ಧಾರವಾಡ: ರಾಜ್ಯದಲ್ಲಿಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ದೊಡ್ಡದೆನ್ನುವ ಹಿರಿಮೆ ಹೊಂದಿದೆ. ಸುಮಾರು 12 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಅವಳಿ ನಗರಕ್ಕೆ ಸರಕಾರದಿಂದ ಸಿಗುವ ಅನುದಾನ ಅಷ್ಟಕ್ಕಷ್ಟೇ. ಅದರಲ್ಲೂ ಇದೀಗ ಅವಳಿ ನಗರಗಳ ಮಧ್ಯೆಯೇ ತಿಕ್ಕಾಟ ಶುರುವಾಗಿದೆ. ಏಕೆಂದರೆ ಸರಕಾರದಿಂದ ಬರುವ ಅನುದಾನ ಹಾಗೂ ವಿವಿಧ ಯೋಜನೆಗಳ ಸಿಂಹಪಾಲು ಹುಬ್ಬಳ್ಳಿಗೆ ಸೇರುತ್ತಿರುವುದೇ ಇದಕ್ಕೆ ಕಾರಣ. ಇದೀಗ ಜಾರಿಯಾಗುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಥೆಯಲ್ಲೂ ಅದೇ ಆಗಿದೆ ಎನ್ನುವುದು ಸ್ಥಳೀಯರ ಆರೋಪ.
ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಅತಿ ದೊಡ್ಡ ಅವಳಿ ನಗರ ಹುಬ್ಬಳ್ಳಿ-ಧಾರವಾಡ. ಸುಮಾರು 12 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಅವಳಿ ನಗರದ ನಡುವೆ ಒಂದು ಪಾಲಿಕೆ ಇದೆ. ಒಟ್ಟು 82 ಸದಸ್ಯ ಬಲ ಹೊಂದಿರುವ ಈ ಪಾಲಿಕೆಗೆ ಸರಕಾರದಿಂದ ಬರುವ ಅನುದಾನ ಅಷ್ಟಕ್ಕಷ್ಟೇ. ಘಟಾನುಘಟಿ ನಾಯಕರು ಇಲ್ಲಿದ್ದರೂ ಸರಕಾರದಿಂದ ಬರುವ ಅನುದಾನ ಮಾತ್ರ ಕಡಿಮೆಯೇ. ಈ ಮಧ್ಯೆ ಅವಳಿ ನಗರದ ಜನರ ಮಧ್ಯೆಯೇ ಕೆಲವು ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲೂ ಧಾರವಾಡಕ್ಕೆ ಯಾವುದೇ ಯೋಜನೆಗಳೇ ಸಿಗುತ್ತಿಲ್ಲ ಎನ್ನುವುದು ಗಂಭೀರವಾದ ಆರೋಪ. ಇದಕ್ಕೆ ಉದಾಹರಣೆ ಅಂದರೆ ಇತ್ತೀಚಿಗೆ ಆರಂಭವಾಗಿರುವ ಸ್ಮಾರ್ಟ್ ಸಿಟಿ ಯೋಜನೆ. ಅವಳಿ ನಗರ ಈ ಯೋಜನೆಗೆ ಆಯ್ಕೆಯಾಗಿದ್ದರೂ ಈ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಕೇವಲ ಹುಬ್ಬಳ್ಳಿಗೆ ಸೀಮಿತವಾಗಿವೆ ಎನ್ನುವುದೇ ಇದೀಗ ಜಿಲ್ಲಾ ಕೇಂದ್ರವಾಗಿರುವ ಧಾರವಾಡದ ಜನರ ಅಸಮಾಧಾನ.
