
ಹುಬ್ಬಳ್ಳಿ, (ಆಗಸ್ಟ್ 19): ಹುಬ್ಬಳ್ಳಿ-ಧಾರವಾಡ (Hubballi-Dharwad), ಬೆಳಗಾವಿ (Belagavi) ಸೇರಿದಂತೆ ಉತ್ತರ ಕರ್ನಾಟಕದ ಪ್ರಯಾಣಿಕರಿಗಾಗಿ ಇಂಡಿಗೋ ಏರ್‌ಲೈನ್ಸ್ (Indigo Airlines) ಸಂಸ್ಥೆ ದೆಹಲಿ-ಹುಬ್ಬಳ್ಳಿ ಮತ್ತು ದೆಹಲಿ-ಬೆಳಗಾವಿ ಮಧ್ಯೆ ಪ್ರತಿನಿತ್ಯ ವಿಮಾನ ಸೇವೆ ಆರಂಭಿಸುವ ಸಿಹಿ ಸುದ್ದಿ ನೀಡಿದೆ.ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಡಿಗೋ ಏರ್‌ಲೈನ್ಸ್ ಅಕ್ಟೋಬರ್ 1ರಿಂದಲೇ ಪ್ರತಿದಿನ ವಿಮಾನ ಸಂಚಾರ ಆರಂಭಿಸುವುದಾಗಿ ಪ್ರಕಟಿಸಿದೆ. ಈ ಮೂಲಕ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ ನೀಡಿದೆ.
ಈ ಮಹಾನಗರಗಳ ಪ್ರಯಾಣಿಕರ ಅನುಕೂಲ ಹಾಗೂ ಜನರ ಬೇಡಿಕೆ ಗಮನದಲ್ಲಿಟ್ಟುಕೊಂಡು ಸಚಿವ ಪ್ರಲ್ಹಾದ ಜೋಶಿ ಅವರು ದೆಹಲಿ-ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ನಡುವೆ ದೈನಂದಿನ ವಿಮಾನ (ಪ್ರತಿ ದಿನ) ಸೇವೆ ಆರಂಭಿಸುವಂತೆ ಇತ್ತೀಚೆಗೆ ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳ ಗಮನ ಸೆಳೆದಿದ್ದರು. ಸಚಿವರ ಮನವಿಗೆ ತ್ವರಿತ ಸ್ಪಂದನೆ ನೀಡಿರುವ ಇಂಡಿಗೋ ಸಂಸ್ಥೆ ಅಕ್ಟೋಬರ್ 1ರಿಂದಲೇ ಪ್ರತಿದಿನ ದೆಹಲಿ–ಹುಬ್ಬಳ್ಳಿ ಹಾಗೂ ದೆಹಲಿ–ಬೆಳಗಾವಿ ಮಧ್ಯೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ತಿಳಿಸಿದೆ.
ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ. ✈️
ಪ್ರಯಾಣಿಕರ ಅನುಕೂಲ ಹಾಗೂ ಜನರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ- ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ನಡುವೆ ದೈನಂದಿನ ವಿಮಾನ ( ಪ್ರತಿ ದಿನ) ಸೇವೆಗಳನ್ನು ಆರಂಭಿಸುವಂತೆ ಇತ್ತೀಚೆಗೆ ಇಂಡಿಗೋ ಏರ್‌ಲೈನ್ಸ್ @IndiGo6E ಅಧಿಕಾರಿಗಳೊಂದಿಗೆ ಮನವಿ ಮಾಡಿದ್ದೆ.… pic.twitter.com/X5kLHwHMsn— Pralhad Joshi (@JoshiPralhad) August 19, 2026
ಇನ್ನು ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದು, ಪ್ರತಿ ದಿನವೂ ವಿಮಾನ ಸಂಚಾರದಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರಗಳಲ್ಲಿ ವ್ಯಾಪಾರ, ಉದ್ಯೋಗ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ, ಸಂಪರ್ಕ ವ್ಯವಸ್ಥೆಯ ಬಲವರ್ಧನೆಗೆ ನಮ್ಮ ಪ್ರಯತ್ನ ನಿರಂತರವಾಗಿದೆ ಎಂದಿದ್ದಾರೆ.