ಧಾರವಾಡ ಮೂಲದ ಪೈಲ್ವಾನ್ ರಫೀಕ್ ಹೊಳಿ: ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಗ್ರಾಮೀಣ ಪ್ರತಿಭೆ
Dharwad News: ತೀರಾ ಬಡ ಮನೆತನದಲ್ಲಿ ಹುಟ್ಟಿ ಬೆಳೆದ ಆ ಕುಸ್ತಿಪಟುವಿನ ಹೆಸರು ರಫೀಕ್ ಹೊಳಿ. ಕೃಷಿ ಕೂಲಿಕಾರರ ಮನೆಯಲ್ಲಿ ಜನಿಸಿ, ಇಂದು ಇಡೀ ದೇಶದಲ್ಲಿಯೇ ಕುಸ್ತಿಯಲ್ಲಿ ಹೆಸರು ಮಾಡಿರುವ ರಫೀಕ್ ಹೊಳಿ ಕುಸ್ತಿಪಟುಗಳ ಪಾಲಿನ ಹೀರೋ ಆಗಿದ್ದಾರೆ.
ಧಾರವಾಡ: ಈ ಊರಿನ ಹೆಸರು ಕೇಳಿದ ಕೂಡಲೇ ಫೇಡಾ ನೆನಪಿಗೆ ಬರುತ್ತದೆ. ಅಷ್ಟೇ ಅಲ್ಲ ಧಾರವಾಡಕ್ಕೆ ವಿದ್ಯಾಕಾಶಿ ಅಂತಾನೂ ಕರೆಯುತ್ತಾರೆ. ಇದೀಗ ಇಂಥ ಧಾರವಾಡ ಬೇರೆ ಬೇರೆ ಕಾರಣಗಳಿಗೂ ಹೆಸರು ಪಡೆಯುತ್ತಿದೆ. ಅದರಲ್ಲೂ ಧಾರವಾಡ ಮೂಲದ ಕುಸ್ತಿಪಟುವೊಬ್ಬರು ರಾಷ್ಟ್ರ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ತೀರಾ ಬಡ ಮನೆತನದಲ್ಲಿ ಹುಟ್ಟಿ ಬೆಳೆದ ಆ ಕುಸ್ತಿಪಟುವಿನ ಹೆಸರು ರಫೀಕ್ ಹೊಳಿ. ಕೃಷಿ ಕೂಲಿಕಾರರ ಮನೆಯಲ್ಲಿ ಜನಿಸಿ, ಇಂದು ಇಡೀ ದೇಶದಲ್ಲಿಯೇ ಕುಸ್ತಿಯಲ್ಲಿ ಹೆಸರು ಮಾಡಿರುವ ರಫೀಕ್ ಹೊಳಿ ಕುಸ್ತಿಪಟುಗಳ ಪಾಲಿನ ಹೀರೋ ಆಗಿದ್ದಾರೆ.
ಹಳ್ಳಿಯಿಂದ ದಿಲ್ಲಿಯವರೆಗೆ ರಫೀಕ್ ಪ್ರಯಾಣ ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಫೀಕ್ ಹೊಳಿ ಅವರಿಗೆ ಮೊದಲಿನಿಂದಲೂ ಕುಸ್ತಿ ಎಂದರೆ ಪಂಚಪ್ರಾಣ. ತಂದೆ ರಾಜಾಸಾಬ ಮತ್ತು ತಾಯಿ ಫಾತಿಮಾ ಕೃಷಿ ಕೂಲಿ ಮಾಡಿ ಜೀವನ ಸಾಗಿಸಿದವರು. ಈ ದಂಪತಿಯ ಕೊನೆಯ ಮಗ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಧಾರವಾಡದ ಸರಕಾರಿ ಶಾಲೆಯಲ್ಲಿ ಮುಗಿಸಿದ ರಫೀಕ್ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೆಳಗಾವಿಯಲ್ಲಿ ಮುಗಿಸಿದರು. ಬಳಿಕ ದಾವಣಗೇರಿಯಲ್ಲಿ ಪಿಯುಸಿ ಮುಗಿಸಿ ರಫೀಕ್ ಅಷ್ಟೊತ್ತಿಗೆ ಕುಸ್ತಿಯಲ್ಲಿ ಪರಿಣಿತಿಯನ್ನು ಹೊಂದಿದ್ದರು. ಇದೇ ವೇಳೆ ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಜ್ಯೂನಿಯರ್ ನ್ಯಾಷನಲ್ ರಸ್ಲಿಂಗ್ ಚಾಂಪಿಯನ್ ಶಿಪ್ ನಡೆದಿತ್ತು. ಅದರಲ್ಲಿ ಭಾಗವಹಿಸಿದ ರಫೀಕ್ ಚಿನ್ನದ ಪದಕವನ್ನು ಬೇಟೆಯಾಡಿದರು. ಆಗಲೇ ಎಲ್ಲರಿಗೂ ಗೊತ್ತಾಗಿದ್ದು ರಫೀಕ್ ಹೊಳಿ ಅನ್ನುವ ಹಳ್ಳಿ ಹುಡುಗ ಬಳಿ ಅದೆಂಥಾ ಪ್ರತಿಭೆ ಇದೆ ಅನ್ನೋದು. ಬಳಿಕ ಏಷಿಯನ್ ಜ್ಯೂನಿಯರ್ ಚಾಂಪಿಯನ್ ಶಿಪ್ ಆಡಿದರು. ಇವರ ಪ್ರತಿಭೆಯನ್ನು ಕಂಡ ಭಾರತೀಯ ಸೇನೆ ಇವರನ್ನು ಸೈನಿಕನನ್ನಾಗಿ ನೇಮಕ ಮಾಡಿಕೊಂಡಿತು. ಬಳಿಕ ಸೇನೆಯಲ್ಲಿ ಭೋಪಾಲ್ ನಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ರಫೀಕ್ ಆ ವೇಳೆ ಸೇನೆಯ ಎಲ್ಲ ತರಬೇತಿಯನ್ನು ಮುಗಿಸಿಕೊಂಡರು. ಇದೇ ವೇಳೆ ಜ್ಯೂನಿಯರ್ ನ್ಯಾಷನಲ್ ಟ್ರೈಲರ್ ರಸ್ಲಿಂಗ್ ನಡೆದಿತ್ತು. ಅದರಲ್ಲಿ ಭಾಗವಹಿಸಿದ ರಫೀಕ್ ಮೊದಲನೇ ಸ್ಥಾನ ಪಡೆದುಕೊಂಡರು. ಇದನ್ನು ಗಮನಿಸಿದ ಭಾರತೀಯ ಸೇನೆ 2011 ರಲ್ಲಿ ಪೂನಾದಲ್ಲಿರುವ ತನ್ನ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ (ಎ.ಎಸ್.ಐ) ಗೆ ಇವರನ್ನು ವರ್ಗ ಮಾಡಿತು. ಅಲ್ಲಿಂದ ರಫೀಕ್ ಹೊಳಿಯವರ ಬದುಕು ಆನೆ ನಡೆದದ್ದೇ ದಾರಿ ಅನ್ನುವಂತಾಯಿತು.
ಮನೆಯಲ್ಲಿಯೇ ಸಿಕ್ಕಿತ್ತು ಕುಸ್ತಿ ತರಬೇತಿ ಅಷ್ಟಕ್ಕೂ ರಫೀಕ್ ಹೊಳಿ ಅವರು ಕುಸ್ತಿ ತರಬೇತಿ ಪಡೆದಿದ್ದು ಮನೆಯಿಂದಲೇ. ಏಕೆಂದರೆ ಅವರ ತಂದೆ ರಾಜಾಸಾಬ್ ಒಳ್ಳೆಯ ಕುಸ್ತಿಪಟು ಆಗಿದ್ದರು. ಇನ್ನು ಇಬ್ಬರು ಅಣ್ಣಂದಿರು ಕೂಡ ಒಳ್ಳೆಯ ಕುಸ್ತಿಪಟುಗಳೇ. ಅಲ್ಲದೇ ಹುಟ್ಟಿದೂರು ಶಿಂಗನಹಳ್ಳಿ ಗ್ರಾಮದಲ್ಲಿ ಮನೆಗೊಬ್ಬರು ಪೈಲ್ವಾನರು ಇದ್ದಾರೆ. ಹೀಗಾಗಿ ಆರಂಭದಿಂದಲೂ ಕುಸ್ತಿಯಾಟ ರಫೀಕ್ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಇದೇ ವೇಳೆ ರಫೀಕ್ ಅಣ್ಣ ರೆಹಮಾನ್ ಹೊಳಿ ಸಹೋದರನಿಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ತರಬೇತಿಯಿಂದ ಹಿಡಿದು ಕುಸ್ತಿಗೆ ಬೇಕಾಗಿರುವ ಎಲ್ಲ ಸೌಲಭ್ಯಗಳ ವ್ಯವಸ್ಥೆ ಮಾಡಿದರು. ಇದರಿಂದಾಗಿ ರಫೀಕ್ ಹೊಳಿ ಅವರಿಗೆ ಕುಸ್ತಿಯಾಟದ ಮೇಲೆ ಸಾಕಷ್ಟು ಹಿಡಿತ ಬಂತು.
ಪೂನಾದ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ ನಲ್ಲಿ ಕುಸ್ತಿಪಟು ಹಲವಾರು ಕುಸ್ತಿ ಪಂದ್ಯಗಳನ್ನಾಡಿರೋ ರಫಿಕ್ ರಾಜ್ಯಕ್ಕೆ ಹಾಗೂ ದೇಶಕ್ಕೆ ಸಾಕಷ್ಟು ಹೆಸರು ತಂದಿದ್ದಾರೆ. ಇದುವರೆಗೂ ರಫೀಕ್ ಹತ್ತು ರಾಷ್ಟ್ರೀಯ ಮಟ್ಟದ ಪದಕಗಳನ್ನು ಪಡೆದಿದ್ದರೆ, ಆರು ಅಂತಾರಾಷ್ಟ್ರೀಯ ಪದಕಗಳನ್ನು ಬಾಚಿಕೊಂಡಿದ್ದಾರೆ. ಇನ್ನು 2016 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಪಡೆಯೋ ಮೂಲಕ ದೇಶಕ್ಕೆ ಹೆಸರು ತಂದಿದ್ದರು. ಇಂಥ ರಫಿಕ್ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ.
ಇಂಟರ್ ಸರ್ವಿಸಸ್ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಇತ್ತೀಚಿಗೆ ದೆಹಲಿಯಲ್ಲಿ ನಡೆದ ಇಂಟರ್ ಸರ್ವಿಸಸ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 77 ಕೆಜಿ ವಿಭಾಗದಲ್ಲಿ ರಫೀಕ್ ಹೊಳಿ 3 ನೇ ಸುತ್ತಿನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಈ ಕ್ರೀಡಾಕೂಟದಲ್ಲಿ ದೇಶದ ನಾನಾ ರಾಜ್ಯದ ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಮೊದಲ ಸುತ್ತಿನಲ್ಲಿ ಹರಿಯಾಣ ರಾಜ್ಯದ ಸೋನು ಅವರನ್ನ 8-2 ಪಾಯಿಂಟ್‌ಗಳಿಂದ ಸೋಲಿಸಿದರು. ಬಳಿಕ 2 ನೇ ಸುತ್ತಿನಲ್ಲಿ ದೆಹಲಿಯ ಮಂಜಿತ್ ಅವರನ್ನು 5-3 ಅಂಕಗಳಿಂದ ಸೋಲಿಸಿದರು. 3 ನೇ ಸುತ್ತಿನಲ್ಲಿ ಮಹಾರಾಷ್ಟ್ರದ ಶಿವಾಜಿ ಪಾಟೀಲ್ ಅವರನ್ನು 8-0 ಅಂಕಗಳಿಂದ ಸೋಲಿಸಿ ಬಂಗಾರದ ಪದಕವನ್ನು ಗೆದ್ದಿದ್ದಾರೆ. ಆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಸಾಮಾನ್ಯ ವ್ಯಕ್ತಿಯೊಬ್ಬ ಎಂಥ ಸಾಧನೆಯನ್ನು ಮಾಡಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.
ಚಿನ್ನದ ಪದಕವನ್ನು ತಾಯಿಗೆ ಸಮರ್ಪಿಸಿದ ರಫಿಕ್ ಕಳೆದ ವರ್ಷ ನಡೆದಿದ್ದ ಸೀನಿಯರ್ ನ್ಯಾಷನಲ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಬಂದಿತ್ತು. ಇದೇ ವೇಳೆ ರಫೀಕ್ ಗೆ ಗಂಡು ಮಗು ಹುಟ್ಟಿತ್ತು. ಈ ವೇಳೆ ತಾಯಿ ಬಳಿ ಮಾತನಾಡಿದ್ದ ರಫೀಕ್, ನಿನ್ನ ಮೊಮ್ಮಗನ ಕಾಲ್ಗುಣ ಎಷ್ಟು ಚೆನ್ನಾಗಿದೆ ನೋಡು. ಆತನ ಕೊರಳಲ್ಲಿ ಈ ಪದಕವನ್ನು ಹಾಕುತ್ತೇನೆ ಅಂದಿದ್ದರು. ಈ ವೇಳೆ ಮುಂದಿನ ವರ್ಷ ಚಿನ್ನದ ಪದಕ ಗೆಲ್ಲುತ್ತೀಯಾ ಅಂದಿದ್ದರಂತೆ. ತಾಯಿಯ ಆಶೀರ್ವಾದದಿಂದ ಈ ಪದಕ ಬಂದಿದೆ. ಆದರೆ ಆ ಪದಕವನ್ನು ನೋಡಲು ತಾಯಿಯೇ ಇಲ್ಲ. ಕಳೆದ ವರ್ಷವಷ್ಟೇ ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಮೃತಪಟ್ಟಿದ್ದರು. ಹೀಗಾಗಿ ಈ ಚಿನ್ನದ ಪದಕವನ್ನು ತಾಯಿಗೆ ಸಮರ್ಪಣೆ ಮಾಡಿರೋದಾಗಿ ರಫಿಕ್ ಹೊಳಿ ಭಾವುಕರಾಗಿ ನುಡಿಯುತ್ತಾರೆ.
ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಕನ್ನಡ, ಧಾರವಾಡ
ಇದನ್ನೂ ಓದಿ: ಧಾರವಾಡ: ಜಿಲ್ಲಾ ಕಸಾಪ ಚುನಾವಣೆಗೆ ನಿಯಮಬಾಹಿರ ಸ್ಪರ್ಧೆ; ಕೋರ್ಟ್ನಿಂದ ತಡೆಯಾಜ್ಞೆ
ಇದನ್ನೂ ಓದಿ: ಸ್ಮಾರ್ಟ್ ಸಿಟಿ ಯೋಜನೆ ಹುಬ್ಬಳ್ಳಿಗಷ್ಟೇ ಸೀಮಿತ ಆರೋಪ; ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನಿರ್ಮಿಸಲು ಆಗ್ರಹ