ಜಿಲ್ಲೆಯ ರಾಜಕೀಯ ಶಕ್ತಿ ಕೇಂದ್ರವೆಂದರೆ ಅದು ಹುಬ್ಬಳ್ಳಿ. ಜಿಲ್ಲೆಯ ಘಟಾನುಘಟಿ ನಾಯಕರು ವಾಸವಾಗಿರುವುದು ಹುಬ್ಬಳ್ಳಿಯಲ್ಲಿಯೇ. ಹೀಗಾಗಿ ಎಲ್ಲರೂ ಹುಬ್ಬಳ್ಳಿಗೆ ಪ್ರಾತಿನಿಧ್ಯ ಕೊಡಲು ಒತ್ತಡ ತರುತ್ತಾರೆ. ಧಾರವಾಡ ಜಿಲ್ಲಾ ಕೇಂದ್ರವಾಗಿದ್ದರೂ ಯಾವುದೇ ಯೋಜನೆಗಳಿಗೆ ಆಯ್ಕೆಯಾಗುವುದೇ ಇಲ್ಲ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಗಿದ್ದು ಕೂಡ ಇದೇ. ಹುಬ್ಬಳ್ಳಿಯ ಬಹುತೇಕ ಕಡೆಗಳಲ್ಲಿ ಈ ಯೋಜನೆಯಡಿ ಕೆಲಸ ನಡೆದಿದ್ದರೆ, ಧಾರವಾಡದ ಒಂದೇ ಒಂದು ಕಡೆಯಲ್ಲಿ ಈ ಯೋಜನೆಯಡಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಯೋಜನೆಗೆ ಆಯ್ಕೆಯಾಗಿದ್ದು ಹುಬ್ಬಳ್ಳಿ-ಧಾರವಾಡ ಅವಳಿ ನಗರವಾದರೂ ಈ ಯೋಜನೆ ಸೀಮಿತವಾಗಿದ್ದು ಹುಬ್ಬಳ್ಳಿ ನಗರಕ್ಕಷ್ಟೇ. ಇದೇ ವಿಚಾರ ಧಾರವಾಡ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಹೇಳೋದೇ ಬೇರೆ. ಸರಕಾರದ ಅನುದಾನಕ್ಕೆ ಯಾವುದೇ ಕೊರತೆ ಇಲ್ಲ. ಅಲ್ಲದೇ ಧಾರವಾಡ ಬಗ್ಗೆ ನಿರ್ಲಕ್ಷ ಮಾಡಿಲ್ಲ ಎಂದು ವಿವರಣೆ ನೀಡಿದ್ದಾರೆ.
ಈ ಮಧ್ಯೆ ಧಾರವಾಡಕ್ಕೆ ಆಗುತ್ತಿರುವ ನಿರಂತರ ಅನ್ಯಾಯವನ್ನು ಖಂಡಿಸಿ ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ಮಾಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಪ್ರತ್ಯೇಕ ಪಾಲಿಕೆಗೆ ಆಗ್ರಹಿಸಿ ಧಾರವಾಡದ ಲೇಖಕರು ಮತ್ತು ಚಿಂತಕರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲು ಚಿಂತನೆ ನಡೆಸಿದ್ದಾರೆ. ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ, ಎರಡೂ ನಗರಗಳ ಅಭಿವೃದ್ಧಿ ದೃಷ್ಟಿಯಿಂದ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸಬೇಕು ಎಂದು ಕೋರಿ, ಈಗಾಗಲೇ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಗಿದೆ. ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿಯನ್ನು ಕೂಡ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಪ್ರತ್ಯೇಕ ಪಾಲಿಕೆ ನೀಡಿ ಎನ್ನುವ ಕೂಗು ಗಟ್ಟಿಯಾಗುತ್ತಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ದಾಖಲೆಯ ಆಸ್ತಿ ತೆರಿಗೆ ಸಂಗ್ರಹ!
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ: ಅಭ್ಯರ್ಥಿಗಳ ಆಯ್ಕೆಯಾಗಿ 5 ವಾರ; ಆದರೆ ಇನ್ನೂ ಸಿಕ್ಕಿಲ್ಲ ಅಧಿಕಾರ