ಧಾರವಾಡ: ವೃತ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಯುವ ಉತ್ಸಾಹಿ ಮುರುಗೇಶ ಚೆನ್ನಣ್ಣವರ್ ಇಲಾಖೆಯಲ್ಲಿ ಈಗಾಗಲೇ ತಮ್ಮದೇ ಆದ ಗೌರವ ಹೊಂದಿದ್ದಾರೆ. ಸೈಕ್ಲಿಂಗ್, ಓಟ, ಈಜು ಸೇರಿದಂತೆ ವಿವಿಧ ವಿಭಾಗಗಲ್ಲಿ ಸಾಧನೆ ಮಾಡಿ, ಐರನ್ ಮ್ಯಾನ್ ಗೌರವ ಪಡೆದುಕೊಂಡಿದ್ದಾರೆ. ವೈಯಕ್ತಿಕವಾಗಿ ಸಾಕಷ್ಟು ಸಾಧನೆ ಮಾಡಿ ಇಲಾಖೆಯ ಹೆಸರನ್ನು ಕೂಡ ಹೆಚ್ಚಿಸಿದ್ದಾರೆ. ಇಂಥ ಇನ್ಸ್‌ಪೆಕ್ಟರ್ ಮುರುಗೇಶ ಚೆನ್ನಣ್ಣವರ್ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಲು ಈ ಹೊಸ ಸಾಹಸಕ್ಕೆ ಅವರು ಕೈ ಹಾಕಿದ್ದಾರೆ.
ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಅಭಿಯಾನ
ಪೊಲೀಸ್ ಇಲಾಖೆ ಎಂದರೆ ಬಿಡುವಿಲ್ಲದ ಹಾಗೂ ಒತ್ತಡದ ಕೆಲಸ ಅನ್ನುವುದು ಎಲ್ಲರಿಗೂ ಗೊತ್ತು. ಇಂಥ ಕೆಲಸಗಳ ನಡುವೆಯೂ ಸದಾ ಉತ್ಸಾಹಿಯಾಗಿರುವ ಮುರುಗೇಶ ಚೆನ್ನಣ್ಣವರ್, ಇತ್ತೀಚಿನ ದಿನಗಳಲ್ಲಿ ದೇಶವನ್ನು ಕಾಡುತ್ತಿರುವ ಡ್ರಗ್ಸ್ ಸೇವನೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಸೈಕಲ್ ಮೇಲೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರಯಾಣ ಮಾಡಲಿದ್ದಾರೆ. ಸದ್ಯ ಹುಬ್ಬಳ್ಳಿಯ ಹೆಸ್ಕಾಂನಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಮುರುಗೇಶ ಚನ್ನಣ್ಣನವರ್ ಅವರೊಂದಿಗೆ ಸದಾನಂದ ಕೂಡ ಸೈಕಲ್ ತುಳಿಯಲಿದ್ದಾರೆ .
ಅಕ್ಟೋಬರ್ 27 ರಿಂದ ಯಾತ್ರೆ ಆರಂಭ
ಮೊದಲಿಗೆ ವೈಷ್ಟೋದೇವಿಯ ದರ್ಶನ ಪಡೆದುಕೊಂಡು, ಬಳಿಕ ಅಕ್ಟೋಬರ್ 27 ರಿಂದ ಕಾಶ್ಮೀರದಿಂದ ಸೈಕಲ್ ಯಾತ್ರೆ ಆರಂಭವಾಗುತ್ತದೆ. ಸುಮಾರು 3700 ಕಿ.ಮೀ. ಈ ಯಾತ್ರೆ ಕನ್ಯಾಕುಮಾರಿಯವರೆಗೆ ಮುಗಿಯಲಿದೆ. ಒಟ್ಟು 20 ದಿನಗಳ ಪ್ರವಾಸ ಇದಾಗಿರಲಿದೆ. ಯಾತ್ರೆಯುದ್ದಕ್ಕೂ ದೇಶದಲ್ಲಿ ಇತ್ತೀಚಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರೋ ಡ್ರಗ್ಸ್ ಸೇವನೆಯಿಂದಾಗುವ ಹಾನಿ ಬಗ್ಗೆ ಮತ್ತು ಕೊರೊನಾದಿಂದ ರಕ್ಷಿಸಿಕೊಳ್ಳುವ ಕುರಿತಾದ ಜಾಗೃತಿಯನ್ನು ಮೂಡಲಾಗುತ್ತದೆ.
ಗಣೇಶನಿಗೆ ಪೂಜೆ ಸಲ್ಲಿಸಿ ಕಾಶ್ಮೀರದತ್ತ ಪಯಣ
ನಗರದ ಕೆಸಿಡಿ ಗಣಪತಿ ದೇವಸ್ಥಾನದ ಮುಂದೆ ಕಾರಿಗೆ ಪೂಜೆ ಸಲ್ಲಿಸಿ ಇಬ್ಬರನ್ನು ಕಳಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಚೆನ್ನಣ್ಣವರ್ ಕುಟುಂಬಸ್ಥರು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಯಾತ್ರೆಯುದ್ದಕ್ಕೂ ಸೈಕಲ್ ಪಟುಗಳಿಗೆ ಅವಶ್ಯಕವಾಗಿರುವ ವಸ್ತುಗಳನ್ನು ಕೂಡ ಕಳಿಸಲಾಯಿತು.
ಸಾಮಾಜಿಕ ಜವಾಬ್ದಾರಿ ಮೆರೆದ ಇನ್ಸ್‌ಪೆಕ್ಟರ್ ಚೆನ್ನಣ್ಣವರ್
ಸಮಾಜದಲ್ಲಿ ಪೊಲೀಸ್ ವೃತ್ತಿ ಅಷ್ಟೇ ನಮ್ಮ ಕೆಲಸವಲ್ಲ. ಅದರೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಕೂಡ ತೋರಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಈ ಜಾಗೃತಿ ಅಭಿಯಾನವನ್ನು ಕೈಗೊಂಡಿರೋದಾಗಿ ಮುರುಗೇಶ ಚೆನ್ನಣ್ಣವರ್ ಟಿವಿ9 ಡಿಜಿಟಲ್ಗೆ ಪ್ರತಿಕ್ರಿಯಿಸಿದ್ದಾರೆ.
ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ-9, ಧಾರವಾಡ
ಇದನ್ನೂ ಓದಿ: ಧಾರವಾಡ ಮೂಲದ ಪೈಲ್ವಾನ್ ರಫೀಕ್ ಹೊಳಿ: ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಗ್ರಾಮೀಣ ಪ್ರತಿಭೆ
Published On - 9:22 am, Thu, 28 October 21