb 02, 2024 | 4:26 PM

Dharwad Sub Registrar: ಆದಾಯ ತೆರಿಗೆ ಇಲಾಖೆ ಎಲ್ಲಿಯೇ ಕಾಲಿಡಲಿ ಅಲ್ಲಿ ಅಕ್ರಮ ಆದಾಯದ ವಾಸನೆ ಇದ್ದೇ ಇರುತ್ತದೆ ಎನ್ನಬಹುದು. ಸದ್ಯ ಉಪನೋಂದಣಿ ಕಚೇರಿಯ ಈ ಪ್ರಕರಣವನ್ನು ನೋಡಿದಾಗ ಧಾರವಾಡದಲ್ಲಿಯೂ ಆಸ್ತಿ ಖರೀದಿಗಳಲ್ಲಿ ಕಪ್ಪು ಹಣ ಬಳಕೆಯಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಆದರೆ, ಅಧಿಕಾರಿಗಳು ಮಾತ್ರ ಹಾಗೇನೂ ಇಲ್ಲ ಎನ್ನುತ್ತಿದ್ದು, ಸಂಪೂರ್ಣ ತನಿಖೆ ಮುಗಿದ ಬಳಿಕವೇ ಸತ್ಯಾಸತ್ಯತೆ ಗೊತ್ತಾಗಲಿದೆ.

ಧಾರವಾಡ ಉಪನೋಂದಣಾಧಿಕಾರಿ ಕಚೇರಿಯಲ್ಲಿ 1500 ಕೋಟಿ ರೂ ಆಸ್ತಿಗಳ ಖರೀದಿ: ಕಪ್ಪು ಹಣ ಬಳಕೆಯಾಗಿದೆಯಾ?
ಧಾರವಾಡ ಸಬ್​ರಿಜಿಸ್ಟ್ರಾರ್​​​ ಕಚೇರಿಯಲ್ಲಿ 1500 ಕೋಟಿ ರೂ ಆಸ್ತಿ ಖರೀದಿ: ಕಪ್ಪುಹಣ ಬಳಕೆ?
Follow us on

ಆದಾಯ ಮೀರಿದ ಅಕ್ರಮ ಆಸ್ತಿ ಗಳಿಕೆ, ಆದಾಯ ತೆರಿಗೆ ವಂಚನೆ ಮಾಡಿದಾಗ ಆದಾಯ ತೆರಿಗೆ ಇಲಾಖೆ ದಾಳಿ ಮಾಡೋದು ಇಲ್ಲವೇ ನೋಟಿಸ್ ನೀಡಿ ವಿಚಾರಣೆ ಮಾಡುವುದು ಸಾಮಾನ್ಯ. ಆದರೆ, ಆದಾಯಕ್ಕೆ ಸಂಬಂಧವೇ ಇಲ್ಲದ ಸರ್ಕಾರಿ ಕಚೇರಿವೊಂದರ ಮೇಲೆ (Dharwad Sub Registrar) ಧಾರವಾಡದಲ್ಲೀಗ ( Dharwad) ಆದಾಯ ತೆರಿಗೆ ಇಲಾಖೆ (income tax) ದಾಳಿ ಮಾಡಿದ್ದಲ್ಲದೆ ಇದೀಗ ಆ ಕಚೇರಿ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಷ್ಟೇ ಅಲ್ಲ, ಸಾವಿರಾರು ಕೋಟಿ ವಹಿವಾಟಿನ ಆಸ್ತಿ (property) ಖರೀದಿ ಪತ್ರಗಳನ್ನ ವಶಪಡಿಸಿಕೊಂಡಿದೆ. ಹಾಗಾದರೆ ಆ ಇಲಾಖೆ ಯಾವುದು ಅನ್ನೋದರ ವರದಿ ಇಲ್ಲಿದೆ.

ಆಸ್ತಿ ಖರೀದಿ ವ್ಯವಹಾರಗಳಲ್ಲಿ ಖರೀದಿಯ ಮೊತ್ತ 30 ಲಕ್ಷ ಮೀರಿದ್ದಾಗಿದ್ದರೆ ಅದರ ಬಗ್ಗೆ ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರಬೇಕು ಎನ್ನುವ ನಿಯಮವಿದೆ. ಆದರೆ, ಧಾರವಾಡದ ಉಪನೋಂದಣಾಧಿಕಾರಿ ಕಚೇರಿ 2018ರಿಂದ ಇಲ್ಲಿಯವರೆಗೆ ಅಂತಹ ಸೇಲ್‌ ಡೀಡ್‌ಗಳ ಮಾಹಿತಿಯನ್ನೇ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿಲ್ಲವಂತೆ. ಇತ್ತೀಚೆಗೆ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಖರೀದಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಪರಿಶೀಲನೆ ನಡೆಸಿದಾಗ ಈ ವಿಷಯ ಗಮನಕ್ಕೆ ಬಂದಿದೆ.

