ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ: ಅಭ್ಯರ್ಥಿಗಳ ಆಯ್ಕೆಯಾಗಿ 5 ವಾರ; ಆದರೆ ಇನ್ನೂ ಸಿಕ್ಕಿಲ್ಲ ಅಧಿಕಾರ

ಪಾಲಿಕೆಯ 82 ಸದಸ್ಯರ ಆಯ್ಕೆಗೆ ಸೆಪ್ಟೆಂಬರ್ 3 ರಂದು ಮತದಾನ ನಡೆದು 6 ರಂದು ಫಲಿತಾಂಶ ಪ್ರಕಟವಾಗಿತ್ತು. ವಾರದೊಳಗೆ ಚುನಾಯಿತ ಸದಸ್ಯರ ಹೆಸರು ರಾಜ್ಯ ಪತ್ರದಲ್ಲಿ ಪ್ರಕಟವಾಗಿ ಮೇಯರ್‌ - ಉಪ ಮೇಯರ್‌ ಆಯ್ಕೆ ಚುನಾವಣೆ ನಡೆದು ಪಾಲಿಕೆಯಲ್ಲಿ ಸದ್ಯ ಜನಪ್ರತಿನಿಧಿಗಳ ಆಡಳಿತ ಅಸ್ತಿತ್ವದಲ್ಲಿ ಇರಬೇಕಿತ್ತು. ಆದರೆ ಚುನಾವಣೆ ಮುಗಿದು ಇಷ್ಟು ದಿನಗಳಾದರೂ ಇಂದಿಗೂ ಅಧಿಕಾರಿಗಳ ಆಡಳಿತವೇ ಮುಂದುವರಿದಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ: ಅಭ್ಯರ್ಥಿಗಳ ಆಯ್ಕೆಯಾಗಿ 5 ವಾರ; ಆದರೆ ಇನ್ನೂ ಸಿಕ್ಕಿಲ್ಲ ಅಧಿಕಾರ
ಸಾಂಕೇತಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 13, 2021 | 9:07 AM

ಧಾರವಾಡ: ರಾಜ್ಯದ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಖ್ಯಾತಿಗೆ ಒಳಗಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆದಿತ್ತು. ಸೆಪ್ಟೆಂಬರ್ 6 ರಂದು ಫಲಿತಾಂಶವೂ ಪ್ರಕಟವಾಗಿತ್ತು. ಇದೆಲ್ಲಾ ಆಗಿ 5 ವಾರ ಕಳೆದರೂ ಇದುವರೆಗೂ ಮೇಯರ್-ಉಪ ಮೇಯರ್ ಆಯ್ಕೆ ಮಾತ್ರ ನಡೆದಿಲ್ಲ. ಈ ಮಧ್ಯೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ನಗರಾಭಿವೃದ್ಧಿ ಇಲಾಖೆಯು ಕರ್ನಾಟಕ ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳ ಹೆಸರು ಮತ್ತು ವಿಳಾಸವನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಇದರಿಂದ ಸದಸ್ಯರ ಆಯ್ಕೆಯನ್ನು ರಾಜ್ಯ ಸರ್ಕಾರ ಅಧಿಕೃತಗೊಳಿಸಿದಂತಾಗಿದೆ. ಮೇಯರ್ – ಉಪ ಮೇಯರ್‌ ಆಯ್ಕೆಯ ಚುನಾವಣೆಗೂ ಮೊದಲು ಪಾಲಿಕೆಗೆ ಚುನಾಯಿತರಾದವರ ಹೆಸರು ಗೆಜೆಟ್​ನಲ್ಲಿ ಪ್ರಕಟವಾಗಲೇಬೇಕು. ಇದೀಗ ಗೆಜೆಟ್‌ನಲ್ಲಿ ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಅಕ್ಟೋಬರ್ 3 ನೇ ವಾರ ಮೇಯರ್ – ಉಪ ಮೇಯರ್‌ ಆಯ್ಕೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್‌ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.