ರಾಜ್ಯದಲ್ಲಿ ಧಾರವಾಡ ಸೇರಿದಂತೆ ನಾಲ್ಕೈದು ಜಿಲ್ಲೆಗಳಲ್ಲಿ ಈಗ ಆದಾಯ ತೆರಿಗೆ ಇಲಾಖೆ ತೀವ್ರ ತಪಾಸಣೆ ನಡೆಸಿದೆ. ಬಲ್ಲ ಮೂಲಗಳ ಪ್ರಕಾರ ಧಾರವಾಡ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಇಲ್ಲಿಯವರೆಗೆ 1,500 ಕೋಟಿ ಮೌಲ್ಯದ 2600ಕ್ಕೂ ಹೆಚ್ಚು ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ. ಇಷ್ಟೆಲ್ಲ ನಡೆದಿರುವುದನ್ನು ನೋಡಿದರೆ, ಧಾರವಾಡದಲ್ಲಿಯೂ ಆಸ್ತಿ ಖರೀದಿಗಳಲ್ಲಿ ಕಪ್ಪು ಹಣ ಬಳಕೆಯಾಗುತ್ತಿದೆಯಾ ಎಂಬ ಸಂಶಯ ಮೂಡಿದೆ. ಇದೇ ಕಾರಣಕ್ಕೆ ಇದೀಗ ಜಿಲ್ಲಾಧಿಕಾರಿ ದಿವ್ಯ ಪ್ರಭು ಈ ಪ್ರಕರಣದ ಎಲ್ಲ ದಾಖಲೆಗಳನ್ನು ತಂದು ಕೊಡುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದಾರೆ.

ಧಾರವಾಡ ಉಪನೋಂದಣಿ ಕಚೇರಿ ಮೇಲೆ ಸದ್ಯಕ್ಕೆ ಐಟಿ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಆದಾಯ ತೆರಿಗೆ ಇಲಾಖೆ ಗುಪ್ತಚರ ಮತ್ತು ಅಪರಾಧ ತನಿಖಾ ವಿಭಾಗದ ಖಚಿತ ಮಾಹಿತಿ ಆಧರಿಸಿ ಸದ್ಯ ಪತ್ತೆಯಾಗಿರುವ ಸೇಲ್‌ ಡೀಡ್‌ಗಳಲ್ಲಿ ಬಳಕೆಯಾಗಿರುವ ಹಣದ ಮೂಲವನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಎಷ್ಟೋ ಜನ ಆದಾಯ ತೆರಿಗೆ ಪಾವತಿಸದೇ ಹಾಗೂ ಕಪ್ಪು ಹಣ ಬಳಕೆ ಮಾಡಿರುವ ಸಾಧ್ಯತೆಗಳೂ ಇದ್ದು, ಅದೆಲ್ಲವನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಲಾಗುತ್ತಿದೆ.

Also Read: ಆನೇಕಲ್​ ನಲ್ಲಿ ಫಲವತ್ತಾದ ಪಿತ್ರಾರ್ಜಿತ ಜಮೀನು 2005ರಲ್ಲಿ ನೋಟಿಫಿಕೇಶನ್​​: ಪ್ರಭಾವಿಗಳಿಗೆ ನೀಡಲು ಕೆಐಎಡಿಬಿ ಹುನ್ನಾರ ಆರೋಪ

2018-19 ರಿಂದ ಸುದೀರ್ಘ ಅವಧಿವರೆಗೆ 30 ಲಕ್ಷ ರೂಪಾಯಿ ಮೇಲ್ಪಟ್ಟ ಖರೀದಿಗಳ ಮಾಹಿತಿಯನ್ನು ಐಟಿ ಇಲಾಖೆಗೆ ಸಲ್ಲಿಸದೇ ಇರುವುದು ಕೂಡ ಧಾರವಾಡ ಉಪನೋಂದಣಿ ಕಚೇರಿ ಮೇಲೆ ಹಲವು ಅನುಮಾನ ಮೂಡಲು ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಉಪನೋಂದಣಾಧಿಕಾರಿ ಲಕ್ಷ್ಮೀಕಾಂತ ಲಕ್ಕೊಂಡ ಪ್ರತಿಕ್ರಿಯೆ ನೀಡಿದ್ದು, ಪ್ರತಿವರ್ಷವೂ 30 ಲಕ್ಷ ಮೇಲ್ಪಟ್ಟ ಖರೀದಿಗಳ ಮಾಹಿತಿಯನ್ನು ಐಟಿ ಇಲಾಖೆಗೆ ಫೈಲ್ ಮಾಡುತ್ತ ಬಂದಿರುತ್ತೇವೆ. ಸಲ್ಲಿಕೆಯಾದ ಫೈಲ್‌ಗಳ ಅಪ್ಲೋಡ್‌ನಲ್ಲಿ ಕೆಲವೊಂದು ಲೋಪದೋಷಗಳಾಗಿವೆ. ಅವುಗಳನ್ನು ಸರಿಪಡಿಸುವ ಸಲುವಾಗಿ ಐಟಿ ಇಲಾಖೆ ಅಧಿಕಾರಿಗಳು ಬಂದು ತಪಾಸಣೆ ನಡೆಸಿದ್ದಾರೆ. ಲೋಪದೋಷ ಸರಿಪಡಿಸಲು 20 ದಿನಗಳ ಕಾಲಾವಕಾಶ ಕೂಡ ಕೊಟ್ಟಿದ್ದಾರೆ ಅನ್ನುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