ನಗರಾಭಿವೃದ್ಧಿ ಇಲಾಖೆಯು ಕರ್ನಾಟಕ ರಾಜ್ಯ ಪತ್ರದಲ್ಲಿ ತಮ್ಮ ಹೆಸರು ಮತ್ತು ವಿಳಾಸವನ್ನು ಪ್ರಕಟಿಸಿರುವುದು ಪಾಲಿಕೆಯ ಬಹುತೇಕ ಸದಸ್ಯರಿಗೆ ಇದುವರೆಗೂ ತಿಳಿದಿಲ್ಲ. ಈ ಕುರಿತು ವಿಚಾರಿಸಿದಾಗ ಪಾಲಿಕೆ ಸದಸ್ಯರು ಇದೆಲ್ಲಾ ತಮ್ಮ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ. ಹು-ಧಾ ಮಹಾನಗರ ಪಾಲಿಕೆಗೆ 30 ತಿಂಗಳುಗಳಿಂದ ಚುನಾವಣೆ ನಡೆದಿರಲಿಲ್ಲ. ಇದೀಗ ಚುನಾವಣೆ ನಡೆದು 5 ವಾರ ದಾಟಿವೆ. ಆದರೆ ಅಧಿಕಾರ ಮಾತ್ರ ಸಿಕ್ಕಿಲ್ಲ ಎಂಬುದು ಆಯ್ಕೆಯಾಗಿರುವ ಸದಸ್ಯರ ಅಳಲು. ಮೇಯರ್‌ – ಉಪ ಮೇಯರ್‌ ಆಯ್ಕೆ ಚುನಾವಣೆಗೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ದಿನಾಂಕ ನಿಗದಿಪಡಿಸಬೇಕು. ಪಾಲಿಕೆಯ 82 ಸದಸ್ಯರ ಆಯ್ಕೆಗೆ ಸೆಪ್ಟೆಂಬರ್ 3 ರಂದು ಮತದಾನ ನಡೆದು 6 ರಂದು ಫಲಿತಾಂಶ ಪ್ರಕಟವಾಗಿತ್ತು. ವಾರದೊಳಗೆ ಚುನಾಯಿತ ಸದಸ್ಯರ ಹೆಸರು ರಾಜ್ಯ ಪತ್ರದಲ್ಲಿ ಪ್ರಕಟವಾಗಿ ಮೇಯರ್‌ – ಉಪ ಮೇಯರ್‌ ಆಯ್ಕೆ ಚುನಾವಣೆ ನಡೆದು ಪಾಲಿಕೆಯಲ್ಲಿ ಸದ್ಯ ಜನಪ್ರತಿನಿಧಿಗಳ ಆಡಳಿತ ಅಸ್ತಿತ್ವದಲ್ಲಿ ಇರಬೇಕಿತ್ತು. ಆದರೆ ಚುನಾವಣೆ ಮುಗಿದು ಇಷ್ಟು ದಿನಗಳಾದರೂ ಇಂದಿಗೂ ಅಧಿಕಾರಿಗಳ ಆಡಳಿತವೇ ಮುಂದುವರಿದಿದೆ.

ಅಧಿಕಾರಿಗಳು ಸದಸ್ಯರ ಮಾತನ್ನು ಕೇಳುತ್ತಿಲ್ಲ ಈ ಮುಂಚೆ 30 ತಿಂಗಳು ಚುನಾವಣೆ ನಡೆಸದಿರಲು ತಾಂತ್ರಿಕ ಕಾರಣಗಳಿದ್ದವು. ಆದರೆ ಇದೀಗ ಯಾವುದೇ ಕಾರಣವಿಲ್ಲದೇ ಇದ್ದರೂ ಮೇಯರ್-ಉಪ ಮೇಯರ್ ಆಯ್ಕೆ ನಡೆಯುತ್ತಿಲ್ಲ. ರಾಜ್ಯದ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಇದ್ದರೂ ಅದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹುಬ್ಬಳ್ಳಿಯವರೇ. ಆದರೂ ಈ ವಿಳಂಬ ಏಕೆ ಎಂಬುದು ಜನತೆಯ ಪ್ರಶ್ನೆಯಾಗಿದೆ. ಈಗಲೂ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂಬುದು ಪಾಲಿಕೆಗೆ ಚುನಾಯಿತರಾಗಿರುವ ಬಹುತೇಕ ಸದಸ್ಯರ ಅಭಿಪ್ರಾಯವಾಗಿದೆ.

ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಡಲು ಅಧಿಕಾರ ಬೇಕು ಅವಳಿ ನಗರದಲ್ಲಿ ಅನೇಕ ಸಮಸ್ಯೆಗಳಿವೆ. ಜನರು ಸಮಸ್ಯೆಗಳನ್ನು ತೆಗೆದುಕೊಂಡು ಸದಸ್ಯರ ಮುಂದೆ ಇಟ್ಟಾಗ ಆ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಲು ಸದಸ್ಯರಿಗೆ ಅಧಿಕಾರ ಇರಬೇಕು. ಈಗ ಸದಸ್ಯರು ಆಯ್ಕೆಯಾಗಿದ್ದರೂ ಅವರಿಗೆ ಅಧಿಕಾರ ಇಲ್ಲದಂತಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್), ಅಮೃತ ಯೋಜನೆಯ ಅನುದಾನದಡಿ ಕಾಮಗಾರಿಗಳು ನಡೆಯುತ್ತಿವೆ. ಪಾಲಿಕೆಯ ಸಾಮಾನ್ಯ ನಿಧಿಯಡಿ ಕೆಲಸ ಮಾಡಿಸುವುದು ದುಸ್ತರವಾಗಿದೆ. ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆ ಕೂಡ ಹದಗೆಟ್ಟು ಹೋಗಿದೆ. ಒಳಚರಂಡಿ ದುರಸ್ತಿ, ಸ್ವಚ್ಛತೆ, ರಸ್ತೆ ತಗ್ಗು-ಗುಂಡಿ ಮುಚ್ಚುವ ಕೆಲಸ ಸಾಕಷ್ಟು ವಿಳಂಬವಾಗುತ್ತಿದೆ. ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದ 31 ತಿಂಗಳುಗಳ ಅವಧಿಯು ಹು – ಧಾ ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ದೀರ್ಘವಾದದ್ದು . ಹಾಗಾಗಿ ಸಾಕಷ್ಟು ಕೆಲಸಗಳು ಆಗಬೇಕಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರ ವಿಶೇಷ ಅನುದಾನ ಪ್ರಕಟಿಸಬೇಕೆಂಬುದು ಜನತೆ ಹಾಗೂ ಚುನಾಯಿತ ಸದಸ್ಯರ ಆಗ್ರಹವಾಗಿದೆ.

ಶೀಘ್ರದಲ್ಲಿಯೇ ಮೇಯರ್-ಉಪಮೇಯರ್ ಆಯ್ಕೆ : ಶಂಕರ ಪಾಟೀಲ್ ಮುನೇನಕೊಪ್ಪ ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಶೀಘ್ರದಲ್ಲೇ ದಿನಾಂಕ ಘೋಷಣೆಯಾಗಲಿದೆ ಎನ್ನುತ್ತಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ ಹಿರಿಯ ವರದಿಗಾರ ಟಿವಿ9, ಧಾರವಾಡ

ಇದನ್ನೂ ಓದಿ:

 100 ಸಿಸಿ ಬೈಕ್​ನಲ್ಲಿ ಕಾಶ್ಮೀರಕ್ಕೆ ರೈಡ್; ಧಾರವಾಡದ ಯುವಕನಿಂದ ಕೊರೊನಾ ಜಾಗೃತಿ ಅಭಿಯಾನ

17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು